ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ -ಚಿಕ್ಕೋಡಿ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಪರ ಜಾಗೃತಿಗಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪೌರತ್ವ ಕಾಯ್ದೆ ವಿಚಾರದಲ್ಲಿ ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನ ಇದಾಗಿದ್ದು, ರಾಜ್ಯಾದ್ಯಂತ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ನಾಯಕರು ಮನೆ ಮನೆಗೆ ತೆರಳಿ ಈ ಕುರಿತು ಅರಿವು ಮೂಡಿಸಲಿದ್ದೇವೆ ಎಂದರು.
ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯, ೧೯೯೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ.
ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಈ ಕಾಯ್ದೆಯಿಂದ ಆಗುವುದಿಲ್ಲ ಎಂದರು.
ಪೌರತ್ವ ಕಾಯ್ದೆಯು ದೇಶದ ಗಡಿಯಂಚಿನಲ್ಲಿರುವ ರಾಜ್ಯಗಳಲ್ಲಿ ನುಸುಳಿಕೋರರಾಗಿ ಆಗಮಿಸಿ ಯಾವುದೇ ರೀತಿಯ ದಾಖಲೆಯಿಲ್ಲದೇ ಇರುವವರಿಗೆ ಅನ್ವಯಿಸುತ್ತದೆ. ಆದ್ದರಿಂದ ಇಲ್ಲಿರುವ ಯಾರೇ ಈ ಕಾಯ್ದೆಯ ಬಗ್ಗೆ ತಲೆಕೆಡಸಿಕೊಳ್ಳುವಂತಿಲ್ಲ ಎಂದರು.
ಪೌರತ್ವ ಕಾಯ್ದೆಯನ್ನು ಮುಂದಿಟ್ಟುಕೊಂಡು ಕಳೆದ ೭೦ ವರ್ಷಗಳ ಆಡಳಿತ ನಡೆಸಿದ ಕಾಂಗ್ರೇಸ್ ನವರು ಧರ್ಮ, ಧರ್ಮಗಳ ಮಧ್ಯೆ ಜಗಳ ಹಚ್ಚಿ ಅರಾಜಕತೆಯನ್ನುಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸತೀಶ ಅಪ್ಪಾಜಿಗೋಳ, ಅಪ್ಪಾಸಾಹೇಬ ಚೌಗಲಾ, ಅಕ್ರಮ ಅರ್ಕಾಟೆ, ಬಾಬು ಮಿರ್ಜಿ, ಸಂಜಯ ಕವಟಗಿಮಠ, ಐ.ಡಿ.ನಾಯಕವಾಡಿ ಸೇರಿದಂತೆ ಪುರಸಭೆ ಸದಸ್ಯರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ