Latest

*ರೈತ ಉದ್ಧಾರವಾಗಲು ರೈತ ಕೇಂದ್ರಿತವಾದ ಕೃಷಿ ಯೋಜನೆಗಳು ಅಗತ್ಯ; ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರೈತ ಕೇಂದ್ರಿತವಾದ ಕೃಷಿ ಯೋಜನೆಗಳ ರೂಪಿತವಾದಾಗ ಮಾತ್ರ ರೈತ ಉದ್ಧಾರವಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಾಸಿನಸರ ಚಲನಚಿತ್ರದ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಮೌಲ್ಯಗಳಿಂದ ಕೂಡಿದ ಕಾಯಕ ಕೃಷಿ. ಇದೊಂದು ಪವಿತ್ರ ಕಾರ್ಯ. ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಒಕ್ಕಲುತನವಿರುತ್ತದೆ. ಅನಿಶ್ಚಿತತೆಯ ಮಧ್ಯೆಯೂ ಭರವಸೆ ಭೂಮಿತಾಯಿಯ ಸಂಬಂಧದಿಂದ ಬರುತ್ತದೆ. ನಾವು ಎಲ್ಲಡೆ, ಜಾದೂ ಹಣಕೊಟ್ಟು ನೋಡುತ್ತೇವೆ. ಆದರೆ ಸೃಷ್ಟಿಕರ್ತನ ಭೂಮಿಗಿಂತ ದೊಡ್ಡ ಜಾದೂ ಮತ್ತೊಂದಿಲ್ಲ. ಒಂದು ಕಾಳು ಹಾಕಿದರೆ ನೂರಾರು ಕಾಳುಗಳನ್ನು ಬೆಳೆಯಬಹುದು. ಆಧುನಿಕರಣ ಮತ್ತು ಸಂಶೋಧನೆಗಳು ಪ್ರಾರಂಭವಾಗಿ 130 ಕೋಟಿ ಜನರಿಗೆ ಆಹಾರಭದ್ರತೆ ಸಾಧಿಸಲಾಗಿದೆ. ಆದರೆ ರೈತ ಮಾತ್ರ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ ಎಂದರು.

ಹಳ್ಳಿ ಜೀವನ ಸೊಗಸು
ಹಳ್ಳಿಯ ಬದುಕಿನಲ್ಲಿ ಪ್ರೀತಿ, ವಿಶ್ವಾಸ, ಸಂಬಂಧ ಇರುವುದರಿಂದ ಆ ಬದುಕು ಸೊಗಸು. ಹಳ್ಳಿಯಲ್ಲಿ ಎಲ್ಲರೂ ಎಲ್ಲರಿಗೂ ಗೊತ್ತಿರುವುದಲ್ಲದೆ, ಸುಖ, ದು:ಖಗಳಲ್ಲಿ ಭಾಗಿಯಾಗುತ್ತಾರೆ. ಈ ರೀತಿಯ ಆತ್ಮೀಯ ಬದುಕು ಬಹುತೇಕವಾಗಿ ಬೇರೆ ಯಾವ ದೇಶದಲ್ಲಿಯೂ ಇಲ್ಲ. ಇಲ್ಲಿ ಮನೆ ಹಾಗೂ ಮನಗಳೂ ಬೆಸೆದುಕೊಂಡಿರುತ್ತವೆ ಎಂದರು.

ಕಾಸಿನಸರ ಹೆಣ್ಣುಮಕ್ಕಳ ಕನಸು
ಹೆಣ್ಣುಮಕ್ಕಳಿಗೆ ಆಪ್ಯಾಯಮಾನವಾಗಿರುವ ಕಾಸಿನಸರ, ಜೀವನದಲ್ಲಿ ಒಂದು ಕಾಸಿನ ಸರ ಮಾಡಿಸಿಕೊಳ್ಳಬೇಕು ಎನ್ನುವುದು, ನಮ್ಮ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿನ ಕನಸು. ಕಾಸಿನಸರದ ಹಿಂದಿರುವ ಕಥೆಯನ್ನು ಊಹಿಸಿಕೊಳ್ಳಬಹುದು. ಅಂಥ ಪ್ರಯೋಗವನ್ನು ಮಾಡಿರುವ ನಿರ್ದೇಶಕ ನಂಜುಂಡೇಗೌಡರಿಗೆ ಅಭಿನಂದನೆಗಳನ್ನು ತಿಳಿಸಿ, ನಿರ್ಮಾಪಕ ದೊಡ್ಡನಾಗೇಗೌಡರು ನಾಡಿಗೆ ಒಂದು ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ ಎಂದರು.

ಭೂಮಿಗೆ ವಿಷ ಬೆರೆಸಬಾರದೆಂಬ ಸವಾಲು ನಮ್ಮ ಮುಂದಿದೆ :
ರೈತನ ಬದುಕಿಗೆ ಎಲ್ಲ ಸಹಾಯಗಳನ್ನು ಮಾಡುವ ಪ್ರಯತ್ನವನ್ನು ಮಾಡಲಾಗುವುದು. ಹಿಂದೆ ಹೆಣ್ಣುಮಕ್ಕಳ ಭ್ರೂಣ ಹತ್ಯೆ ಬಹಳ ಇತ್ತು. ತನ್ನ ಅಣ್ಣತಮ್ಮಂದಿರ ರೀತಿ ನನ್ನನ್ನೂ ಉಳಿಸಿಕೋ, ನಾನು ಕುಟುಂಬವನ್ನು ನೋಡಿಕೊಳ್ಳುತ್ತೇನೆ ಎಂದು ಹೆಣ್ಣು ಭ್ರೂಣ ಹೇಳುವಂತೆ ಭೂಮಿತಾಯಿಯು , ತಾನು ಜನರಿಗೆ ಅನ್ನ, ಬದುಕು, ಜೀವ, ಆಸರೆ ನೀಡುತ್ತಿದ್ದರೂ ನನಗೇಕೆ ವಿಷ ಬೆರೆಸುತ್ತೀರಿ ಎಂದು ಭೂಮಿ ಕೂಗುತ್ತಿದೆ. ಜನಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಲ್ಲರ ಅನ್ನದ ಚೀಲವೂ ತುಂಬಬೇಕು. ಅಂತೆಯೇ ಭೂಮಿಗೆ ವಿಷ ಬೆರೆಸಬಾರದೆಂಬ ಸವಾಲು ನಮ್ಮ ಮುಂದಿದೆ. ಇದನ್ನು ಸಮರ್ಥವಾಗಿ ನಿರ್ವಹಿಸುವುದು ಬಹಳ ಮುಖ್ಯ ಎಂದರು.

ಆರೋಗ್ಯಕರ ಆಹಾರ ಉತ್ಪಾದನೆ :
ಬರುವ ದಿನಗಳಲ್ಲಿ ವಿಶ್ವದಲ್ಲಿ ಆಹಾರಕ್ಕೆ ಹಾಹಾಕಾರ ಉಂಟಾಗಲಿದೆ ಎಂದು ತಜ್ಞರ ಅಭಿಪ್ರಾಯವಾಗಿದೆ. ಆದ್ದರಿಂದ ಸಾವಯವ ಕೃಷಿ, ನೈಸರ್ಗಿಕ ಕೃಷಿಯನ್ನು ಹಂತಹಂತವಾಗಿ, ವ್ಯವಸ್ಥಿತವಾಗಿ ಅಳವಡಿಸಿಕೊಂಡು ಕೃಷಿಯನ್ನು ಲಾಭದಾಯಕವಾಗಿಸಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು ಹೆಚ್ಚು ಗಮನಹರಿಸಬೇಕಿದೆ. ಆಹಾರದ ಸುರಕ್ಷತೆಯನ್ನು ಗಮನದಲ್ಲಿರಿಸಿ, ಸಾವಯವ ಕೃಷಿಯ ಮೂಲಕ ಹೆಚ್ಚು ಆಹಾರ ಉತ್ಪಾದನೆಗೆ ಒತ್ತು ನೀಡಬೇಕು. ಆರೋಗ್ಯಕರ ಆಹಾರ ಉತ್ಪಾದನೆ ಮೂಲಕ ದೊಡ್ಡ ಬದಲಾವಣೆಯನ್ನು ತರಬಹುದಾಗಿದೆ ಎಂದರು.

ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಲಿ :
ಕೃಷಿ ಅವಲಂಬಿತ ಕುಟುಂಬದ ಸಾಮಾಜಿಕ ಪರಿಣಾಮ, ಅಡಚಣೆಗಳನ್ನು ‘ಕಾಸಿನ ಸರ’ ಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅನ್ನವನ್ನು ವ್ಯರ್ಥಗೊಳಿಸುವವರು, ಅನ್ನವನ್ನು ಸೇವಿಸುವವರೆಲ್ಲರೂ ಈ ಚಿತ್ರವನ್ನು ನೋಡಲೇಬೇಕು. ಈ ಚಿತ್ರದಲ್ಲಿನ ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಇಂತಹ ಮೌಲ್ಯಾಧಾರಿತ ಹಾಗೂ ಗುಣಾತ್ಮಕ ಚಿತ್ರಗಳು ಹೆಚ್ಚು ಕನ್ನಡದಲ್ಲಿ ಬರಲಿ. ಬದುಕಿನ ಸವಾಲುಗಳು, ಪ್ರಸ್ತುತತೆಯನ್ನು ಬಿಂಬಿಸುವ ಚಿತ್ರಗಳು ಖಂಡಿತ ಯಶಸ್ವಿಯಾಗುತ್ತವೆ. ಒಳ್ಳೆಯ ಚಿತ್ರಕಥೆ, ನಿರ್ದೇಶನ, ನಟನೆಗಳನ್ನು ಒಳಗೊಂಡಿರುವ ಕಾಸಿನ ಸರ ಚಲನಚಿತ್ರ ಎಲ್ಲರ ಮನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಚಿವ ಎಸ್.ಟಿ.ಸೋಮಶೇಖರ್, ಕಲಾವಿದೆ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ, ತಾರಾ ಅನುರಾಧ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್. ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ , ವಿಜಯ್ ರಾಘವೇಂದ್ರ, ಚಿತ್ರದ ನಾಯಕನಟಿ ಹರ್ಷಿಕಾ ಪೂಣಾಚ್ಚ, ನೀನಾಸಂ ಸತೀಶ್ ಉಪಸ್ಥಿತರಿದ್ದರು.

*ಕಿಚ್ಚ ಸುದೀಪ್ ಭೇಟಿಯ ಕಾರಣ ತಿಳಿಸಿದ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarkichcha-sudeepmeetclarification/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button