
ಮನೆಗಳಿಗೆ ನುಗ್ಗಿದ ನೀರು:ರಸ್ತೆಗಳು ಜಲಾವೃತ; ವಾಹನ ಸವಾರರ ಪರದಾಟ
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಆಲಿಕಲ್ಲು ಮಳೆ, ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುತ್ತಿದ್ದು, ಬಿಸಿಲ ಝಳದಿಂದ ಕಂಗೆಟ್ಟು ಹೋಗಿದ್ದ ಜನತೆಗೆ ತಂಪೆರೆದಂತಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಬೆಂಗಳೂರು, ಹಾಸನದ ಬೇಲೂರು ಸೇರಿದಂತೆ ಹಲವೆಡೆ ಆಲಿಕಲ್ಲು ಮಳೆಯಾಗಿದೆ.
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆ ಆರಂಭವಾಗಿದ್ದು, ವೀಕೇಂಡ್ ಹೊತ್ತಲ್ಲಿ ಮನೆಯಿಂದ ಹೊರ ಬಂದಿದ್ದ ಜನರು, ವಾಹನ ಸವಾರ್ಅರು ಪರದಾಡಿದ್ದಾರೆ. ಹಲವೆಡೆ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿದೆ.
ಕೆಲ ದಿನಗಳಿಂದ ರಣಬಿಸಿಲು, ಬಿಸಿಗಾಳಿ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಇಳೆ ವರುಣಾರ್ಭಟದಿಂದ ತಂಪಾದಂತಾಗಿದೆ. ಬೆಂಗಳೂರು ಸೇರಿದಂತೆ ಕೆಲವೆಡೆ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ.