Latest

ನೀರು, ಕೃಷಿ, ಕೃಷಿ ಆಧಾರಿತ ಕೈಗಾರಿಕೆಯೆಡೆ ನಮ್ಮ ಗಮನವಿರಲಿ

ಸಂಗಮೇಶ ಆರ್. ನಿರಾಣಿ
(ಸಂಚಾಲಕರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ನೀರು, ಕೃಷಿ, ಕೈಗಾರಿಕೆ ಈ ಮೂರು ಸಂಗತಿಗಳು ಒಂದಕ್ಕೊಂದು ಪೂರಕವಾಗಿವೆ. ಈ ಮೂರರಲ್ಲಿ ಯಾವುದಾದರೂ ಒಂದನ್ನೆ ಬೇರ್ಪಡಿಸಿದರೂ ನಮ್ಮ ಪ್ರಗತಿ ಸಾಧ್ಯವಿಲ್ಲ. ಒಂದು ನಾಡು ಸಮೃದ್ದಿಯಾಗಬೇಕಾದರೆ ಇವು ಮೂಲ ಆಂಶಗಳು. ನೀರಿಲ್ಲದ, ಕೃಷಿಯಿಲ್ಲದ, ಕೈಗಾರಿಕೆಗಳಿಲ್ಲದ ದೇಶವನ್ನು ಊಹಿಸಿಕೊಳ್ಳುವುದು ಯಾರ ಕನಸಿನಲ್ಲೂ ಸಾಧ್ಯವಿಲ್ಲ.

Related Articles

ಭೂಮಿಯು ಶೇ. ೭೫ರಷ್ಟು ನೀರಿನಿಂದ ಆವೃತವಾಗಿದ್ದರೂ ಮಾನವನ ದಿನನಿತ್ಯದ ಬಳಕೆಗೆ ದೊರೆಯುವ ಸಿಹಿ ನೀರಿನ ಪ್ರಮಾಣ ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಒಟ್ಟು ದೊರೆಯುವ ನೀರಿನಲ್ಲಿ ಸಮುದ್ರದ ನೀರಿನ ಪ್ರಮಾಣವೇ ಶೇ. ೯೭.೨೦ ಇದೆ. ಉಳಿದ ಶೇ. ೨.೮೦ರಷ್ಟು ನೀರು ಮಾತ್ರ ಮಾನವನ ದಿನನಿತ್ಯದ ಬಳಕೆಗೆ ದೊರೆಯುತ್ತದೆ. ಈ ಶೇ. ೨.೮ ನೀರಿನಲ್ಲಿ ಶೇ. ೮೫.೩ರಷ್ಟು ನೀರು ಕೃಷಿಗೆ ಬಳಕೆಯಾದರೆ, ಶೇ. ೬.೫ರಷ್ಟು ನೀರು ಕುಡಿಯಲು ಹಾಗೂ ಗೃಹಬಳಕೆಗೆ ಉಪಯೋಗವಾಗುತ್ತಿದೆ. ಶೇ ೧.೩ ರಿಂದ ೧.೫ರಷ್ಟು ನೀರು ಉದ್ಯಮಕ್ಕೆ ಹಾಗೂ ಶೇ ೦.೩೦ರಷ್ಟು ನೀರು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ.

ನೀರಿನ ಸದ್ಬಳಕೆ ಮತ್ತು ಸಂವರ್ಧನೆಯೇ ನಮ್ಮ ಕಾಯಕವಾಗಬೇಕು. ಇಸ್ರೇಲ್ ಎಂಬ ಅಂಗೈ ಅಗಲದ ದೇಶದ ನೀರಿನ ಸದ್ಬಳಕೆಯ ಯಶೋಗಾಥೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನೀರಿನ ಸದ್ಬಳಕೆ, ಆಧುನಿಕ ಕೃಷಿ, ಕೈಗಾರಿಕಾ ವಿಕಾಸ ಹೀಗೆ ಈ ಮೂರರಲ್ಲೂ ಕ್ರಾಂತಿಯನ್ನು ಮಾಡಿದ ಈ ಪುಟ್ಟ ದೇಶ ಇಂದು ಇಡೀ ಜಗತ್ತಿಗೆ ಆಹಾರವನ್ನು ಪೂರೈಸುವಷ್ಟು ದೊಡ್ಡದಾಗಿ ಬೆಳದಿರುವುದು ಸಣ್ಣ ಸಾಧನೆಯಲ್ಲ.

ನೀರು, ಕೃಷಿ, ಕೈಗಾರಿಕೆ ಇವುಗಳನ್ನೇ ಮೂಲತತ್ವಗಳನ್ನಾಗಿಸಿಕೊಂಡು ದೇಶ ಕಟ್ಟಿದರೆ ಎಂತಹ ಬಲಾಢ್ಯವಾಗಿ ನಿಲ್ಲಬಹುದು ಎಂಬುದಕ್ಕೆ ಇಸ್ರೇಲ್ ಸ್ಪಷ್ಟ ಉದಾಹರಣೆಯಾಗಿದೆ. ಇಸ್ರೇಲ್ ಮಾತ್ರವಲ್ಲ ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಫಿನ್‌ಲ್ಯಾಂಡ್‌ನಂತಹ ಶಕ್ತಿಶಾಲಿಗಳ ರಾಷ್ಟ್ರಗಳ ಕೃಷಿ ಪದ್ದತಿ, ನೀರಿನ ನಿರ್ವಹಣೆ, ಕೈಗಾರಿಕೆ ಬೆಳವಣಿಗೆ ಆ ದೇಶಗಳನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿವೆ.

ಕೃಷಿ ಮತ್ತು ಕೃಷಿ ಆಧಾರಿತ ಉದ್ಯಮ ವಿಕಾಸಕ್ಕೆ ಭಾರತವೇ ಜಗತ್ತಿನ ಫೇವರೆಟ್:


ಭಾರತ ವಿಶ್ವದ ಅತಿ ಪ್ರಾಚೀನ ಹಾಗೂ ಜಗತ್ತಿನ ೭ ನೇ ಅತಿದೊಡ್ಡ ಭೌಗೋಳಿಕ ಪ್ರದೇಶವನ್ನು ಹೊಂದಿರುವ ರಾಷ್ಟ್ರ. ಅಷ್ಟೇ ಅಲ್ಲ ಜಗತ್ತಿನ ಅತಿದೊಡ್ಡ ಫಲವತ್ತಾದ ಭೂಮಿಯನ್ನು ಹಾಗೂ ಅತಿಹೆಚ್ಚು ಜನಸಂಖ್ಯೆಯನ್ನು ಭಾರತ ಹೊಂದಿದೆ. ಪ್ರತಿ ೭ ಜನರಲ್ಲಿ ಒಬ್ಬ ಭಾರತೀಯನಿರುತ್ತಾನೆ. ಹೀಗಾಗಿ ನನ್ನ ಪ್ರಕಾರ ನಾವೇ ವಿಶ್ವದ ಅತಿದೊಡ್ಡ ಮಾನವ ಸಂಪನ್ಮೂಲ. ಒಂದು ಕ್ಷಣ ಯೋಚಿಸಿ, ಅತಿದೊಡ್ಡ ಫಲವತ್ತಾದ ಭೂಮಿ ನಮ್ಮದು, ಅತಿಹೆಚ್ಚು ದುಡಿಯುವ ಕೈಗಳು ಭಾರತದಲ್ಲಿವೆ.

ಗಂಗಾ, ಯಮುನಾ, ಬ್ರಹ್ಮಪುತ್ರ, ನರ್ಮದಾ, ಸಿಂಧೂ, ಕಾವೇರಿ, ಕೃಷ್ಣ, ಗೋದಾವರಿ ಸೇರಿದಂತೆ ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಅಸಂಖ್ಯಾತ ನದಿಗಳು ಈ ದೇಶದಲ್ಲಿ ನರನಾಡಿಗಳಂತೆ ಹರಿದಾಡಿವೆ. ಈ ಮಣ್ಣನ್ನು ಪಾವನಗೊಳಿಸಿವೆ. ಹೊಸ ಬಗೆಯಲ್ಲಿ ನೀರಿನ ಸದ್ಬಳಕೆ ಮಾಡಿ ನೀರಾವರಿ ಕ್ಷೇತ್ರವನ್ನು ವೃದ್ದಿಸಿ, ಆಧುನಿಕ ಕೃಷಿ ಪದ್ದತಿಯನ್ನು ಉತ್ತೇಜಿಸಿ, ಕೃಷಿಗೆ ಪೂರಕ ಮಾರುಕಟ್ಟೆ ಒದಗಿಸುವ ಕಾರ್ಖಾನೆಗಳು ಬೆಳೆದು ದುಡಿಯುವ ಕೈಗಳಿಗೆ ಉದ್ಯೋಗ ನೀಡಿದರೆ ನಮ್ಮ ದೇಶದ ಅಭಿವೃದ್ದಿ ವೇಗವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಕರ್ನಾಟಕದಲ್ಲಿ ಒಟ್ಟು ೧,೯೧,೯೭೬ ಚ.ಕಿ.ಮೀ ವಿಸ್ತೀರ್ಣದ ಭೂಮಿ ಇದೆ. ಅದರಲ್ಲಿ ೧೨೧.೬ ಲಕ್ಷ ಹೆಕ್ಟೇರ್ ಭೂಮಿ ಕೃಷಿಗೆ ಯೋಗ್ಯವಾಗಿದೆ. ಈ ಕೃಷಿ ಭೂಮಿಯಲ್ಲಿ ೩೫-೩೬ ಲಕ್ಷ ಹೆಕ್ಟೇರ್‌ಗೆ ಮಾತ್ರ ಇಲ್ಲಿಯವರೆಗೂ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುನಿರಾಬಾದ ಕಾಡಾ ವ್ಯಾಪ್ತಿಯಲ್ಲಿ ತುಂಗಭದ್ರಾ ಜಲಾಶಯದಿಂದ ೪.೬ ಲಕ್ಷ ಹೆಕ್ಟರ್, ಮಲಪ್ರಭಾ-ಘಟಪ್ರಭಾ ಕಾಡಾ ವ್ಯಾಪ್ತಿಯಲ್ಲಿ ೬.೫೦ ಲಕ್ಷ ಹೆಕ್ಟೇರ್, ಭೀಮರಾಯನಗುಡಿ ಕಾಡಾ ವ್ಯಾಪ್ತಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ೬.೪೮ ಲಕ್ಷ ಹೆಕ್ಟೇರ್, ಭದ್ರಾ ಮೇಲ್ದಂಡೆ ಯೋಜನೆಯಡಿ ೨.೬ ಲಕ್ಷ ಹೆಕ್ಟೇರ್, ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು ೭.೦ ಲಕ್ಷ ಹೆಕ್ಟೇರ್ ಹಾಗೂ ನೀರಾವರಿ ವಲಯ ವ್ಯಾಪ್ತಿಯಲ್ಲಿ ೧.೪೫ ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಟ್ಟಿದೆ.

ರೈತನೊಂದಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಲಿ


೨೦೧೮ ಮತ್ತು ೨೦೧೯ರ ಬರ ಮತ್ತು ನೆರೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಒಟ್ಟು ೩೨.೩೩೫ ಕೋಟಿ ರೂ.ಗಳಷ್ಟು ಮೊತ್ತದ ಬೆಳೆ, ಮನೆ, ಆಸ್ತಿ, ಸಾರ್ವಜನಿಕ ಕಟ್ಟಡಗಳು ನಷ್ಟವಾಗಿದೆ ಎಂದು ಕರ್ನಾಟಕ ಸರ್ಕಾರ ಅಂದಾಜಿಸಿದೆ. ಹೀಗಾಗಿ ಬರ ಮತ್ತು ನೆರೆಯಿಂದ ಸಂಕಷ್ಟಕ್ಕೆ ಒಳಗಾದ ರೈತನಿಗೆ ಆಸರೆಯಾಗಲು ನಮ್ಮ ನಿರಾಣಿ ಉದ್ಯಮ ಸಮೂಹ ಸಂಸ್ಥೆಯ ೩ ಸಕ್ಕರೆ ಕಾರ್ಖಾನೆಗಳ ರೈತರಿಗೆ ಅತ್ಯುತ್ತಮವಾದ ಬೆಲೆಯನ್ನು ಘೋಷಿಸಿದೆ. ಅದರಂತೆ ಹಣವನ್ನು ಅತಿಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.

ನಮ್ಮ ದೇಶದ ಕೃಷಿಯ ಆಸಕ್ತಿ ಕುರಿತು ಖಾಸಗಿ ಸಂಸ್ಥೆಯೊಂದು ನಡೆಸಿದ ಸಮಿಕ್ಷೆಯಲ್ಲಿ ಹಲವಾರು ಭಯಾನಕ ವಿಷಯಗಳು ನಮ್ಮೆಲ್ಲರನ್ನು ಆತಂಕಕ್ಕೆ ತಳ್ಳಿವೆ. ಸಮೀಕ್ಷೆಯ ಪ್ರಕಾರ ದಿನವೊಂದಕ್ಕೆ ೨,೦೦೦ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿಯಲ್ಲಿ ತೊಡಗಿಕೊಂಡಿರುವವರಲ್ಲಿ ಶೇ.೪೦% ರಷ್ಟು ಜನರು ಪರ್ಯಾಯ ವ್ಯವಸ್ಥೆ ದೊರೆತರೆ ಬೇರೆ ವೃತ್ತಿಯಲ್ಲಿ ತೊಡಗಿಕೊಳ್ಳಲು ಸಿದ್ದರಿದ್ದಾರೆ.

ಹೀಗೆ ಮುಂದುವರೆದರೆ ವಿಶ್ವದ ಅತಿದೊಡ್ಡ ಜನಸಂಖ್ಯೆ ಹೊಂದಿರುವ ನಮ್ಮ ದೇಶದ ಆಹಾರ ಉತ್ಪಾದನೆ ಹಾಗೂ ಆಹಾರ ಭದ್ರತೆಯ ಕುರಿತು ಚಿಂತಿಸಿದರೆ ತಲ್ಲಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ನಮ್ಮ ಸರ್ಕಾರಗಳು ವ್ಯವಸ್ಥಿತವಾದ ಕೃಷಿನೀತಿಯನ್ನು ರೂಪಿಸುವಲ್ಲಿ ಎಡವಿರುವುದು ಮತ್ತು ನಗರೀಕರಣದ ವ್ಯಾಮೋಹದಿಂದ ಹಳ್ಳಿಗಳಿಂದ ಹಾಗೂ ಕೃಷಿಯಿಂದ ದೂರವಾಗುತ್ತಿದ್ದಾರೆ. ಕೃಷಿ ಹಾಗೂ ಹಳ್ಳಿಗಳು ಉಳಿದರೆ ಮಾತ್ರ ಭಾರತ ಉಳಿಯುತ್ತದೆ ಮತ್ತು ಬೆಳೆಯುತ್ತದೆ.

ಕೃಷಿ ವಿಕಾಸವಾದಾಗ ಮಾತ್ರ ದೇಶದ ಆರ್ಥಿಕ ವರಮಾನ ವೃದ್ದಿಯಾಗುತ್ತದೆ


ಕೃಷಿ ಒಂದು ಲಾಭದಾಯಕ ಉದ್ಯಮವಾಗಿ ಬೆಳವಣಿಗೆಯಾಗಬೇಕಾದರೆ ಕೃಷಿ ಉತ್ಪನ್ನಗಳ ಮೌಲ್ಯವರ್ದನೆ ಆಗಬೇಕು. ಕೃಷಿಗೆ ಪೂರಕ ಮಾರುಕಟ್ಟೆ ಸ್ಥಳೀಯ ಮಟ್ಟದಲ್ಲಿಯೇ ದೊರೆಯಬೇಕು ಹೀಗಾಗಿ ಕೃಷಿ ಆಧಾರಿತ ಕೈಗಾರಿಕಾ ವಲಯಗಳ ವಿಸ್ತರಣೆಯಾಗಬೇಕು. ಹೈನುಗಾರಿಕೆ, ಸಕ್ಕರೆ, ಕಾಟನ್, ರೈಸ ಮಿಲ್, ಜ್ಯೂಸ್ ಇಂಡಸ್ಟ್ರಿ, ಆಯಿಲ್ ಮಿಲ್, ಫುಡ್ ಪ್ರಾಡೆಕ್ಟ್, ಕೊಳಿ-ಕುರಿ ಸಾಕಾಣಿಕೆ ಸೇರಿದಂತೆ ಕಿರು ಹಾಗೂ ಮಧ್ಯಮ ಕೈಗಾರಿಕೆಗಳ ವಿಕಾಸ ಕೃಷಿಗೆ ಲಾಭವನ್ನು ತಂದುಕೊಡುತ್ತದೆ.

ಮೈನಿಂಗ್, ಅಟೋಮೋಬೈಲ್, ಐಟಿ ಸೇರಿದಂತೆ ಉಳಿದ ಉದ್ಯಮಗಳಲ್ಲಿ ಹಣಕಾಸಿನ ವಹಿವಾಟು ಹಾಗೂ ಹಣ ವರ್ಗಾವಣೆ ಮಾಡಬಹುದು. ಆದರೆ ಹೊಸ ಹಣವನ್ನು ಸೃಷ್ಟಸುವ ಹಾಗೂ ಆರ್ಥಿಕತೆಯನ್ನು ಸದೃಢಗೊಳಿಸುವ ಶಕ್ತಿ ಇರುವುದು ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕರಣಕ್ಕೆ ಮಾತ್ರ. ಹೀಗಾಗಿ ಇಂದಿನ ವ್ಯವಸ್ಥೆ ಮತ್ತು ಸರ್ಕಾರಗಳಿಗೆ ರೈತ ಬಂಧುಗಳ ಪರವಾಗಿ ನೀಡುವ ಸ್ಪಷ್ಟ ಸಂದೇಶ ಏನೆಂದರೆ ಈ ದೇಶದ ಮೂಲ ಉದ್ಯೋಗ ವ್ಯವಸಾಯ.

ಶೇ.೭೦ರಷ್ಟು ಕುಟುಂಬಗಳು ಕೃಷಿ ಆಧಾರಿತ ಅರ್ಥವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ. ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಏಳಿಗೆಗೆ ಶ್ರಮಿಸಿ. ದೇಶ ಅಭಿವೃದ್ದಿ ಪಥದತ್ತ ಸಾಗುತ್ತದೆ. ಆಗ ನಮ್ಮ ದೇಶದ ಜಿಡಿಪಿ ಇಳಿಕೆಯಾಗಿದೆ ಎಂದು ಕೊರಗುವ ಪ್ರಮೇಯವೇ ಬರುವುದಿಲ್ಲ!

ರೈತನೇ ನಮ್ಮೆಲ್ಲರ ಪಾಲಿನ ಸೂಪರ್ ಸ್ಟಾರ್. ಅವನ ದುಡಿಮೆ, ಬೆವರಿನಂದಲೇ ಇಡೀ ಜಗತ್ತಿನ ಬೆಳಕು. ಅದಕ್ಕೆ ನಮ್ಮ ಹಿರಿಯರು ಹೇಳಿದ್ದು ಒಕ್ಕಲಿಗ ಒಕ್ಕದಿದ್ದರೆ ಜಗವೆಲ್ಲ ಬಿಕ್ಕುವುದು, ಒಕ್ಕಿದರೆ ಜಗವೆಲ್ಲ ನಕ್ಕು ನಲಿವುದು ಒಂದು ತುತ್ತು ಅನ್ನದ ಹಿಂದೆ ರೈತನ ಶ್ರಮದ ಸಾಗರವೇ ಇದೆ. ಅದಕ್ಕೆ ಲಾಲ್‌ಬಹದ್ದೂರ ಶಾಸ್ತ್ರೀ ಜೈ ಜವಾನ್, ಜೈಕಿಸಾನ್ ಎಂದು ಹೇಳಿದರು. ೨೧ನೇ ಶತಮಾನದ ಅವಶ್ಯಕತೆಯನ್ನು ಅರಿತು ಅಟಲ್‌ಜೀ ಮುಂದುವರೆದು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ ಎಂದು ಹೇಳಿದರು.

ನಮ್ಮ ಸೈನಿಕ ಮತ್ತು ರೈತ ಸದೃಢನಾದರೆ ಮಾತ್ರ ದೇಶ ಸಶಕ್ತವಾಗಲು ಸಾಧ್ಯ. ದಿನದಿಂದ ದಿನಕ್ಕೆ ನೀರಿನ ಅವಶ್ಯಕತೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ೨೧ನೇ ಶತಮಾನದ ವಿಜ್ಞಾನವನ್ನು ಉಪಯೋಗಿಸಿಕೊಂಡು, ಹರಿಯುವ ನೀರಿನ ಸದ್ಬಳಕೆ ಮಾಡಿಕೊಂಡು ಕೃಷಿಗೆ ಆಧುನಿಕತೆಯ ಸ್ಪರ್ಶ ನೀಡಿ, ರೈತ ಬೆಳೆದ ಬೆಳೆಗೆ ಕೈಗಾರಿಕೆಗಳ ಮೂಲಕ ಮಾರುಕಟ್ಟೆ ಒದಗಿಸುವುದು ನಮ್ಮನ್ನಾಳುವವರ ಜವಾಬ್ದಾರಿಯಾಗಬೇಕು.

ಕೃಷಿತೋ ನಾಸ್ತಿ ದುರ್ಭಿಕ್ಷಃ


ಕೃಷಿ ಕೇವಲ ಒಂದು ಕುಟುಂಬದ ಮೂಲ ಕೆಲಸವಾಗದೇ, ಒಂದು ಉದ್ಯಮವಾಗಿ ರೂಪಗೊಳ್ಳಬೇಕು. ಅದೊಂದು ಸಾಮಾನ್ಯ ಕೂಲಿ ಕೆಲಸ ಎಂಬ ಜಿಜ್ಞಾಸೆಯಿಂದ ಹೊರಬಂದು ಅದಕ್ಕೂ ಒಂದು ವೃತ್ತಿಪರತೆಯನ್ನು (Professionalism) ) ತುಂಬಬೇಕು. ವ್ಯವಸಾಯ ಅನಕ್ಷರಸ್ಥರು, ಶಾಲೆ ಬಿಟ್ಟವರು ಮಾಡುವ ಉದ್ಯೋಗವಾಗದೇ, ಕೃಷಿಗಾಗಿಯೇ ಹೊಸದನ್ನು ಕಲಿತು ಕೃಷಿಯನ್ನು ಉದ್ಯಮವನ್ನಾಗಿಸುವ ಗಟ್ಟಿತನ ನಮ್ಮಲ್ಲಿ ಬರಬೇಕು. ಮುಧೋಳ ಪಕ್ಕದ ಸೋರಗಾಂವ ಗ್ರಾಮದ ಯುವಕ ಸಿಎ ಪೂರ್ಣಗೊಳಿಸಿ, ಮಹಾನಗರಗಳಲ್ಲಿ ದೊಡ್ಡ ಉದ್ಯೋಗದಲ್ಲಿ ತೊಡಗಕೊಳ್ಳದೇ ಹಳ್ಳಿಗೆ ಮರಳಿ ಕೃಷಿಯಲ್ಲಿ ತೊಡಗಿಕೊಂಡು ತನ್ನ ಜಮೀನಿನಲ್ಲೇ ಪುಟ್ಟ ಇಸ್ರೇಲ್ ಸೃಷ್ಟಿಸಿರುವುದು ವಿಶೇಷ ಸಂಗತಿ. ಇದು ನಮ್ಮೆಲ್ಲ ಯುವಕರಿಗೆ ಮಾದರಿಯಾಗಲಿ.

ಉತ್ತರ ಕರ್ನಾಟಕ ನೀರಾವರಿಗೆ ಕಾಯಕಲ್ಪ ನೀಡಿ ಕೃಷಿ ಉದ್ಯಮ ಬೆಳಸಿ


೧೯೭೭ರಲ್ಲಿ ಕರ್ನಾಟಕ ಸರ್ಕಾರ ಹಿಡಕಲ್ ಡ್ಯಾಂ ನಿರ್ಮಿಸಿತು. ಅದಕ್ಕೂ ಮುಂಚೆ ಬ್ರಿಟೀಷರು ಕಟ್ಟಿದ್ದ ಧೂಪಧಾಳ ಬ್ಯಾರೇಜ್ ಘಟಪ್ರಭಾ ಎಡದಂಡೆ ಕಾಲುವೆಯ ಮುಖಾಂತರ ನಮ್ಮ ನೆಲವನ್ನು ಹಸಿರನ್ನಾಗಿಸಿತು. ಕೃಷ್ಣಾ ನದಿಗೆ ಕಟ್ಟಿದ ಆಲಮಟ್ಟಿ ಜಲಾಶಯ ಉತ್ತರ ಕರ್ನಾಟಕದ ೬ ಜಿಲ್ಲೆಗಳಿಗೆ ಬದುಕನ್ನು ರೂಪಿಸಿಕೊಟ್ಟಿದೆ. ಯುಕೆಪಿ ೩ನೇ ಹಂತದ ಕಾಮಗಾರಿ ಪೂರ್ಣಗೊಂಡರೆ ಕರ್ನಾಟಕದ ಪಾಲಿನ ಕೃಷ್ಣೆಯ ನೀರಿನ ಸಂಪೂರ್ಣ ಬಳಕೆ ಮಾಡಿದಂತಾಗುತ್ತದೆ. ಆ ಮೂಲಕ ಈ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಗುತ್ತದೆ.

ಒಂದು ಪ್ರದೇಶದ ಅಭಿವೃದ್ದಿಗೆ ನೀರಾವರಿ ಯೋಜನೆಗಳು ಮತ್ತು ಕೈಗಾರಿಕೆಗಳು ಬಹುದೊಡ್ಡ ಪಾತ್ರವಹಿಸುತ್ತವೆ ಎಂಬುದನ್ನು ಸಾಕ್ಷಾತ್ಕರಿಸಲು ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅವಕಾಶಗಳಿವೆ. ದಕ್ಷೀಣಕ್ಕೆ ಹೋಲಿಸಿದರೆ ಉತ್ತರದಲ್ಲಿ ಬಹುಬೇಡಿಕೆಯ ಹಾಗೂ ಅತಿದೊಡ್ಡ ಕೃಷಿಯೋಗ್ಯ ಭೂಮಿ ಇದೆ. ಕೃಷ್ಣೆಯ ಸಂಪೂರ್ಣ ಬಳಕೆ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳ ಸಮೃದ್ದತೆಗಾಗಿ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಕಾಳಿ ನದಿಯ ನೀರಿನ ಬಳಕೆ, ತುಂಗಭದ್ರೆಯ ಉಪನದಿ ವರದಾ ನದಿಗೆ ಶರಾವತಿ ನೀರಿನ ಬಳಕೆ, ತುಂಗಭದ್ರಾ ಡ್ಯಾಂ ಪುನಶ್ಚೇತನ ಮುಂತಾದ ಕಾರ್ಯಗಳನ್ನು ಸರ್ಕಾರ ಗಂಭೀರವಾಗಿ ಪರಗಣಿಸಿ, ಉತ್ತರ ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು.

ನೀರಾವರಿ ಸೌಲಭ್ಯ ನೀಡಿ ಕೃಷಿ ಸಮೃದ್ದಗೊಳಿಸಿ, ಕಾರ್ಖಾನೆ ಕಟ್ಟಿದ ಮಹನೀಯರು


ಮೈಸೂರು ಮಹಾರಾಜರು ಕೆಆರ್‌ಎಸ್ ಜಲಾಶಯ ನಿರ್ಮಾಣ ಮಾಡಿದ್ದರಿಂದ ಮಂಡ್ಯ-ಮೈಸೂರು ಭಾಗದ ಒಣಬೇಸಾಯ ಭೂಮಿಗಳು ಸಮೃದ್ದವಾದವು. ರೈತರು ಕಬ್ಬು ಬೆಳೆಯಲು ಪ್ರಾರಂಭಿಸಿದರು. ಬೆಳೆದ ಕಬ್ಬಿಗೆ ಮಾರುಕಟ್ಟೆ ಒದಗಿಸುವುದು ಕಷ್ಟವಾದಾಗ ಬ್ರಿಟೀಷ್ ಅಧಿಕಾರಿ ಕೋಲ್ಮನ್ ಮಹಾರಾಜರು ಹಾಗೂ ಸ್ಥಳೀಯರ ಸಹಕಾರದಿಂದ ಮೈ ಶುಗರ್ಸ್ ಕಾರ್ಖಾನೆ ಆರಂಭಿಸಿದರು.

ಮಹಾರಾಷ್ಟ್ರದಲ್ಲಿ ವಸಂತದಾದಾ ಪಾಟೀಲರು ಸಾಂಗ್ಲಿ, ಕೊಲ್ಹಾಪೂರ, ಕರಾಡ ಜಿಲ್ಲೆಗಳನ್ನು ಸಂಪೂರ್ಣ ನೀರಾವರಿಗೆ ಒಳಪಡಿಸಿ ರೈತರ ಅನುಕೂಲಕ್ಕೆ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿದರು. ಶರದ್ ಪವಾರರು ಸಾತಾರಾ, ಕರಾಡ ಭಾಗದಲ್ಲಿ ನೀರಾವರಿ ಸೌಕರ್ಯ ನೀಡಿ ಸಕ್ಕರೆ ಕಾರ್ಖಾನೆ ಕಟ್ಟಿದರು.

ಲಾತೂರು, ನಾಂದೇಡ ಜಿಲ್ಲೆಯಲ್ಲಿ ವಿಲಾಸರಾವ್ ದೇಶಮುಖ ಮಾಂಜ್ರಾ ಜಲಾಶಯ ಹಾಗೂ ವಾಂಜರಖೇಡಾ, ಲಾಖ್ರಾ, ನಾಗಝರಿ, ಸಾಯ್, ಜವಳಾ ಬ್ಯಾರೇಜ್ ಸ್ಥಾಪಿಸಿ ರೈತರ ಅನುಕೂಲಕ್ಕಾಗಿ ವಿಕಾಸ್ ಗ್ರುಪ್ಸ್‌ನಿಂದ ೮ ಸಕ್ಕರೆ ಕಾರ್ಖಾನೆ ತೆರದಿದ್ದಾರೆ. ವಿಠ್ಠಲರಾವ್ (ಬಬುನದಾದಾ) ಶಿಂಧೆರವರು ಸೊಲಾಪೂರ ಜಿಲ್ಲೆಯಲ್ಲಿ ನೀರಾವರಿ ಕ್ರಾಂತಿ ಮಾಡಿ ನಂತರ ಸಕ್ಕರೆ ಉದ್ಯಮದ ಮೂಲಕ ರೈತರಿಗೆ ಮಾರುಕಟ್ಟೆ ಒದಗಿಸಿದರು. ಭೀಡ್ ಜಿಲ್ಲೆಯಲ್ಲಿ ಸುಂದರಾವ್ ಸೊಳಂಕೆರವರು ಮಾಜಲಗಾಂವ್ ಜಲಾಶಯ ನಿರ್ಮಾಣ ಹಾಗೂ ಅವರ ಮಗ ಪ್ರಕಾಶ ಸಾಳುಂಕೆರವರು ಸೊನ್ನಾತಡಿ, ಉಪಳಿ, ಅರಣವಾಡಿ ಜಲಾಶಯ ನಿರ್ಮಿಸಿ ಮಾಜಲಗಾಂವ್ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿದರು.
ಅದೇ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಸಹೋದರ ಮುರುಗೇಶ ನಿರಾಣಿಯವರು ಹೆರಕಲ್ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ, ಬದಾಮಿ ತಾಲೂಕಿನ ೧೫,೩೩೪ ಹೆಕ್ಟೇರ್ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ, ಎಂ.ಆರ್.ಎನ್. ಕೇನ್ ಪಾವರ್ ಲಿ., ಕಾರ್ಖಾನೆ ಕಟ್ಟಿದ್ದಾರೆ. ಆ ಮೂಲಕ ನೀರು, ಕೃಷಿ, ಕೈಗಾರಿಕೆ ಎಂಬ ಸೂತ್ರದಡಿ ತಮ್ಮ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿಗೆ ಒಳಪಡಿಸುವ ಸಂಕಲ್ಪದಡಿ ಕಾರ್ಯಪ್ರವೃತ್ತರಾಗಿದ್ದಾರೆ.

ಕೆ.ಎಲ್.ರಾವ್, ಸರ್ ಎಂ. ವಿಶ್ವೇಶ್ವರಯ್ಯ, ಎಸ್. ಜಿ. ಬಾಳೆಕುಂದ್ರಿ ಸೇರಿದಂತೆ ಶ್ರೇಷ್ಟ ಮಹನೀಯರು ಶಾಶ್ವತ ನೀರಾವರಿ ಯೋಜನೆಗಳನ್ನು ಕೊಟ್ಟು ನಮ್ಮ ದೇಶವನ್ನು ಸೃಮೃದ್ದಗೊಳಿಸಿದ್ದಾರೆ. ಜವಾಹರಲಾಲ ನೆಹರು ಪ್ರಥಮ ಪಂಚವಾರ್ಷಿಕ ಯೋಜನೆಯಲ್ಲಿ ನೀರಾವರಿ ಮತ್ತು ಇಂಧನಕ್ಕಾಗಿಯೇ ಶೇ. ೨೭ರಷ್ಟು ಹಣ ನಿಗದಿ ಮಾಡಿದ್ದರಿಂದ ದೇಶದಲ್ಲಿ ಬೃಹತ್ ನೀರಾವರಿ ಯೋಜನೆಗಳು ಜಾರಿಯಾದವು.

ಮಣ್ಣು ಮತ್ತು ನೀರನ್ನು ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ತಲುಪಿಸೋಣ

ಪ್ರಕೃತಿಯ ಲಕ್ಷೋಪಲಕ್ಷ ಜೀವರಾಶಿಗಳಲ್ಲಿ ಮಾನವನು ಒಂದು ಕೊಂಡಿ ಮಾತ್ರ. ಅಸಾಮಾನ್ಯ ಬುದ್ದಿಶಕ್ತಿಯಿಂದ ಬೌದ್ದಿಕವಾಗಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಬೆಳದಿರಬಹುದು. ಆದರೆ ಮಣ್ಣು ಮತ್ತು ನೀರಿನ ಮೇಲೆ ಮಾನವನಂತೆ ಎಲ್ಲ ಜೀವರಾಶಿಗಳಿಗೆ ಸಮಾನ ಹಕ್ಕಿದೆ. ಮನುಷ್ಯನ ಅತಿ ಆಸೆಯ ಫಲವಾಗಿ ಇಂದು ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತದೆ. ಮಣ್ಣು ಮತ್ತು ನೀರು ನಾವು ಗಳಿಸಿದ ಆಸ್ತಿಯಲ್ಲ ನಮ್ಮ ಹಿರಿಯರು ನಮಗೆ ಕೊಟ್ಟ ಬಳುವಳಿ. ಇದನ್ನು ಮುಂದಿನ ಪಿಳಿಗೆಗೆ ಜತನವಾಗಿ ತಲುಪಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ಅತಿಯಾದ ರಸಾಯನಿಕ ಬಳಸಿ ಮಣ್ಣಿನ ಫಲವತ್ತತೆ ಹಾಳು ಮಾಡುವ ಬದಲು ದೇಸಿ ಕೃಷಿಗೆ ಉತ್ತೇಜನ ನೀಡೋಣ. ಮಳೆ ನೀರು ಕೊಯ್ಲು, ಕರೆ-ಕಟ್ಟೆಗಳು ಹಾಗೂ ಜಲಮೂಲಗಳ ಸಂರಕ್ಷಣೆ, ಪ್ರತಿಯೊಬ್ಬರು ವ್ಯಕ್ತಿಗತವಾಗಿ ಅವಶ್ಯವಿರುವಷ್ಟೆ ನೀರನ್ನು ಬಳಸುವುದು. ಕೃಷಿ ಹಾಗೂ ಕೈಗಾರಿಕೆಗಳಲ್ಲಿ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಮಾಡುವುದು ಹಾಗೂ ಬಳಕೆ ಮಾಡಿದ ನೀರನ್ನು ಪುನರ್ ಶುದ್ದಿಕರಿಸಿ ಬಳಕೆ ಮಾಡುವುದು ಇವೇ ಜಲ ಸಂರಕ್ಷಣೆ ಮತ್ತು ಸಂವರ್ಧನೆಯ ಮೂಲತತ್ವಗಳು.

ಭಾರತದ ನೀರಿಗೆ ಮತ್ತು ಫಲವತ್ತಾದ ಮಣ್ಣಿಗೆ ಜಗತ್ತಿಗೆ ಅನ್ನ ನೀಡುವ ಮಹಾನ್ ಶಕ್ತಿಯಿದೆ. ತಾಯಿ ಭಾರತಿ ನಮ್ಮ ನಮ್ಮನ್ನು ಸೇರಿದಂತೆ ವಿಶ್ವವನ್ನು ಸಲುಹುವ ಅನ್ನಪೂರ್ಣೆಶ್ವರಿ. ಇದನ್ನು ಅರಿತು ನೀರಾವರಿ, ಕೃಷಿ, ಕೃಷಿ ಆಧಾರಿತ ಕೈಗಾರಿಕೆಗಳೆಡೆಗೆ ನಮ್ಮ ಗಮನ ಕೇಂದ್ರಿಕೃತವಾಗಬೇಕು. ನೀರು ಮನುಕುಲದ ಶ್ರೇಷ್ಟ ಅಮೃತ, ಜಲಾಶಯಗಳು ಅಕ್ಷಯಪಾತ್ರೆ, ರೈತ ನಮ್ಮೆಲ್ಲರ ಪಾಲಿನ ನಡೆದಾಡುವ ದೈವ, ಕೃಷಿ ಆಧಾರಿತ ಕೈಗಾರಿಕೆಗಳು ಆಧುನಿಕ ಭಾರತದ ದೇವಾಲಯಗಳು ಎಂಬುದನ್ನು ಅರಿತು ದಿಟ್ಟ ಹೆಜ್ಜೆ ಇಟ್ಟರೆ ಅದುವೇ ವಿಶ್ವಗುರು ಭಾರತ, ನಾವೇ ಜಗತ್ತಿನ ಪಾಲಿನ ದೊಡ್ಡಣ್ಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button