ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಮಹಿಳೆಯೊಬ್ಬರು ಹಾವು ಕಚ್ಚಿ ಎರಡು ತಿಂಗಳ ಹಿಂದೆ ಕೇರಳದಲ್ಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೊಂದು ಪೂರ್ವನಿಯೀಜಿತ ಹತ್ಯೆಯ ಸಂಚು ಎಂದು ಪೊಲೀಸರು ಶಂಕಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಎಸ್.ಉತ್ತರ (25) ಕೊಲೆಯಾದ ಮಹಿಳೆ. ಮೃತ ಮಹಿಳೆಯ ತಂದೆ ಏರಂ ವೆಳ್ಳಾಶೇರಿಯ ವಿಜಯಸೇನ ನೀಡಿದ್ದ ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮಹಿಳೆಯ ಪತಿಯೇ ಆಕೆಯನ್ನು ಹತ್ಯೆಗೈದಿದ್ದಾನೆ ಎಂಬ ಅಂಶ ಬಯಲಾಗಿದೆ.
ಕೆಲ ದಿನಗಳ ಹಿಂದೆ ಉತ್ತರಾಗೆ ಹಾವು ಕಚ್ಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇಗ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು ಎಂದು ಹೇಳಲಾಗಿತ್ತು. ಆದರೆ ಉತ್ತರಾಳ ಪೋಷಕರು ಆಕೆಯ ಪತಿಯ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಳಿಯ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಆರೋಪಿ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. 10 ಸಾವಿರ ರೂ. ಪಾವತಿಸಿ ಹಾವಾಡಿಗ ಸುರೇಶ್‍ನಿಂದ ಹಾವನ್ನು ತಂದಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ಅಂದುಕೊಂಡಿದ್ದ ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿದ್ದಾಗಲೇ ಆಕೆ ಸಾವನ್ನಪ್ಪಿದ್ದಳು. ಆಸ್ಪತ್ರೆಯಲ್ಲಿ ಮತ್ತೆ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು.
ಈ ಕುರಿತು ಮಾತನಾಡಿರುವ ಕೊಲ್ಲಂ ಗ್ರಾಮೀಣ ಪೊಲೀಸ್ ಅಧೀಕ್ಷಕ ಎಸ್.ಹರಿಶಂಕರ್, ಇದೊಂದು ವಿಚಿತ್ರ ಪ್ರಕರಣವಾಗಿದೆ. ಮೂವರು ಆರೋಪಿಗಳು ನಮ್ಮ ವಶದಲ್ಲಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಯಾವುದೇ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ