ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಆರಂಭವಾಗಿದ್ದು, ಮತದಾರರು, ರಾಜಕೀಯ ನಾಯಕರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕುಟುಂಬ ಸಮೇತ ಬಂದು ಬೆಳಗಾವಿಯ ವಿಜಯನಗರದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಈ ವೇಳೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, “ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಮತದಾನದ ಹಕ್ಕನ್ನು ಚಲಾಯಿಸಿದ್ದೇನೆ. ಕ್ಷೇತ್ರದ ಎಲ್ಲ ಗುರುಹಿರಿಯರು, ತಾಯಿಯ ಆಶೀರ್ವಾದ ಪಡೆದು ಮತ ಚಲಾವಣೆ ಮಾಡಿದ್ದೇನೆ. ತುಂಬ ಖುಷಿ, ನೆಮ್ಮದಿ, ಅಭಿಮಾನದಿಂದ ಮತ ಹಾಕಿದ್ದೇನೆ. ಕಳೆದ ಬಾರಿ ಕೆಲವಷ್ಟು ಒತ್ತಡಗಳಿದ್ದವು. ಈ ಬಾರಿ ತುಂಬ ಆತ್ಮವಿಶ್ವಾಸದಿಂದ ಮತ ಚಲಾವಣೆ ಮಾಡಿದ್ದೇನೆ. ಕುಟುಂಬದ ಎಲ್ಲ ಸದಸ್ಯರು ನನ್ನ ಬೆನ್ನಿಗೆ ನಿಂತು ಆಶೀರ್ವಾದ, ಮಾರ್ಗದರ್ಶನ ಮಾಡಿದ್ದಾರೆ. ಇದು ನನ್ನ ಜೀವನದ ಮಹತ್ವದ ಘಟ್ಟ ಎಂದರು.
ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನನ್ನನ್ನು ನನ್ನ ಮತದಾರರು ಗೆಲ್ಲಿಸುತ್ತಾರೆ. ನಾನು ಯಾರಿಗೂ ಅಪಮಾನ ಮಾಡುವುದಿಲ್ಲ. ಕೇವಲ ವಿಜಯದ ಬಗ್ಗೆ ಅಷ್ಟೇ ಮಾತನಾಡುತ್ತೇನೆ. ಕಳೆದ ಬಾರಿಗಿಂತ ಒಂದು ಮತವಾದರೂ ಹೆಚ್ಚು ಪಡೆದು ಗೆಲ್ಲುತ್ತೇನೆ. ಕಣದಲ್ಲಿರುವ ಎಲ್ಲರೂ ನನ್ನ ಪ್ರತಿಸ್ಪರ್ಧಿಗಳು. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ. ನಮಗೆ ವಿಶ್ವಾಸವಿದೆ. ಕರ್ನಾಟಕದ ಜನತೆ ಖಂಡಿತವಾಗಿ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಾರೆ” ಎಂದರು.
ಸಚಿವ ಸ್ಥಾನ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳಕರ, “ಅದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಖಂಡಿತವಾಗಿಯೂ ಸಚಿವ ಸ್ಥಾನ ದೊರೆಯುವ ವಿಶ್ವಾಸ ನನಗಿದೆ” ಎಂದರು.
ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು. ಮೃಣಾಲ ಹೆಬ್ಬಾಳಕರ್ ಕೂಡ ಮತದಾನ ಮಾಡಿದರು.
ಚನ್ನರಾಜ ಹಟ್ಟಿಹೊಳಿ ಮೋದಗಾ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ