ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕದ ಚರಿತ್ರೆಯಲ್ಲೇ ಮೊದಲ ಬಾರಿ ಜೂನ್ 10ರಂದು ಗುರುವಾರ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಸರಿಯಾಗಿ ಒಂದೇ ದಿನ, ಒಂದೇ ಸಮಯಕ್ಕೆ ನಾಡಿನಾದ್ಯಂತ ಒಂದು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದ್ದು, “ಉಚಿತ ಲಸಿಕೆ ಕೊಡಿ, ಇಲ್ಲವೇ ಅಧಿಕಾರ ಬಿಡಿ” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಕರ್ನಾಟಕ ರಕ್ಷಣ ವೇದಿಕೆ ತಿಳಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಜೂಮ್ ಸಭೆಯಲ್ಲಿ ಈ ಐತಿಹಾಸಿಕ ನಿರ್ಣಯ ಅಂಗೀಕರಿಸಲಾಗಿದ್ದು, ನಾರಾಯಣಗೌಡರ ಜನ್ಮದಿನವೂ ಆಗಿರುವ ಜೂ.10ರಂದು ಲಕ್ಷಾಂತರ ಕರವೇ ಕಾರ್ಯಕರ್ತರು ‘ಪ್ರತಿಭಟನಾ ದಿನ’ವನ್ನಾಗಿ ಆಚರಿಸಿ, ರಾಜ್ಯದ ಸಮಸ್ತ ಜನತೆಯ ಹಕ್ಕೊತ್ತಾಯವನ್ನು ಮಂಡಿಸಲಿದ್ದಾರೆ.
ಕರ್ನಾಟಕದ ಪ್ರತಿಯೊಬ್ಬರಿಗೂ ಜೂನ್ ತಿಂಗಳ ಅಂತ್ಯದೊಳಗೆ ಮೊದಲನೇ ಡೋಸ್ ಕೋವಿಡ್ ಲಸಿಕೆ ಮತ್ತು ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಎರಡನೇ ಡೋಸ್ ಉಚಿತವಾಗಿ ನೀಡಬೇಕು. ಚುನಾವಣಾ ಬೂತ್ ಗಳಂತೆ ಲಸಿಕೆ ಬೂತ್ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ.
2020 ರ ಮಾರ್ಚ್ ತಿಂಗಳಲ್ಲಿ ಕೋವಿಡ್-19 ಭಾರತಕ್ಕೆ ಕಾಲಿಟ್ಟ ನಂತರ ಸಾಮಾನ್ಯ ಜನರ ಬದುಕು ನರಕವಾಗಿದೆ. ತಂದೆ-ತಾಯಿಕಳೆದುಕೊಂಡು ಮಕ್ಕಳು ಅನಾಥರಾಗಿದ್ದಾರೆ. ರಾಜ್ಯ ಸರ್ಕಾರ ಜಾರಿ ಮಾಡುತ್ತಿರುವ ಲಾಕ್ ಡೌನ್ ಇತ್ಯಾದಿ ಕ್ರಮಗಳಿಂದಾಗಿ ಬಡತನ, ನಿರುದ್ಯೋಗ ಹೆಚ್ಚುತ್ತಿದೆ. ಕಳೆದ ವರ್ಷದಿಂದಲೂ ಸಹ ಸರ್ಕಾರಗಳು ಜನರ ಮೇಲೆ ಜವಾಬ್ದಾರಿಗಳನ್ನು ಹೊರಿಸಿದವೇ ಹೊರತು ಜನರ ಜೀವ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ.
ಕೋವಿಡ್ ಲಸಿಕೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಸರ್ಕಾರ ಅದನ್ನು ಮಾರಾಟಕ್ಕೆ ಇಡಕೂಡದು. ಪ್ರತಿಯೊಬ್ಬರಿಗೂ ಅದು ಉಚಿತವಾಗಿ ಸಿಗಬೇಕು ಎಂದು ರಕ್ಷಣಾ ವೇದಿಕೆ ಒತ್ತಾಯಿಸಿದೆ. ಎಲ್ಲಾ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿಗಳಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ, ಮಾಸ್ಕ್ ದೈಹಿಕ ಅಂತರ ಪಾಲೆನೆಯೊಂದಿಗೆ ಧರಣಿಯಲ್ಲಿ ತೊಡಗುವುದಾಗಿ ಬೆಳಗಾವಿ ಜಿಲ್ಲಾ ಕರವೇ ಅಧ್ಯಕ್ಷ ದೀಪಕ ಬ.ಗುಡಗನಟ್ಟಿ ತಿಳಿಸಿದ್ದಾರೆ.
ಲಾಕ್ ಡೌನ್ ; ಹಲವು ಮಹತ್ವದ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ