*ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಪ್ರೇಯಸಿಯನ್ನು ಕೊಂದುಆತ್ಮಹತ್ಯೆಗೆ ಶರಣಾದ ಪ್ರಿಯಕರ*

ಪ್ರಗತಿವಾಹಿನಿ ಸುದ್ದಿ: ಖಾನಾಪುರ: ಮದುವೆಯಾಗಿ ಮಕ್ಕಳಿರುವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸಂಸಾರಸ್ಥ ವ್ಯಕ್ತಿಯೊಬ್ಬ ಪ್ರೇಯಸಿಯನ್ನು ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೀಡಿ ಗ್ರಾಮದ ಹೊರವಲಯದ ನಯಾನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಆನಂದ ರಾಜು ಸುತಾರ (30) ಮತ್ತು ರೇಶ್ಮಾ ಶಿವಾನಂದ ತಿರವೀರ (28) ಮೃತ ದುರ್ದೈವಿಗಳು.
ಘಟನೆಯ ವಿವರ:
ಆನಂದ-ರೇಶ್ಮಾ ನಡುವೆ ಮುಂಚಿನಿಂದಲೂ ಅನೈತಿಕ ಸಂಬಂಧವಿತ್ತು. ಇವರಿಬ್ಬರೂ ವಿವಾಹಿತರಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ. ರೇಶ್ಮಾ ವಿವಾಹಿತೆ ಎಂದು ಗೊತ್ತಿದ್ದರೂ ಆನಂದ ಅವಳ ಜೊತೆ ಸಂಬಂಧವನ್ನು ಮುಂದುವರೆಸಿದ್ದ. ಇವರಿಬ್ಬರೂ ಮೇಲಿಂದ ಮೇಲೆ ಭೇಟಿಯಾಗುತ್ತಿದ್ದರು ಮತ್ತು ಮೊಬೈಲ್ ನಲ್ಲಿ ಗಂಟೆಗಟ್ಟಲೇ ಮಾತಾಡುತ್ತಿದ್ದರು. ರೇಶ್ಮಾಳ ಮನೆಗೆ ಆನಂದ ಮೇಲಿಂದ ಮೇಲೆ ಭೇಟಿ ನೀಡುತ್ತಿದ್ದ. ರೇಶ್ಮಾ ಮತ್ತು ಆನಂದನ ನಡುವಿನ ಸಂಬಂಧದ ವಿಷಯ ರೇಶ್ಮಾಳ ಪತಿ ಶಿವಾನಂದ ಅವರಿಗೆ ಕೆಲ ದಿನಗಳ ಹಿಂದೆ ತಿಳಿದಿತ್ತು. ಅವರು ಹಿರಿಯರ ಮೂಲಕ ನಂದಗಡ ಪೊಲೀಸ್ ಠಾಣೆಗೆ ತೆರಳಿ ಆನಂದನ ವಿರುದ್ಧ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ನಂದಗಡ ಪೊಲೀಸರು ಠಾಣೆಗೆ ಕರೆಸಿ ರೇಶ್ಮಾಳ ತಂಟೆಗೆ ಹೋಗದಂತೆ ತಿಳಿಹೇಳಿ ತಪ್ಪೊಪ್ಪಿಗೆ ಬರೆಸಿಕೊಂಡು ಕಳಿಸಿದ್ದರು. ಇದಾದ ಬಳಿಕ ಹಲವು ದಿನಗಳ ಕಾಲ ರೇಶ್ಮಾ-ಆನಂದ ಪರಸ್ಪರ ಮಾತಾಡಿರಲಿಲ್ಲ.
ತನ್ನ ಪ್ರೇಯಸಿ ತನ್ನಿಂದ ಅಂತರ ಕಾಯ್ದುಕೊಂಡಿದ್ದರಿಂದ ಕಸಿವಿಸಿಗೊಂಡಿದ್ದ ಆನಂದ ಶುಕ್ರವಾರ ಆಕೆಯ ಮನೆಗೆ ನುಗ್ಗಿ ಆಕೆಯ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ರೇಶ್ಮಾ ಸಾವನ್ನಪ್ಪುತ್ತಿದ್ದಂತೆ ತಾನೂ ಚಾಕುವಿನಿಂದ ಇರಿದುಕೊಂಡಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆನಂದನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ನಂದಗಡ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.