*ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗಿದೆ; ರಾಕ್ ಲೈನ್ ವೆಂಕಟೇಶ್ ಆರೋಪ*

ಪ್ರಗತಿವಾಹಿನಿ ಸುದ್ದಿ; ಕೆಲ ದಿನಗಳ ಹಿಂದೆ ಬೆಂಗಳೂರಿನ ಜೆಟ್ ಲ್ಯಾಗ್ ಪಬ್ ನಲ್ಲಿ ಕಾಟೇರ ಚಿತ್ರ ತಂಡ ಸಿನಿಮಾ ಯಶಸ್ಸು ಹಿನ್ನೆಲೆಯಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿತ್ತು. ಅವಧಿಗೂ ಮೀರಿ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಚಿತ್ರ ತಂಡದವರಿಗೆ ಹಾಗೂ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ದರ್ಶನ್ ಹಾಗೂ ಚಿತ್ರತಂಡ ವಿಚಾರಣೆಗೆ ಹಾಜರಾಗಿದೆ.
ಲೇಟ್ ನೈಟ್ ಪಾರ್ಟಿ ಪ್ರಕರಣ ಸಂಬಂಧ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆಗೆ ವಿಚಾರಣೆಗೆ ಕಾಟೇರ ಚಿತ್ರ ತಂಡ ಹಾಜರಾಗಿದೆ. ನಟರಾದ ದರ್ಶನ್, ಅಭಿಷೇಕ್ ಅಂಬರೀಶ್, ಡಾಲಿ ಧನಂಜಯ್, ನಿನಾಸಂ ಸತೀಶ್, ಚಿಕ್ಕಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಹಲವರು ವಿಚಾರಣೆ ಹಾಜರಾಗಿದ್ದಾರೆ.
ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಜನವರಿ 3ರಂದು ಚಿತ್ರತಂಡ ಜೆಟ್ ಲ್ಯಾಗ್ ನಲ್ಲಿ ಸೇರಿದ್ದು ನಿಜ. ಆದರೆ ಪಾರ್ಟಿ ಮಾಡಿರಲಿಲ್ಲ. ಊಟಕ್ಕಾಗಿ ಹೋಗಿದ್ದೆವು. ನಾನೇ ಜೆಟ್ ಲ್ಯಾಗ್ ಮಾಲೀಕರಿಗೆ ನಮಗೆ ಊಟ ರೆಡಿ ಮಾಡಿಸುವಂತೆ ಹೇಳಿದ್ದೆ. ಆದರೆ ಅಡಿಗೆಯ ಸಿಬ್ಬಂದಿಗಳ ಕೊರತೆ ಇದ್ದುದರಿಂದ ಹೋಟೆಲ್ ನಲ್ಲಿ ಅಡುಗೆ ತಡವಾಗಿದೆ. ಆದರೆ ಯಾವುದೇ ಮದ್ಯಸರಬರಾಜು ಮಾಡಿಲ್ಲ ಎಂದು ಹೇಳಿದರು.
ಕಾಟೇರ ಸಿನಿಮಾ ಯಶಸ್ಸಿನ ಕಾರಣಕ್ಕೆ ಯಾರೋ ಆಗದವರು ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಪೊಲೀಸರು ಕೆಲವರ ಮಾತು ಕೇಳಿ ನೋಟಿಸ್ ನೀಡಿದ್ದಾರೆ. ಅಬಕಾರಿ ನಿಯಮ ಉಲ್ಲಂಘನೆ, ತಡರಾತ್ರಿ ಪಾರ್ಟಿ ಮಾಡಿದ್ದಾರೆ ಎಂದು ನೋಟೀಸ್ ನೀಡಲು ಬೆಂಗಳೂರಿನಲ್ಲಿ ತಡ ರಾತ್ರಿ 1 ಗಂಟೆಯಾದರೂ ಅದೆಷ್ಟೋ ಹೋಟೆಲ್, ಬಾರ್ ಗಳು ತೆರೆದಿರುತ್ತವೆ ಅವರಿಗ್ಯಾರಿಗೂ ನಿಯಮ ಅನ್ವಯವಾಗುವುದಿಲ್ಲವೇ? ಅವರಿಗೆ ಯಾಕೆ ನೋಟಿಸ್ ನೀಡಿ ವಿಚಾರಣೆ ಮಾಡುತ್ತಿಲ್ಲ? ಕೇವಲ ದರ್ಶನ್ ಅವರನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ? ಎಂದು ಕಿಡಿಕಾರಿದರು.
ಇದೆಲ್ಲ ಯಾರು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು ಆದರೂ ನಾನು ಅವರ ಹೆಸರು ಹೇಳಲ್ಲ. ನಾವು ಕೂಡ ಹೋಟೆಲ್ ಗೆ ಗ್ರಾಹಕರಾಗಿ ಊಟಕ್ಕೆ ಬಂದಿದ್ದೆವು. ಆದರೆ ಗ್ರಾಹಕರರಿಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಮಾಡುತ್ತಿರುವುದು ಎಷ್ಟು ಸರಿ ಇಂತಹ ಘಟನೆ ಇದೇ ಮೊದಲು. ವಿಚಾರಣೆಗೆ ಹಾಜರಾಗಿದ್ದೇವೆ ಆದರೂ ನಮ್ಮ ವಿರುದ್ಧ ಕ್ರಮ ಜರುಗಿಸಿದರೆ ನಾವೂ ಕಾನೂನು ರೀತಿ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ