Latest

ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರಕಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದ 8.5 ಲಕ್ಷ ಸರಕಾರಿ ನೌಕರರು ಹಾಗೂ 4 ಲಕ್ಷದಷ್ಟು ನಿವೃತ್ತ ನೌಕರರು ಬಹುದಿನಗಳಿಂದ ಎದುರು ನೋಡುತ್ತಿದ್ದ 7ನೇ ವೇತನ ಆಯೋಗ ರಚನೆಗೆ ಸರಕಾರ ಇಂಗಿತ ವ್ಯಕ್ತಪಡಿಸಿದೆ.

ಈ ಸಂಬಂಧ ಶನಿವಾರ ಹಾಗೂ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಹಣಕಾಸು ಇಲಾಖೆ ಅಪದ ಮುಖ್ಯ ಕಾರ್ಯದರ್ಶಿ ಐಎಸ್ ಎನ್ ಪ್ರಸಾದ ಅವರನ್ನೊಳಗೊಂಡು  ಸರಣಿ ಸಭೆಗಳನ್ನು ನಡೆಸಿ ಆಯೋಗದ ಅಧ್ಯಕ್ಷರು ಸೇರಿದಂತೆ ಉಳಿದ ರೂಪುರೇಷೆ ನಿರ್ಧರಿಸುವ ಬಗ್ಗೆ ಚರ್ಚಿಸಲಾಗಿದೆ. ಇಂದು ಅಥವಾ ನಾಳೆ ಇದರ ಸಂಪೂರ್ಣ ಚಿತ್ರಣ ತಿಳಿದುಬರುವ ಮೂಲಕ ಆಯೋಗ ರಚನೆ ಘೋಷಣೆಯಾಗುವ ಸಾಧ್ಯತೆಗಳಿವೆ.

ವೇತನ ಆಯೋಗ ರಚನೆಗೆ ಸಂಬಂಧಿಸಿದಂತೆ ಸರಕಾರಿ ನೌಕರರ ಸಂಘ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದು ಆಯೋಗ ರಚಿಸಿ ಶಿಫಾರಸುಗಳನ್ನು ಅಂಗೀಕರಿಸಿದಲ್ಲಿ ಸರಕಾರದ ಬೊಕ್ಕಸದ ಮೇಲೆ ಮಾಸಿಕ 1 ಸಾವಿರ ಕೋಟಿ ರೂ.ನಂತೆ ವರ್ಷಕ್ಕೆ 12 ಸಾವಿರ ಕೋಟಿ ರೂ. ಹೊರೆ ಬೀಳಲಿದೆ.

ಪ್ರತಿ ಐದು ವರ್ಷಗಳಿಗೊಮ್ಮೆ ಸರಕಾರ ಬೆಲೆ ಏರಿಕೆ, ಕೇಂದ್ರದ ನಿರ್ಧಾರಗಳು, ಅನ್ಯ ರಾಜ್ಯಗಳ ವೇತನ ಪರಿಷ್ಕರಣೆ ವೈಖರಿ ಇತ್ಯಾದಿಗಳನ್ನು ಅವಲೋಕಿಸಿ ವೇತನ ಪರಿಷ್ಕರಣೆ ಮಾಡುವ ಸಂಬಂಧ ವೇತನ ಆಯೋಗ ರಚಿಸುತ್ತದೆ.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಚುನಾವಣೆ ಸಮೀಪದಲ್ಲೇ ವೇತನ ಆಯೋಗ ರಚಿಸಿತ್ತು. ಇದೀಗ ಬಸವರಾಜ ಬೊಮ್ಮಾಯಿ ಅವರೂ ಚುನಾವಣೆ ಹೊಸ್ತಿಲಲ್ಲೇ ಈ ನಿರ್ಧಾರ ಕೈಗೊಂಡಿದ್ದಾರೆ.

ಬಸ್ ತಡೆದು ಪ್ರತಿಭಟನೆಗಿಳಿದ ವಿದ್ಯಾರ್ಥಿಗಳು; ಸುಮಾರು 15ಕ್ಕೂ ಹೆಚ್ಚು ಬಸ್ ಗಳಿಗೆ ತಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button