*ಐಸಿಯುಗೆ ದಾಖಲಾಗಿದ್ದ ಮಹಿಳೆಯ 4 ತಿಂಗಳ ಕಂದನಿಗೆ ಎದೆಹಾಲುಣಿಸಿ ಮಮತೆ ತೋರಿದ ಪೊಲೀಸ್ ಅಧಿಕಾರಿ*
ಪ್ರಗತಿವಾಹಿನಿ ಸುದ್ದಿ; ಕೊಚ್ಚಿ: ಮಹಿಳೆಯೊಬ್ಬರ ಅಳುತ್ತಿದ್ದ ನಾಲ್ಕು ತಿಂಗಳ ಮಗುವಿಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎದೆಹಾಲುಣಿಸಿ ಮಮತೆ ತೋರಿದ ಘಟನೆ ಕೇರಳದಲ್ಲಿ ನಡೆದಿದೆ.
ಪಾಟ್ನಾ ಮೂಲದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಕೇರಳದ ಎರ್ನಾಕುಲಂ ಆಸ್ಪತ್ರೆಗೆ ದಾಖಲಾಗಿದ್ದು, ತಾಯಿಯ ಪಕ್ಕದಲ್ಲೇ ಮಲಗಿ ಹಸುವಿನಿಂದ ಅಳುತ್ತಿದ್ದ ನಾಲ್ಕು ತಿಂಗಳ ಕಂದಮ್ಮನನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿ ಆರ್ಯಾ, ಮಗುವನ್ನು ಎತ್ತಿಕೊಂಡು ಎದೆಹಾಲುಣಿಸಿ ಸಂತೈಸಿದ್ದಾರೆ.
ಪಾಟ್ನಾದ ಮಹಿಳೆ ಕೆಲ ಸಮಯದಿಂದ ಕೇರಳದ ಎರ್ನಾಕುಲಂನಲ್ಲಿ ತನ್ನ ನಾಲ್ಕು ಮಕ್ಕಳ ಜೊತೆ ತಂಗಿದ್ದು, ಆಕೆ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಕೆಯ ಪತಿ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದಾರೆ. ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಾಗಿದ್ದು, ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಕ್ಕಳು ಆಸ್ಪತ್ರೆಯ ಹೊರಭಾಗದಲ್ಲಿದ್ದರೆ ನಾಲ್ಕನೇಯ ಮಗು ನಾಲ್ಕು ತಿಂಗಳ ಹಸುಗೂಸು ತಾಯಿ ಪಕ್ಕದ ಬೆಡ್ ನಲ್ಲೇ ಹಸಿವಿನಿಂದ ಕಂಗೆಟ್ಟು ಅಳುತ್ತಿತ್ತು. ಇದನ್ನು ಕಂಡ ಮಹಿಳಾ ಪೊಲೀಸ್ ಅಧಿಕಾರಿ, 9 ತಿಂಗಳ ಮಗುವಿನ ತಾಯಿ ಆರ್ಯಾ, ಮಗುವನ್ನು ಎತ್ತಿಕೊಂಡು ಎದೆಹಾಲುಣಿಸಿ ಮಮತೆ ತೋರಿದ್ದಾರೆ.
ಪೊಲೀಸ್ ಅಧಿಕಾರಿಯ ಮಮತೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾಲ್ಕು ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದಿರುವ ಕಾರಣಕ್ಕೆ ಸದ್ಯ ಮಕ್ಕಳನ್ನು ಶಿಶುಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ