Karnataka NewsLatestPolitics

*ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಂತೆ ಕೇಂದ್ರದ ಅಧಿಸೂಚನೆ; ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ಮಹತ್ವದ ಸಮಾಲೋಚನೆ*

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತು ಬಾಧ್ಯಸ್ಥರ ಸಭೆ


ಪ್ರಕೃತಿ, ಪರಿಸರ, ಜೀವನ, ಜೀವನೋಪಾಯ ಎಲ್ಲವೂ ಮುಖ್ಯ: ಸಚಿವ ಈಶ್ವರ ಖಂಡ್ರೆ


ಪ್ರಗತಿವಾಹಿನಿ ಸುದ್ದಿ: ಪ್ರಕೃತಿ, ಪರಿಸರವೂ ಉಳಿಯಬೇಕು, ಜೀವನ, ಜೀವನೋಪಾಯವೂ ನಡೆಯಬೇಕು ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಕುರಿತಂತೆ ರಾಜ್ಯ ಸರ್ಕಾರ ವಿವೇಚನಾತ್ಮಕ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.


ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ನಡೆಯುತ್ತಿರುವ ಪಶ್ಚಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳ (ಬಾಧ್ಯಸ್ಥರ) ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕಸ್ತೂರಿ ರಂಗನ್ ಸಮಿತಿ ನೀಡಿರುವ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ಆಗಸ್ಟ್ 2ರಂದು 6ನೇ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಿಲುವನ್ನು ಕೇಂದ್ರ ಸರ್ಕಾರಕ್ಕೆ ಈ ಮಾಸಾಂತ್ಯದೊಳಗೆ ಕಳುಹಿಸಲೇಬೇಕು ಎಂದರು.


ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಈಗಾಗಲೇ ತನ್ನ ನಿಲುವನ್ನು ಕೇಂದ್ರಕ್ಕೆ ಹಲವು ಬಾರಿ ಸ್ಪಷ್ಟಪಡಿಸಿದೆ ಎಂದರು.
ಪಶ್ಚಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆದು, ನಂತರ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಬಳಿಕ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ನಮ್ಮ ನಿಲುವು ತಿಳಿಸಲಾಗುವುದು ಎಂದು ಈಶ್ವರ ಖಂಡ್ರೆ ಸಭೆಗೆ ಸ್ಪಷ್ಟಪಡಿಸಿದರು.


ಸಭೆಯಲ್ಲಿ ಸಚಿವರುಗಳಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೋಳಿ, ಮಧು ಬಂಗಾರಪ್ಪ, ಮಾಂಕಾಳ ವೈದ್ಯ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್, ಶಾಸಕರು, ಸಂಸದರು, ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button