
ಪ್ರಗತಿವಾಹಿನಿ ಸುದ್ದಿ: ಕೇರಳದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಜೈಲಿನಿಂದ ತಪ್ಪಿಸಿಕೊಂಡು ಬಾವಿಯಲ್ಲಿ ಅಡಗಿ ಕುಳಿತಿದ್ದ ಘಟನೆ ನಡೆದಿದೆ.
2011ರಲ್ಲಿ ಕೇರಳದಲ್ಲಿ ನಡೆದಿದ್ದ ಸೌಮ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಗೋವಿಂದಚಾಮಿ ಭಾರಿ ಭದ್ರತೆ ಇರುವ ಕಣ್ಣೂರು ಕೇಂದ್ರ ಜೈಲು ಪಾಲಾಗಿದ್ದ. ಇಂದು ಬೆಳಿಗ್ಗೆ ಜೈಲಿನಿಂದ ತಪ್ಪಿಸಿಕೊಂಡಿದ್ದ ಆರೋಪಿ, ಕಣ್ಣೂರು ನಗರ ವ್ಯಾಪ್ತಿಯ ಥಲಾಪ್ ನಲ್ಲಿರುವ ಪಾಳುಬಾವಿಯಲ್ಲಿ ಅಡಗಿ ಕುಳಿತಿದ್ದ.
ಶೋಧ ಕಾರ್ಯಾಚರಣೆ ಮೂಲಕ ಪೊಲೀಸರು ಮತ್ತೆ ಆರೋಪಿಯನ್ನು ಬಂಧಿಸಿದ್ದಾರೆ. 2011ರ ಫೆಬ್ರವರಿ 1ರಂದು ಎರ್ನಾಕುಲಂ ನಿಂದ ಶೊರ್ನೂರಿಗೆ ರಲಿನಲ್ಲಿ ಪ್ರಯಾಣಿಸುತ್ತಿದ್ದ ಸೌಮ್ಯಾ ಎಂಬ 23 ವರ್ಷದ ಯುವತಿ ಮೇಲೆ ಗೋವಿಂದಚಾಮಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಪ್ರಕರಣದಲ್ಲಿ ಗೋವಿಂದಚಾಮಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ದೇಶಾದ್ಯಂತ ಭಾರಿ ಸುದ್ದಿಯಾಗಿದ್ದ ಈ ಪ್ರಕರಣ ಸಾರಿಗೆಗಳಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಹುಟ್ಟು ಹಾಕುವಂತೆ ಮಾಡಿತ್ತು.