ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆ ಅನಾಹುತದಲ್ಲಿ ಈವರೆಗೆ 38 ಜನರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿದ್ದಾರೆ.
ರಾಜ್ಯದ ಹವಾಮಾನ, ಮಳೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಇಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದರು. ಈವೇಳೆ ರಾಜ್ಯದಲ್ಲಿ ಮಳೆ ಹಾನಿ, ಮಳೆ ಕೊರತೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ರಾಜ್ಯದಲ್ಲಿ ಜೂನ್ ತಿಂಗಳಿನಲ್ಲಿ ಭಿಪರ್ ಜಾಯ್ ಚಂಡಮಾರುತದ ಕಾರಣದಿಂದಾಗಿ ಶೇ. 56 ರಷ್ಟು ಮಳೆ ಕೊರತೆ ಕಂಡು ಬಂತು. ಆದರೆ ಜುಲೈ ತಿಂಗಳಿನಲ್ಲಿ ಇಲ್ಲಿಯವರೆಗೆ ವಾಡಿಕೆ ಮಳೆ 228 ಮಿ.ಮೀ. ನಷ್ಟಿದೆ. ಆದರೆ ರಾಜ್ಯದಲ್ಲಿ 313 ಮಿ.ಮೀ. ಮಳೆ ಆಗಿದೆ. ಇದು ವಾಡಿಕೆ ಮಳೆಗಿಂತ ಶೇ. 37 ರಷ್ಟು ಹೆಚ್ಚಾಗಿದೆ.
ಜುಲೈ ತಿಂಗಳಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜೂನ್ ಅಂತ್ಯಕ್ಕೆ ಇದ್ದ ಮಳೆ ಕೊರತೆಯು ಕಡಿಮೆಯಾಗಿದೆ. ಮಳೆ ಕೊರತೆ ಕಂಡು ಬಂದ ತಾಲ್ಲೂಕುಗಳ ಸಂಖ್ಯೆ ಇಳಿಕೆಯಾಗಿದೆ. ಪ್ರಸ್ತುತ ಜೂನ್ 1 ರಿಂದ ಈ ವರೆಗೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಿದ್ದು, 21 ಜಿಲ್ಲೆಗಳಲ್ಲಿ ವಾಡಿಕೆ ಮಳೆಯಾಗಿದೆ. 6 ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮುಂದಿನ ಒಂದು ವಾರದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದ್ದು, ಮಳೆ ಕೊರತೆಯಿರುವ ತಾಲ್ಲೂಕುಗಳ ಸಂಖ್ಯೆ ಇಳಿಕೆಯಾಗಲಿದೆ ಎಂದು ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಹುತೇಕ ಎಲ್ಲ ಜಲಾಶಯಗಳಲ್ಲಿ ನೀರು ಬಹುತೇಕ ಭರ್ತಿಯಾಗುತ್ತಿವೆ. ಕಳೆದ ಒಂದು ವಾರದಲ್ಲಿ ಒಟ್ಟು ಸಂಚಿತ ಒಳಹರಿವು 227 ಟಿಎಂಸಿಯಷ್ಟಾಗಿದೆ.
ಜೂನ್ 1 ರಿಂದ ಈ ವರೆಗೆ ರಾಜ್ಯದಲ್ಲಿ ನೀರಿನಲ್ಲಿ ಸಿಲುಕಿ, ಸಿಡಿಲು ಬಡಿದು, ಮನೆ ಕುಸಿದು, ಮರ ಬಿದ್ದು ಹಾಗೂ ಭೂಕುಸಿತದಿಂದ ಒಟ್ಟು 38 ಮಾನವ ಜೀವಹಾನಿ ಆಗಿದೆ. 35 ಜನರು ಗಾಯಗೊಂಡಿದ್ದಾರೆ. ಮಳೆಯಿಂದಾಗಿ 105 ಜಾನುವಾರುಗಳು ಮೃತಪಟ್ಟಿವೆ. ರಾಜ್ಯದಲ್ಲಿ 57 ಮನೆಗಳು ಸಂಪೂರ್ಣವಾಗಿ, 208 ಮನೆಗಳು ತೀವ್ರವಾಗಿ ಹಾಗೂ 2682 ಮನೆಗಳು ಭಾಗಶಃ ಹಾನಿಯಾಗಿದೆ.
185 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 356 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳು- ಒಟ್ಟು 541.39 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಜಲಾವೃತಗೊಂಡಿದೆ. 407 ಕಿ.ಮೀ. ರಾಜ್ಯ ಹೆದ್ದಾರಿ, 425 ಕಿ.ಮೀ. ಜಿಲ್ಲಾ ಹೆದ್ದಾರಿ, ಗ್ರಾಮೀಣ ರಸ್ತೆಗಳು 1277 ಕಿ.ಮೀ. ಒಟ್ಟು 2109 ಕಿ.ಮೀ. ರಸ್ತೆ ಹಾನಿಯಾಗಿದೆ.
189 ಸೇತುವೆಗಳು, 889 ಶಾಲಾ ಕೊಠಡಿಗಳು, 8 ಪ್ರಾಥಮಿಕ ಕೇಂದ್ರಗಳು, 269 ಅಂಗನವಾಡಿ ಕೇಂದ್ರಗಳು ಹಾನಿಯಾಗಿರುವುದು ವರದಿಯಾಗಿದೆ. 11,995 ವಿದ್ಯುತ್ ಕಂಬಗಳು, 894 ಟ್ರಾನ್ಸ್‌ಫಾರ್ಮರ್ ಗಳು ಹಾನಿಯಾಗಿದ್ದು, 215 ಕಿ.ಮೀ. ಉದ್ದದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಪ್ರಸ್ತುತ ಎರಡು ಪರಿಹಾರ ಶಿಬಿರ ಗಳಲ್ಲಿ 50 ಜನರಿಗೆ ಆಶ್ರಯ ನೀಡಲಾಗಿದೆ
ಜೂನ್ ತಿಂಗಳಿನಲ್ಲಿ ಮಳೆ ಕೊರತೆಯಾದ್ದರಿಂದ ಮುಂಗಾರು ಹಂಗಾಮಿನಲ್ಲಿ ಈ ವರೆಗೆ ಶೇ. 53 ರಷ್ಟು ಬಿತ್ತನೆಯಾಗಿದೆ. ವಾಡಿಕೆಯಂತೆ ಶೇ. 83 ರಷ್ಟು ಬಿತ್ತನೆಯಾಗಿದೆ. ರಾಜ್ಯದಲ್ಲಿ 156 ಲಕ್ಷ ಟನ್ ಮೇವು ದಾಸ್ತಾನು ಇದ್ದು, ಮುಂದಿನ 29 ವಾರಗಳಲ್ಲಿ ಸಾಕಾಗುವಷ್ಟಿದೆ ಎಂದರು.
ಹಿಂದಿನ ವರ್ಷಗಳ ಅನುಭವ ಮತ್ತು ಅನಾಹುತಗಳಿಂದ ಬಹಳಷ್ಟು ಸಾವಿನ, ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಜಿಲ್ಲಾಡಳಿತ, ಪೊಲೀಸ್ ಹಾಗೂ ಇನ್ನಿತರೆ ಇಲಾಖೆಗಳ ನಡುವಿನ ಸಮನ್ವಯತೆಯಿಂದ ಸಾವು, ಮಳೆ ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಿದೆ. ಈ ದಿಕ್ಕಿನಲ್ಲಿ ಸೂಕ್ತ ಕ್ರಮ ವಹಿಸಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ