ಮೀಸಲಾತಿ ವಿಚಾರ ಕಾನೂನಾತ್ಮಕವಾಗಿ ಕ್ಲಿಷ್ಟಕರ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ ಕೇದಾರ ಪೀಠದ ಜಗದ್ಗುರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸೇರಿ ವಿವಿಧ ಸಮುದಾಯಗಳಿಗೆ ಮೀಸಲಾತಿ ವಿಚಾರದಲ್ಲಿ ಪ್ರಯತ್ನ ಮಾಡುವವರಿಗೆ ನಾವು ಬೇಡ ಎನ್ನಲಾಗದು. ಆದರೆ ಅದು ಕಾನೂನು ದೃಷ್ಟಿಯಿಂದ ಕಷ್ಟಕರವಾಗಿದೆ ಎಂದು ಕೇದಾರ ಪೀಠದ ಜಗದ್ಗುರು ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ನಿವಾಸದಲ್ಲಿ ಬುಧವಾರ ಪಾದಪೂಜೆ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
“ಮೀಸಲಾತಿ ಬಗ್ಗೆ ಕೇಂದ್ರದಲ್ಲಿ ನಾವು ಸುದೀರ್ಘ ಚರ್ಚೆ ಮಾಡಿದ್ದೇವೆ. ಹಿಂದೆ ಎಲ್.ಕೆ.ಅಡ್ವಾಣಿ, ಶಿವರಾಜ ಪಾಟೀಲ್ ಸಚಿವರಿದ್ದಾಗ ಚರ್ಚೆ ಮಾಡಿದ್ದೇವೆ. ಶಂಕರರಾವ್ ಚೌಹಾಣ ಗೃಹ ಸಚಿವರಾಗಿದ್ದಾಗ 15 ದಿವಸ ದೆಹಲಿಯಲ್ಲಿದ್ದೆವು. ಭಾರತ ದೇಶದಲ್ಲಿ 308 ಜಾತಿಗಳಿವೆ. ಸಂವಿಧಾನದಲ್ಲಿ ಜಾತಿ ಮತ್ತು ಧರ್ಮಕ್ಕೆ ಆಸ್ಪದವಿಲ್ಲ. ಪರಂಪರೆಯಿಂದ ಪ್ರತ್ಯೇಕ ಮಾಡುವುದಾದರೆ ಅದಕ್ಕೆ ಶಾಸನ ಅಡ್ಡಿಯಾಗುತ್ತದೆ” ಎಂದರು.
ಅಂತ್ರೊಪೊಲಾಜಿಕಲ್ ಸರ್ವೇ ಆಫ್ ಇಂಡಿಯಾ ಎಂಬುದಿದೆ. ಅಲ್ಲಿಂದ ತಯಾರಾಗಿ ಲೋಕಸಭೆ, ಮಂತ್ರಿಮಂಡಲದಲ್ಲಿ ಪಾಸು ಆದಾಗ ಮೀಸಲಾತಿ ಸಿಗುತ್ತದೆ. ಈ ನಿರ್ಧಾರ ಮುಖ್ಯಮಂತ್ರಿಗಳ ಅಥವಾ ಇನ್ನಾರ ಕೈಯಲ್ಲೂ ಇಲ್ಲ, ರಾಜ್ಯ ಸರ್ಕಾರದಲ್ಲಿ ಏನೂ ಇಲ್ಲ, ಎಲ್ಲವೂ ಕೇಂದ್ರ ಸರ್ಕಾರದಲ್ಲಿರುತ್ತದೆ ಎಂದು ಶ್ರೀ ಗಳು ಹೇಳಿದರು.
“ನಾವು ಧರ್ಮಗುರುಗಳು ಪರಂಪರೆ ಏನಿದೆಯೋ ಅದನ್ನು ಹಿಡಿದುಕೊಂಡು ಹೋಗಬೇಕು. ಆ ಪರಂಪರೆಯಲ್ಲೇ ಇದೆಲ್ಲ ಬಂದಿದೆ. ಪರಂಪರೆ ಪಾಲನೆ ಮಾಡುವಾಗ ಸರ್ಕಾರ ಅಡ್ಡ ಹಾಕಲು ಬರುವುದಿಲ್ಲ. ಸಂವಿಧಾನ ಪ್ರಕಾರ ಪ್ರತ್ಯೇಕ ಮಾಡಲು ಅನೇಕ ಸಮಸ್ಯೆಗಳಿವೆ. ಆ ಬಗ್ಗೆ ತಾವು ಪ್ರಯತ್ನ ಮಾಡಿ ನೋಡಿದ್ದು ಈಗ ಯಾರು ಪ್ರತ್ಯೇಕ ಮಾಡಲು ಹೋರಾಡುತ್ತಿದ್ದಾರೋ ಅವರಿಗೆ ಬೇಡ ಎನ್ನುವುದಿಲ್ಲ. ಆದರೆ ಆ ಸರ್ಕಾರದ ಮುಂದೆ ಅವರು ಒಬ್ಬರು ಕಾಣಿಸಬಹುದು, ಸರಕಾರಕ್ಕೆ ಮಾತ್ರ ಇಡೀ ದೇಶ ಕಾಣಿಸುತ್ತದೆ. ಇದನ್ನು ವಿಚಾರ ಮಾಡಿ ಅವರು ಮುಂದೆ ಹೆಜ್ಜೆ ಇಡಬೇಕು” ಎಂದರು.
ವೀರಶೈವ ಮತ್ತು ಲಿಂಗಾಯತ ಮೀಸಲಾತಿ ಕುರಿತು 2017ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂದ ವೇಳೆ ತಾವು ಪತ್ರ ನೀಡಿದ್ದಾಗಿ ತಿಳಿಸಿದ ಶ್ರೀಗಳು, “ಭಾರತ ದೇಶದಲ್ಲಿ ಅನೇಕ ಧರ್ಮ, ಮತ, ಪಂಥಗಳಿವೆ. ಅದರಲ್ಲಿ ಹಿಂದುಯುಕ್ತ, ಸನಾತನ, ವೀರಶೈವ ಧರ್ಮವೂ ಇದೆ. ಪಂಚ ಪೀಠಾಧೀಶ ಸ್ಥಾಪಿತವಾಗಿದ್ದಕ್ಕೆ ಬಸವೇಶ್ವರರು 800 ವರ್ಷಗಳ ಹಿಂದೆ ಬೆಂಬಲ ನೀಡಿದ್ದು ಅಲ್ಪಸಂಖ್ಯಾತ ಜೈನ, ಬೌದ್ಧ, ಸಿಖ್ ಹಿಂದುಯಕ್ತವಾಗಿದ್ದಲ್ಲಿ ವೀರಶೈವ ಧರ್ಮಕ್ಕೂ ಕೊಡಬಹುದು ಎಂದು ಪತ್ರದಲ್ಲಿ ಹೇಳಲಾಗಿತ್ತು” ಎಂದು ಶ್ರೀಗಳು ಹೇಳಿದರು.
ಕೇದಾರದಿಂದ ಕರ್ನಾಟಕದ ಬೆಳಗಾವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೆ ಬಂದಿದ್ದೇವೆ. ಕೇದಾರ ನಾಥ ಕಳಿಸಿಕೊಟ್ಟಿದ್ದಕ್ಕೆ ನಾವು ಬಂದಿದ್ದೇವೆ. ನಾಲ್ಕು ತಿಂಗಳು ಕಾಲ ನಾವು ಕೇದಾರನಾಥದಲ್ಲೇ ಇರಬೇಕಾಗುತ್ತದೆ. ಆನಂತರ ವರ್ಷದಲ್ಲಿ ಆರುತಿಂಗಳು ನಿಯೋಜಿತ ಕಾರ್ಯಕ್ರಮಗಳಾಗುತ್ತವೆ. ಲಕ್ಷ್ಮೀ ಹೆಬ್ಬಾಳ್ಕರ್ ಕೇದಾರನಾಥಕ್ಕೆ ಬಂದು ದರ್ಶನ ಪಡೆದು ಭಕ್ತಿ ಅರ್ಪಣೆ ಮಾಡಿದ್ದರು. ಈ ವೇಳೆ ರಾಯಚೂರು ಜಿಲ್ಲೆಯಲ್ಲಿ ಮಹಾಪೂಜೆ ಮುಗಿಸಿ, ತುಮಕೂರು, ಚಿತ್ರದುರ್ಗದಲ್ಲಿ ಕಾರ್ಯಕ್ರಮ ಮುಗಿಸಿದ ನಂತರ ಬೆಳಗಾವಿ ಜಿಲ್ಲೆಯ ಮುತ್ನಾಳ ಮಠಕ್ಕೆ ಬರಬೇಕು ಎಂದು ಒತ್ತಾಯಿಸಿದ್ದರು. ಕೇದಾರ ನಾಥ ನಮಗೆ ಇಲ್ಲಿ ಕಳಿಸಿದ್ದಾನೆ ಇದೇ ಭೇಟಿಯ ಮುಖ್ಯ ಉದ್ದೇಶ ಎಂದು ಶ್ರೀಗಳು ಹೇಳಿದರು.
ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮತ್ತು ಕುಟುಂಬದವರು ಶ್ರೀಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.
ಧನ್ಯತಾ ಭಾವ ವ್ಯಕ್ತಪಡಿಸಿದ ಲಕ್ಷ್ಮೀ ಹೆಬ್ಬಾಳಕರ:
ಜಗದ್ಗುರುಗಳ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ “ಜಗದ್ಗುರುಗಳು ಮನೆಗೆ ಭೇಟಿ ನೀಡಿರುವುದು ಸಂತಸ ತರಿಸಿದೆ. ಕುಟುಂಬಕ್ಕೆ, ಕ್ಷೇತ್ರಕ್ಕೆ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ಕಳೆದ ತಿಂಗಳು ಕೇದಾರಪೀಠಕ್ಕೆ ಭೇಟಿ ಕೊಟ್ಟಾಗ ಸ್ವಾಮೀಜಿಗೆ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಆಷಾಢ ಮಾಸದ ಶುಭಸಂದರ್ಭದಲ್ಲಿ ಜಗದ್ಗುರುಗಳು ಮನೆಗೆ ಬಂದಿದ್ದಾರೆ. ಸಾಕ್ಷಾತ್ ಭಗವಂತನೇ ಮನೆಗೆ ಬಂದಂತ ಅನುಭವ ನಮಗಾಗಿದೆ. ಶ್ರೀಗಳ ಪಾದಪೂಜೆ ಮಾಡಿ ನಾವೆಲ್ಲರೂ ಧನ್ಯರಾಗಿದ್ದೇವೆ” ಎಂದು ಹೇಳಿದ್ದಾರೆ.
ಚಂದ್ರಶೇಖರ ಗುರೂಜಿ ಹತ್ಯೆಗೆ ಸಂತಾಪ:
ವಾಸ್ತು ತಜ್ಞ ಚಂದ್ರಶೇಕರ ಗುರೂಜಿ ಹತ್ಯೆ ಘಟನೆಗೆ ಪ್ರತಿಕ್ರಿಯಿಸಿದ ಜಗದ್ಗುರುಗಳು, ಇದು ಒಳ್ಳೆಯದಲ್ಲ, ಇದೇ ಪ್ರಕಾರ ಮಹಾರಾಷ್ಟ್ರದಲ್ಲೂ ಆಗಿತ್ತು. ಪುಣೆ, ನಾಂದೇಡ್ ಜಿಲ್ಲೆಯಲ್ಲಿ ಇಬ್ಬರು ಸ್ವಾಮೀಜಿಗಳಿಗೆ ಇದೇ ಪ್ರಕಾರ ಆಗಿತ್ತು. ಈ ದೇಶದಲ್ಲಿ ಇದು ಸರಿಯಲ್ಲ, ಇದು ನ್ಯಾಯಸಮ್ಮತವೂ ಅಲ್ಲ, ಇದು ಅಧರ್ಮ ಎಂದರು.
ಲಕ್ಷ್ಮೀ ಹೆಬ್ಬಾಳಕರ ಖಂಡನೆ:
ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಯನ್ನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಖಂಡಿಸಿದ್ದಾರೆ. ಗುರೂಜಿ ಹತ್ಯೆ ಆಶ್ಚರ್ಯದ ಜೊತೆಗೆ ದಿಗ್ಭ್ರಮೆ ಮೂಡಿಸಿದೆ. ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಭಾರಿ ಮೇಘಸ್ಫೋಟ; ಏಕಾಏಕಿ ಪ್ರವಾಹ; 8 ಜನರು ನಾಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ