ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಅರವಿಂದ್ ಪಾಟೀಲ್ ಬಿಜೆಪಿ ಅಭ್ಯರ್ಥಿ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆನ್ನುವ ಕುರಿತು ಸ್ವಪಕ್ಷೀಯ ಸದಸ್ಯರೇ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸವದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾನಾಪುರ ವಿಧಾನಸಭಾ ಚುನಾವಣೆಗೆ ಮುಂದಿನ ಬಿಜೆಪಿ ಅಭ್ಯರ್ಥಿ ಅರವಿಂದ್ ಪಾಟೀಲ್ ಎಂದು ಡಿಸಿಎಂ ಸವದಿ ಹೇಳಿಕೆ ನೀಡಿದ್ದರೆನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಸ್ಥಳೀಯ ಮುಖಂಡರು, ಕ್ಷೇತ್ರದ ಬಿಜೆಪಿ ಮುಖಂಡರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತುಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಪ್ರಮೋದ್ ಕೊಚೇರಿ, ಮುಂದಿನ ಅಭ್ಯರ್ಥಿ ಅರವಿಂದ್ ಪಾಟೀಲ್ ಎಂದು ಹೇಳಲು ಲಕ್ಷ್ಮಣ ಸವದಿಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ಅರವಿಂದ್ ಪಾಟೀಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ನಾವೆಲ್ಲ ರಾಜೀನಾಮೆ ನಿಡಲು ಸಿದ್ಧ ಎಂದು ಗುಡುಗಿದ್ದಾರೆ.
ಇದೇ ವೇಳೆ ಮಾತನಾಡಿದ ರಾಜ್ಯ ಕಾರ್ಯಕಾರಣಿ ಸದಸ್ಯೆ ಧನಶ್ರಿ ಸರ್ ದೇಸಾಯಿ ಜಾಂಬೋಟ್ಕರ್, ಖಾನಾಪುರ ಕ್ಷೇತ್ರದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿ ಬಿಜೆಪಿ ಪಕ್ಷವನ್ನು ನಾವು ಕಟ್ಟಿರುವಾಗ ಅರವಿಂದ ಪಾಟೀಲ್ ರನ್ನು ಅಭ್ಯರ್ಥಿ ಎಂದು ಘೋಷಿಸುವುದು ಯಾವ ನ್ಯಾಯ? ಒಂದು ವೇಳೆ ಅರವಿಂದ್ ಪಾಟೀಲ್ ಅವರಿಗೆ ಟಿಕೆಟ್ ನೀಡಬೇಕು ಎಂದಾದರೆ ಲಕ್ಷ್ಮಣ ಸವದಿಯವರು ತಮ್ಮ ಅಥಣಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸಲಿ ಎಂದು ಸವಾಲು ಹಾಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ