Advertisement -Home Add

ನಟ ದುನಿಯಾ ವಿಜಯ್ ವಿರುದ್ಧ ಎಫ್ ಐಆರ್ ದಾಖಲು

ಸಾರ್ವಜನಿಕರಿಗೆ ತೊಂದರೆ ಹಿನ್ನಲೆಯಲ್ಲಿ ಪ್ರಕರಣ ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ದಿನದಂದು ತಲ್ವಾರ್ ನಿಂದ ಕೇಕ್ ಕತ್ತರಿಸಿ ವಿವಾದಕ್ಕೀಡಾದ ಬೆನ್ನಲ್ಲೇ ಇದೀಗ ವಿಜಯ್ ವಿರುದ್ಧ ಮತ್ತೊಂದು ಅರೋಪ ಕೇಳಿಬಂದಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ದುನಿಯಾ ವಿಜಯ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ದುನಿಯಾ ವಿಜಯ್ ಜ.20ರಂದು ತಮ್ಮ 46ನೇ ಹುಟ್ಟುಹಬ್ಬದ ದಿನ ತಲ್ವಾರ್ ನಲ್ಲಿ ಕೇಕ್ ಕತ್ತರಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದರು. ಇದೇ ವೇಳೆ ಹುಟ್ಟುಹಬ್ಬದ ದಿನದಂದು ತಡರಾತ್ರಿ ವರೆಗೆ ಲೌಡ್ ಸ್ಪೀಕರ್ ಉಪಯೋಗಿಸಿ ಅಕ್ಕಪಕ್ಕದವರಿಗೆ ತೊಂದರೆ ಹಾಗೂ ಅನುತಿಯಿಲ್ಲದೇ ರಸ್ತೆಯಲ್ಲಿ ಪೆಂಡಾಲ್​ ಹಾಕಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದಾರೆ ಎಂದು ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ವಿಜಯ್ ವಿರುದ್ಧ ದೂರು ದಾಖಲಾಗಿತ್ತು. ತಲ್ವಾರ್ ನಿಂದ ಕೇಕ್ ಕತ್ತಿರಿಸಿದ ಬಗ್ಗೆ ಕಾರಣ ಕೇಳಿ ಅದಾಗಲೇ ಪೊಲೀಸರು ವಿಜಯ್ ಗೆ ನೋಟೀಸ್ ಜಾರಿ ಮಾಡಿದ್ದರು.

ಇದೀಗ ಶಸ್ತ್ರಾಸ್ತ್ರ ಕಾಯ್ದೆ ಪ್ರಕಾರ ಆಯುಧಗಳನ್ನು ಇಟ್ಟುಕೊಂಡ ಹಿನ್ನಲೆಯಲ್ಲಿ ಹಾಗೂ ಆರ್ಮ್ಸ್ ಆಕ್ಟ್ ಮತ್ತು 283 (ಸಾರ್ವಜನಿಕರ ಶಾಂತಿಗೆ ಭಂಗ ಮಾಡಿದ ಮತ್ತು ಅನುಮತಿ ಇಲ್ಲದೇ ರಸ್ತೆ ಬಂದ್ ಮಾಡಿದ) ಆರೋಪದಡಿ ಗಿರಿನಗರ ಪೊಲೀಸರು ವಿಜಯ್ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.