ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕಾಗಿದ್ದು, ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಇದರ ಬೆನ್ನಲ್ಲೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವರುಣಾರ್ಭಟ ಜೋರಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ ಹಲವೆಡೆ ಜೂನ್ 29ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಲಿದ್ದು, 7 ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಹಾಸನ, ಶಿವಮೊಗ್ಗ, ಬೆಳಗಾವಿ, ಧಾರವಾಡ, ಬೀದರ್, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಸೇರಿದಂತೆ ಹಲವೆಡೆ ಕೂಡ ಮಳೆಯಾಗಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ, ಮನೆಗಳಿಗೆ ನೀರು ನುಗ್ಗಿದೆ. ಇನ್ನು ಅನೇಕ ಕಡೆಗಳಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ದಕ್ಷಿಣ ಕನ್ನಡದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಕುಸಿದುಬಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಮೈಸೂರಿನಲ್ಲಿಯೂ ವರುಣಾರ್ಭಟ ಜೋರಾಗಿದ್ದು, ಮನೆ ಕುಸಿದು ಬಿದ್ದು ಅವಾಂತರ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಇನ್ನೂ ನಾಲ್ಕುದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ