Politics

*ಭಾರತೀಯ ಸೇನೆ ಕಾರ್ಯಾಚಾರಣೆ ಬಗ್ಗೆ ಹೆಮ್ಮೆಯಿದೆ: ಡಿಸಿಎಂ ಡಿ.ಕೆ.ಶಿವಕುಮಾರ್*

ಕೇಂದ್ರ ಸರ್ಕಾರ ಹಾಗೂ ಸೇನೆ ಬೆನ್ನಿಗೆ ನಿಲ್ಲುತ್ತೇವೆ

ಪ್ರಗತಿವಾಹಿನಿ ಸುದ್ದಿ; ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಪ್ರದೇಶಗಳಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ‘ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳ ಪರ ನಿಲ್ಲುತ್ತೇವೆ’ ಎಂದು ತಿಳಿಸಿದ್ದಾರೆ.

ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಚರಣೆಯನ್ನು ಡಿ.ಕೆ.ಶಿವಕುಮಾರ್ ಅವರು ಎಕ್ಸ್ ಖಾತೆ ಮೂಲಕ ಸ್ವಾಗತಿಸಿದ್ದಾರೆ.

“ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಹೇಡಿತನದ ಕೃತ್ಯಕ್ಕೆ ಆಪರೇಶನ್ ಸಿಂಧೂರ ಉತ್ತಮ ಪ್ರತ್ಯುತ್ತರವಾಗಿದೆ” ಎಂದು ತಿಳಿಸಿದ್ದಾರೆ.

Home add -Advt

ನವದೆಹಲಿಯಲ್ಲಿ ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, “ಭದ್ರತಾ ಪಡೆಗಳ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಅವರು ದೇಶದ ಘನತೆ, ಹಿತಾಸಕ್ತಿಯನ್ನು ಕಾಪಾಡುತ್ತಿದ್ದು, ಅವರಿಗೆ ನಾವೆಲ್ಲರೂ ನಮಿಸೋಣ. ಈ ಸಂದರ್ಭದಲ್ಲಿ ನಾವು ಅವರ ಬೆನ್ನಿಗೆ ನಿಲ್ಲೋಣ. ಕಾಂಗ್ರೆಸ್ ಪಕ್ಷ ದೇಶದ ಹಿತರಕ್ಷಣೆ ವಿಚಾರದಲ್ಲಿ ಸೇನೆ ಬೆನ್ನಿಗೆ ನಿಂತು ಬೆಂಬಲ ನೀಡಲಿದೆ” ಎಂದು ತಿಳಿಸಿದರು.

ಕರ್ನಾಟಕದ ಪ್ರಜೆಗಳು ಪೆಹಲ್ಗಮ್ ದಾಳಿಯಲ್ಲಿ ಮೃತಪಟ್ಟಿದ್ದರ ಬಗ್ಗೆ ಕೇಳಿದಾಗ, “ನಮ್ಮ ರಾಜ್ಯ ಮಾತ್ರವಲ್ಲ, ದೇಶದ ಇತರೆ ಭಾಗಗಳ ಜನರು ಮೃತರಾಗಿದ್ದರು. ಈ ವಿಚಾರದಲ್ಲಿ ಕೇವಲ ಕರ್ನಾಟಕ ಎಂದು ನೋಡಬಾರದು, ಇಡೀ ದೇಶವೇ ಒಂದು ಎಂದು ನೋಡಬೇಕು. ನಾವೆಲ್ಲರೂ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು, ಅದೇ ರೀತಿ ಒಟ್ಟಾಗಿ ನಿಂತಿದ್ದೇವೆ” ಎಂದರು.

ಪಹಲ್ಗಾಮ್ ದಾಳಿಯಲ್ಲಿ ಮೃತರ ಕುಟುಂಬದವರು ಈ ಆಪರೇಷನ್ ನಿಂದ ನೆಮ್ಮದಿ ಪಡೆಯುವರೇ?, ವಿರೋಧ ಪಕ್ಷ ಕೂಡ ಸರ್ಕಾರದ ಬೆನ್ನಿಗೆ ನಿಂತಿದೆಯಲ್ಲವೇ ಎಂದು ಕೇಳಿದಾಗ, “ಹೌದು, ನಾವು ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನಿಂತಿದ್ದೇವೆ. ಬೆಲೆ ಏರಿಕೆ ವಿಚಾರವಾಗಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ನಾವು ರದ್ದುಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಹೀಗಾಗಿ ಈ ಪ್ರತಿಭಟನಾ ಸಮಾವೇಶವನ್ನು ಮುಂದೂಡಿದ್ದೇವೆ” ಎಂದು ತಿಳಿಸಿದರು.

Related Articles

Back to top button