ಪ್ರಗತಿವಾಹಿನಿ ವಿಶೇಷ
ಮನುಷ್ಯ ಆರೋಗ್ಯಕರವಾಗಿ ಜೀವನ ನಡೆಸಲು ಪ್ರತಿಯೊಂದು ಅಂಗಾಂಗವೂ ಆರೋಗ್ಯಕರವಾಗಿರುವುದು ಮುಖ್ಯ. ಅದರಲ್ಲೂ ಹೃದಯ, ಕಿಡ್ನಿ, ಜೀರ್ಣಾಂಗವು ಸಮಸ್ಯೆಗೀಡಾದರೆ ಬದುಕು ಸಂಕಷ್ಟವಾಗುತ್ತದೆ.
ಇತ್ತೀಚಿನ ಯಾಂತ್ರೀಕೃತ ಜೀವನ ಶೈಲಿ ಮತ್ತು ಅವೈಜ್ಞಾನಿಕ ಆಹಾರ ಪದ್ಧತಿಗಳು ಈ ಮೂರು ಅಂಗಗಳ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತಿದೆ. ಅದರಲ್ಲೂ ಕಿಡ್ನಿ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಕಿಡ್ನಿ ಅಥವಾ ಮೂತ್ರಪಿಂಡದ ರೋಗ ಇತ್ತೀಚಿನ ದಿನಗಳಲ್ಲಿ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಸುಮಾರು 850 ಮಿಲಿಯನ್ ಜನರಲ್ಲಿ ಈ ಸಮಸ್ಯೆಯಿದೆ ಎಂದು ಹೇಳಲಾಗುತ್ತಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ(ಸಿಕೆಡಿ) ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, 2040ರ ಹೊತ್ತಿಗೆ ಜಗತ್ತಿನಲ್ಲಿ ಸಾವಿಗೆ ಕಾರಣವಾಗುವ 5ನೇ ಕಾಯಿಲೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಮಿಲಿಯನ್‍ಗಟ್ಟಲೆ ಹಣ ವೆಚ್ಚ
ಪ್ರಸ್ತುತ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ವಾರ್ಷಿಕ ಆರೋಗ್ಯ ವಲಯಕ್ಕೆ ಮೀಸಲಿಡುವ ಬಜೆಟ್‍ನಲ್ಲಿ ಶೇಕಡಾ 2 ರಿಂದ 3ರಷ್ಟು ಮೂತ್ರಪಿಂಡದ ಡಯಾಲಿಸಿಸ್ ಮತ್ತು ಕಸಿಗೆ ವೆಚ್ಚವಾಗುತ್ತಿದೆ. ಇನ್ನು ಕಡಿಮೆ ಆದಾಯವನ್ನು ಹೊಂದಿರುವ ಮತ್ತು ಭಾರತದಂತಹ ಮಧ್ಯಮ ಆದಾಯವಿರುವ ದೇಶಗಳಲ್ಲಿ ಸಧ್ಯಕ್ಕೆ ಮೂತ್ರಪಿಂಡದ ಚಿಕಿತ್ಸೆ, ಡಯಾಲಿಸಿಸ್ ಮೊದಲಾದವು ನಡೆಯುತ್ತಿದೆ.
ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಮೂತ್ರಪಿಂಡದ ವೈಫಲ್ಯ ಮತ್ತು ಇತರ ಸಮಸ್ಯೆಗಳನ್ನು ಹೊಂದಿರುವವರಿಗೆ ಡಯಾಲಿಸಿಸ್ ಮತ್ತು ಕಿಡ್ನಿ ಕಸಿಗೆ ಬೇಕಾದಷ್ಟು ಹಣವಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಕಿಡ್ನಿ ಕಾಯಿಲೆಗೆ ಕಾರಣವೇನು ?
ಸಕ್ಕರೆ ಕಾಯಿಲೆ, ಸ್ಕೂಲಕಾಯ, ಅಧಿಕ ರಕ್ತದೊತ್ತಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಇವುಗಳಿಗೆ ಸರಿಯಾದ ಚಿಕಿತ್ಸೆಗಳನ್ನು ನಿಯಮಿತವಾಗಿ ಮಾಡಿಸಿಕೊಳ್ಳಬೇಕು. ಸಕ್ಕರೆ ಕಾಯಿಲೆ ಮತ್ತು ಅಧಿಕ ರಕ್ತದ ಒತ್ತಡವನ್ನು ನಿರ್ಲಕ್ಷಿಸಿದರೆ, ಇವುಗಳಿಗೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಮತ್ತು ಇವುಗಳ ಬಗ್ಗೆ ಜಾಗೃತೆ ವಹಿಸದಿದ್ದರೆ ಅದು ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗಬಹುದು.
ಇನ್ನು ಕೆಲವು ಔಷಧಗಳನ್ನು ಹೆಚ್ಚಾಗಿ ಬಳಸುವುದರ ಅಡ್ಡ ಪರಿಣಾಮ, ನೋವು ನಿವಾರಕಗಳ ಅಡ್ಡ ಪರಿಣಾಮ ಮತ್ತು ಮೂತ್ರಪಿಂಡದ ವಿಷಕಾರಿ ಪ್ರತಿಜೀವಕಗಳಿಂದ ಮೂತ್ರ ಪಿಂಡದ ಕಾಯಿಲೆಗಳು ಬರುತ್ತವೆ. ಇನ್ನು ಕೆಲವು ಪ್ರಕರಣಗಳಲ್ಲಿ ಆನುವಂಶೀಯತೆಯೂ ಕಾರಣವಾಗಿದೆ ಎನ್ನಲಾಗುತ್ತದೆ.
ಮೂತ್ರಪಿಂಡದ ಸಮಸ್ಯೆಯನ್ನುತಡೆಗಟ್ಟುವುದು ಹೇಗೆ:
ಕಿಡ್ನಿ ಸಮಸ್ಯೆಗಳನ್ನು ತಡೆಗಟ್ಟಲು ಮಧುಮೇಹ ಮತ್ತು ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ನಿರ್ವಹಣೆ ಅಗತ್ಯ. ಅನಾರೋಗ್ಯಕರ ಆಹಾರ ಕ್ರಮವನ್ನು ಸಂಪೂರ್ಣವಾಗಿ ಬಿಡಬೇಕು. ಹೆಚ್ಚು ಲವಣಯುಕ್ತ, ಮಸಾಲೆ ಆಹಾರಗಳು, ಜಂಕ್ ಫುಡ್‍ಗಳು, ಅಜಿನೋಮೋಟೊದಂತಹ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ಆಹಾರ ತ್ಯಜಿಸಬೇಕು.
ಉತ್ತಮ ಪೌಷ್ಟಿಕ ಮತ್ತು ವೈದ್ಯರು ಸಲಹೆ ನೀಡುವ ಆಹಾರವನ್ನು ಸೇವಿಸಬೇಕು.
ಜೀವನಶೈಲಿಗಳಲ್ಲಿ ಮಾರ್ಪಾಡುಗಳು ಅಗತ್ಯ. ಮೂತ್ರ ಮತ್ತು ರಕ್ತ ಪರೀಕ್ಷೆ ಮಾಡಿಸಿ ಅಧಿಕ ಮೂತ್ರಪಿಂಡದ ಸಮಸ್ಯೆಯನ್ನು ತಡೆಗಟ್ಟಬಹುದು.
ಆರೋಗ್ಯಕರ ಜೀವನಶೈಲಿ, ಉತ್ತಮ ಡಯಟ್, ಶಾರೀರಿಕ ಮತ್ತು ಮಾನಸಿಕ ಚಟುವಟಿಕೆಗಳು ವ್ಯಾಯಾಮ, ಯೋಗ, ಧ್ಯಾನ ಮೊದಲಾದ ಚಟುವಟಿಕೆಗಳು ಮೂತ್ರಪಿಂಡದ ಕಾಯಿಲೆಯನ್ನು ದೂರವಿಡಲು ಸಹಕಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಸರ್ಕಾರಿ ಆಸ್ಪತ್ರೆಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ
https://pragati.taskdun.com/health-departmentnew-guidlinegovt-hospitals/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ