ಖಾನಾಪುರ: ಮುಂದುವರೆದ ಮಳೆಯ ಅಬ್ಬರ: ಗೋಡೆ ಕುಸಿತ: ಹಲವೆಡೆ ಸಂಪರ್ಕ ಕಡಿತ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ನಡೆಯುತ್ತಿರುವ ಮಳೆಯ ಅಬ್ಬರ ಭಾನುವಾರವೂ ಮುಂದುವರೆದಿದೆ. ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ ಮತ್ತು ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಮಳೆಯ ಅಬ್ಬರ ಎಂದಿನಂತೆ ಮುಂದುವರೆದಿದ್ದು, ಸತತವಾಗಿ ಸುರಿಯುತ್ತಿರುವ ಮಳೆ ಹಲವು ಅವಾಂತರಗಳಿಗೆ ಕಾರಣವಾಗಿದೆ.
ಭೀಮಗಡ ಅಭಯಾರಣ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಭಂಡೂರಿ ಹಳ್ಳದಲ್ಲಿ ಪ್ರವಾಹವೇರ್ಪಟ್ಟಿದೆ. ಪರಿಣಾಮ ದೇಗಾಂವ-ಹೆಮ್ಮಡಗಾ ಮತ್ತು ಪಾಲಿ-ಮೆಂಡಿಲ್ ಗ್ರಾಮಗಳ ನಡುವಿನ ರಸ್ತೆ ಮತ್ತು ಸೇತುವೆಯ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದೆ. ದೇಗಾಂವ ಮತ್ತು ಮೆಂಡಿಲ್ ಗ್ರಾಮಗಳಿಗೆ ಇರುವ ಏಕೈಕ ರಸ್ತೆಗಳು ಜಲವೃತಗೊಂಡ ಪರಿಣಾಮ ಭಾನುವಾರ ಮುಂಜಾನೆಯಿಂದಲೇ ಎರಡೂ ಗ್ರಾಮಗಳು ಮುಖ್ಯ ವಾಹಿನಿಯಿಂದ ಸಂಪರ್ಕ ಕಳೆದುಕೊಂಡಿವೆ. ಮಹದಾಯಿ ನದಿಯಲ್ಲಿ ಪ್ರವಾಹವೇರ್ಪಟ್ಟ ಕಾರಣ ನೇರಸಾ-ಗವ್ವಾಳಿ, ಅಮಗಾಂವ-ಚಿಕಲೆ ಮತ್ತು ಘೋಸೆ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ.
ತಾಲೂಕಿನ ಚಾಪಗಾಂವ ಗ್ರಾಮದ ಯಲ್ಲಪ್ಪ ಮಾದಾರ ಅವರ ಮನೆಯ ಗೋಡೆಯೊಂದು ಭಾನುವಾರ ಕುಸಿದಿದೆ. ಇದರಿಂದ ಅವರಿಗೆ ೫೦ ಸಾವಿರ ಆರ್ಥಿಕ ನಷ್ಟ ಉಂಟಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಗವ್ವಾಳಿ, ಅಮಗಾಂವ, ಕೃಷ್ಣಾಪುರ, ಹುಳಂದ, ಸಡಾ, ದೇಗಾಂವ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರೆದಿದೆ. ಭಾನುವಾರದವರೆಗೆ ಕಣಕುಂಬಿಯಲ್ಲಿ ೮.೪ ಸೆಂ.ಮೀ, ಖಾನಾಪುರ ಪಟ್ಟಣ, ಲೋಂಡಾ, ಗುಂಜಿ ಹಾಗೂ ಜಾಂಬೋಟಿಯಲ್ಲಿ ೫ ಸೆಂ.ಮೀ, ನಾಗರಗಾಳಿ, ಅಸೋಗಾಗಳಲ್ಲಿ ಸರಾಸರಿ ೬ ಸೆಂ.ಮೀ ಮತ್ತು ಬೀಡಿ, ಕಕ್ಕೇರಿಯಲ್ಲಿ ೨ ಸೆಂ.ಮೀ ಮಳೆಯಾಗಿದೆ.
ಸಿಂಧನೂರು-ಹೆಮ್ಮಡಗಾ ಹೆದ್ದಾರಿಯ ಅಲಾತ್ರಿ ಹಳ್ಳದ ಸೇತುವೆಯ ಮೇಲೆ ನೀರಿನ ಹರಿವು ಕ್ಷೀಣಿಸಿದ್ದರಿಂದ ಭಾನುವಾರ ಮುಂಜಾನೆಯಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಆರಂಭವಾಗಿದೆ. ಲೋಂಡಾ-ವರ್ಕಡ ಮತ್ತು ಸಾತನಾಳಿ-ಮಾಚಾಳಿ ಮಾರ್ಗಮಧ್ಯದ ಹಳ್ಳಗಳ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರೆದಿದೆ. ಶಾಸಕ ವಿಠ್ಠಲ ಹಲಗೇಕರ ಅವರ ಸೂಚನೆ ಮೇರೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ