Kannada NewsKarnataka NewsLatestPolitics

*ಡಿಸಿಎಂ ಕನಸಿನ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡಕ್ಕೆ ಶಂಕುಸ್ಥಾಪನೆ; ರಾಜ್ಯದಲ್ಲಿ 2 ಸಾವಿರ ಶಾಲೆಗಳ ನಿರ್ಮಾಣ; ಸಂಸದ ಡಿ.ಕೆ.ಸುರೇಶ್*

ಪ್ರಗತಿವಾಹಿನಿ ಸುದ್ದಿ; ಕದೂರು: ಇದು ನಮ್ಮ ಸರ್ಕಾರ ಬಂದ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಸರ್ಕಾರಿ ಕಾರ್ಯಕ್ರಮ. ಮಕ್ಕಳ ಭವಿಷ್ಯ ರೂಪಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಕುದೂರು ಪಟ್ಟಣದಲ್ಲಿ ನೂತನ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಯಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್, ರಾಜ್ಯದಲ್ಲಿ ಸುಮಾರು 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುವುದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಕೂಸು. ಅದರ ಭಾಗವಾಗಿ ಕುದೂರುನಲ್ಲಿ ಸಿಎಸ್ಆರ್ ಸಹಯೋಗದಲ್ಲಿ ₹ 6 ಕೋಟಿ ವೆಚ್ಚದ ಶಾಲಾ ಕಟ್ಟಡ ನಿರ್ಮಾಣಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಹಾಗೂ ಅದರ ಕಾರ್ಮಿಕ ವರ್ಗಕ್ಕೆ ಜಿಲ್ಲೆಯ ಜನರ ಪರವಾಗಿ ಧನ್ಯವಾದ ಹೇಳುತ್ತೇನೆ.

ಶಿಕ್ಷಣ ಹಾಗೂ ಶಾಲೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ. ಈಗಿನ ಸಮಯದಲ್ಲಿ ಎಲ್ಲರೂ ಖಾಸಗಿ ಶಾಲೆಗಳತ್ತ ಮುಖ ಮಾಡಿರುವ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ, ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಆದಾಯದಲ್ಲಿ 2% ಹಣವನ್ನು ಸಾರ್ವಜನಿಕ ನಿಧಿಗೆ ಬಳಸಲು ಕಾಯ್ದೆ ರೂಪಿಸಿ ಸಿಎಸ್ಆರ್ ನಿಧಿಗೆ ಅವಕಾಶ ನೀಡಿದರು. ಆಮೂಲಕ ಕಾರ್ಪೊರೇಟ್ ಸಂಸ್ಥೆಗಳು ಸಾರ್ವಜನಿಕರ ಬದುಕಿನ ಹೊಣೆಗಾರಿಕೆ ಪಡೆಯುವಂತೆ ಮಾಡಿದ್ದಾರೆ.

ಮುಂದಿನ ಐದು ವರ್ಷಗಳಲ್ಲಿ ನಮ್ಮ ಜಿಲ್ಲೆಯಲ್ಲಿ 80 ಶಾಲೆಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ಈ ವರ್ಷ 20 ಶಾಲೆಗಳ ನಿರ್ಮಾಣಕ್ಕೆ ಕಾರ್ಯಕ್ರಮ ರೂಪಿಸಿದ್ದೇವೆ. ಇದರಿಂದ ಶಿಕ್ಷಣ ವ್ಯವಸ್ಥೆ ಬದಲಾವಣೆ ತರಲಾಗುವುದು.

ಸಾರ್ವಜನಿಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಅಸಡ್ಡೆ ಭಾವನೆ ಮೂಡಿದೆ. ಈ ಶಾಲೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿ ಹೊಸ ಸ್ವರೂಪ ನೀಡಲು ನಿರ್ಧರಿಸಿದ್ದೇವೆ. ಬೆಂಗಳೂರು ನಗರದ ಖಾಸಗಿ ಶಾಲೆಗಳಲ್ಲಿ ಸಿಗುವ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ಸಿಗುವಂತೆ ಮಾಡಲು ಮುಂದಾಗಿದ್ದೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ತಮ್ಮ ಕ್ಷೇತ್ರದಲ್ಲಿ 22 ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಈ ಶಾಲೆಗಳಲ್ಲಿ ಉತ್ತಮ ಶಿಕ್ಷಕರು, ಕಂಪ್ಯೂಟರ್, ಸೈನ್ಸ್, ಗಣಿತ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು.

ಟೊಯೋಟಾ ಸಂಸ್ಥೆ ಮುಂದಿನ 2 ವರ್ಷಗಳ ಯೋಜನೆ ರೂಪಿಸಿ ಜಿಲ್ಲೆಯ ನಾಲ್ಕು ತಾಲೂಕಿನಲ್ಲೂ ಒಂದೊಂದು ಶಾಲೆ ನಿರ್ಮಿಸಲು ಭರವಸೆ ನೀಡಿದ್ದಾರೆ. ಈ ನಾಲ್ಕು ಶಾಲೆಗಳ ಜಾಗ ಗುರುತಿಸಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಜಿಲ್ಲೆಯಲ್ಲಿ ಈ ವರ್ಷ ಆರಂಭವಾಗುವ 20 ಶಾಲೆಗಳ ಸ್ಥಳ ಹಾಗೂ ಯಾವ ಸಂಸ್ಥೆ ಇವುಗಳ ಜವಾಬ್ದಾರಿ ಹೊತ್ತಿವೆ ಎಂಬುದರ ಮಾಹಿತಿ ನೀಡುತ್ತೇವೆ.

ನಮ್ಮ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳನ್ನು ಮಾತ್ರ ಜಾರಿ ಮಾಡಿಲ್ಲ. ಶಿಕ್ಷಣ ಹಾಗೂ ಆರೋಗ್ಯ ಸುಧಾರಣೆಗೆ ಕಾಯಕಲ್ಪ ನೀಡುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಕುದೂರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಚಿಂತನೆ ಇಟ್ಟುಕೊಂಡಿದ್ದೇವೆ.

ಶಾಸಕ ಬಾಲಕೃಷ್ಣ ಅವರು ಈ ಪಂಚಾಯಿತಿಯನ್ನು ಪಟ್ಟಣ ಪಂಚಾಯ್ತಿ ಮಾಡಲು ಪ್ರಸ್ತಾವನೆ ಕಳುಹಿಸಿದ್ದಾರೆ. ಈ ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ವಿರೋಧ ಪಕ್ಷಗಳು ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಹಣ ಇಲ್ಲದೆ ದಿವಾಳಿಯಾಗುತ್ತಿದೆ ಎಂದು ಟೀಕೆ ಮಾಡುತ್ತಿವೆ. ಆದರೆ ರಾಜ್ಯದ ಜನ ಸಂತೋಷವಾಗಿದ್ದು, ವಿರೋಧ ಪಕ್ಷದ ನಾಯಕರು ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ಅವರ ಮಿದುಳಿಗೂ ನಾಲಿಗೆಗೂ ಸಂಪರ್ಕ ಕಡಿದಿರುವಂತೆ ಮಾತನಾಡುವ ಪರಿಸ್ಥಿತಿ ಬಂದಿದೆ.

ರಾಜ್ಯದಲ್ಲಿ 1.14 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಫಲಾನುಭವಿಯಾಗಿ ಹಣ ಪಡೆಯುತ್ತಿದ್ದಾರೆ. 1.42 ಕೋಟಿ ಕುಟುಂಬಗಳು 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಬಳಸುತ್ತಿದ್ದಾರೆ.

ನಾವು ಈ ಯೋಜನೆ ನೀಡಿದಾಗ ಯಾವುದೇ ಜಾತಿ, ಧರ್ಮ ನೋಡಿಲ್ಲ. ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ತುಂಬಿ ವ್ಯವಸ್ಥೆ ಬದಲಾವಣೆ ಮಾಡಬೇಕು ಎಂಬುದು ಈ ಸರ್ಕಾರದ ಗುರಿ. ಜನರ ಕೈಗೆ ಹಣ ನೀಡಿದರೆ ಎಲ್ಲರೂ ಸರಿಸಮನಾಗಿ ನಿಲ್ಲಲು ಸಾಧ್ಯ. ಅದಕ್ಕಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಈ ಯೋಜನೆಗಳನ್ನು ಜಾರಿ ಮಾಡಿದೆ.

ವಿರೋಧ ಪಕ್ಷಗಳು ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳುತ್ತಾರೆ. ನೀವು ಅಭಿವೃದ್ಧಿ ಬಗ್ಗೆ ಚಿಂತೆ ಮಾಡಬೇಡಿ. ನಿಮ್ಮಲ್ಲಿ ಆರಂಭವಾಗಿರುವ ಅಸ್ತಿತ್ವದ ಭಯದ ಬಗ್ಗೆ ಯೋಚಿಸಿ.

ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕವನ್ನು ದೇಶದಲ್ಲೇ ಅಭಿವೃದ್ಧಿಶೀಲ ರಾಜ್ಯಗಲ್ಲಿ ನಂಬರ್ ಒನ್ ಸ್ಥಾನಕ್ಕೆ ಈ ಸರ್ಕಾರ ತೆಗೆದುಕೊಂಡು ಹೋಗುತ್ತೇವೆ. ನಿಮ್ಮಹಾಗೆ ಸುಳ್ಳು ಹೇಳಿಕೊಂಡು ತಿರುಗುವ ಅವಶ್ಯಕತೆ ನಮಗಿಲ್ಲ. ಪ್ರತಿಯೊಬ್ಬರ ಭವಿಷ್ಯ ರೂಪಿಸಲು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ.

ಈವರೆಗೂ ಜನ ಬಸ್ ಹತ್ತುತ್ತಿರಲಿಲ್ಲ. ಚಾಲಕರು, ಕಂಡಕ್ಟರ್ ಗಳಿಗೆ ಸಂಬಳ ನೀಡಲು ಸಾರಿಗೆ ಸಂಸ್ಥೆಗಳಲ್ಲಿ ಹಣ ಇರಲಿಲ್ಲ. ಆದರೆ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಶಕ್ತಿ ಯೋಜನೆ ನಂತರ ಇವರಿಗೆ ಪ್ರತಿ ತಿಂಗಳು 5ನೆ ತಾರೀಕಿನ ಒಳಗೆ ಸಂಬಳ ಸಿಗುವಂತೆ ಮಾಡಲಾಗಿದೆ. ಈ ಸರ್ಕಾರ ಎಲ್ಲಾ ಲೆಕ್ಕಾಚಾರ ಹಾಕಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನ ಮಾಡಿದೆ ಎಂದು ಹೇಳಿದರು.

ಮಾಗಡಿಯಲ್ಲಿ ನೀರಾವರಿ ಕ್ಷೇತ್ರದಲ್ಲಿ ಬದಲಾವಣೆ ತರುತ್ತಿದ್ದೇವೆ. ಎಂಟು ವರ್ಷಗಳ ಹಿಂದೆ ರೇವಣ್ಣ ಅವರ ನೇತೃತ್ವದಲ್ಲಿ ಮಂಜೂರು ಮಾಡಿಸಿದ್ದ ನೀರಾವರಿ ಯೋಜನೆ ಜಾರಿ ಮಾಡಲು ಆಗಿರಲಿಲ್ಲ. ಆದರೆ ಇಂದು ಶಿವಕುಮಾರ್ ಅವರು ನೀರಾವರಿ ಸಚಿವರಾಗಿ ಈ ಯೋಜನೆ ಜಾರಿಗೆ ಮೂರು ಸಭೆ ಮಾಡಿದ್ದಾರೆ. ನಾನು ಈ ವಿಚಾರವಾಗಿ 16 ಸಭೆ ಮಾಡಿದ್ದು, ಮುಂದಿನ 3 ವರ್ಷಗಳಲ್ಲಿ ಈ ಯೋಜನೆ ಜಾರಿ ಮಾಡುತ್ತೇವೆ. ಬಿಜೆಪಿ ಸರ್ಕಾರ ನೀಡಿದ್ದ ತಡೆಯನ್ನು ನಿವಾರಿಸಿ ಟೆಂಡರ್ ಕರೆದು ಹೇಮಾವತಿಯಿಂದ ನೀರು ತರುತ್ತೇವೆ.

ಕೊಟ್ಟ ಮಾತಿನಂತೆ ನಡೆದು ರೈತರ ಕಷ್ಟಕ್ಕೆ ಸಹಕರಿಸಲು ನಾವು ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಐದು ಎಕರೆ ಪ್ರದೇಶದಲ್ಲಿ ಡಿಪ್ಲೋಮಾ ಕಾಲೇಜು ಆರಂಭಿಸುತ್ತಿದ್ದೇವೆ. ಇಲ್ಲಿನ ರೈತರು ಕೆಲವು ಅರ್ಜಿ ನೀಡಿದ್ದು, ಕೈಗಾರಿಕೆಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಉದ್ಯೋಗ ಸೃಷ್ಟಿಗೆ ಪ್ರಯತ್ನ ಮಾಡುತ್ತೇವೆ.

ಕಂದಾಯ ಗ್ರಾಮ ಘೋಷಣೆ, ಮುಂದಿನ ಒಂದು ವರ್ಷಗಳಲ್ಲಿ ಉಚಿತವಾಗಿ ಇ ಖಾತಾ ಹಂಚಿಕೆ ಮಾಡಲು ತೀರ್ಮಾನಿಸಿದ್ದೇವೆ. ಈಗಾಗಲೇ 84 ಗ್ರಾಮಗಳಿಗೆ ಸರ್ವೇ ನಂಬರ್ ಪೂರ್ಣಗೊಳಿಸಿದ್ದು, ಉಳಿದ ಗ್ರಾಮಗಳಲ್ಲೂ ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ.

ಕೆಂಪೇಗೌಡ ಹಾಗೂ ಶಿವಕುಮಾರ ಸ್ವಾಮೀಜಿಗಳ ಜನ್ಮಸ್ಥಳ ಅಭಿವೃದ್ಧಿ ಮಾಡುತ್ತೇವೆ. ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಿ ಹೆಚ್ಚಿನ ಜನರು ಆಗಮಿಸುವಂತೆ ಮಾಡುತ್ತೇವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button