
ವಿಶ್ವ ಮೂತ್ರಪಿಂಡ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ: ಕಿಡ್ನಿ ಆರೋಗ್ಯದ ಕುರಿತು ಸಾಮಾನ್ಯರಿಗೂ ತಿಳಿಯುವ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಅವಶ್ಯವಿರುವ ವೈದ್ಯಕೀಯ ಸೌಲಭ್ಯ, ಅಂಗಾಂಗದಾನದ ಕಾರ್ಯ ಹಾಗೂ ಕಸಿ(ಟ್ರಾನ್ಸ್ ಪ್ಲಾಂಟ್) ಶಸ್ತ್ರಚಿಕಿತ್ಸೆ ನೆರವೇರಿಸುವಲ್ಲಿ ಇನ್ನೂ ಹೆಚ್ಚಾಗಿ ಕಾರ್ಯಪ್ರವೃತ್ತರಾಗಬೇಕು. ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವದೊಂದೆ ಪರಿಹಾರ ಎಂದು ಕೆಎಲ್‌ಇ ಅಕಾಡೆಮಿ ಆಫ್ ಹೈಯರ ಎಜ್ಯುಕೇಶನ್ ಆ್ಯಂಡ ರಿಸರ್ಚ(ಕಾಹೆರ)ನ ಉಪಕುಲಪತಿ ಡಾ. (ಪ್ರೊ) ನಿತಿನ ಗಂಗಾನೆ ಅವರಿಂದಿಲ್ಲಿ ಎಚ್ಚರಿಕೆ ನೀಡಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನೆಫ್ರೊಲಾಜಿ ವಿಭಾಗವು ಇದೇ ದಿ. 14 ಮಾರ್ಚ 2024 ರಂದು ಏರ್ಪಡಿಸಲಾಗಿದ್ದ ವಿಶ್ವ ಮೂತ್ರಪಿಂಡ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಿಡ್ನಿ ಹಾಳಾದರೆ ಡಯಾಲಿಸಿಸ್ ಅಥವಾ ಕಸಿ ಮಾಡುವದೊಂದೆ ಪರಿಹಾರ. ಅದಕ್ಕಾಗಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದು ಕಿಡ್ನಿ ರೋಗಿಗಳ ತೊಂದರೆಯನ್ನು ತಪ್ಪಿಸಲು ಪ್ರಯತ್ನಿಸಬೇಕು. ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡದಲ್ಲಿನ ಹರಳು ಹಾಗೂ ಮೂತ್ರನಾಳದ ಸೋಂಕು ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಮಾತನಾಡಿ, ಉತ್ತರ ಕರ್ನಾಟಕದಲ್ಲಿಯೇ ಎಲ್ಲ ಅಂಗಾಂಗ ಕಸಿ ಮಾಡುವ ಕೇಂದ್ರವಾಗಿ ಗುರುತಿಸಿಕೊಂಡಿರುವ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ತಂತ್ರಜ್ಞಾನ ಬದಲಾದಂತೆ ವೈದ್ಯಕೀಯ ವ್ಯವಸ್ಥೆಯನ್ನು ಜನರಿಗೆ ತಲುಪಿಸಲಾಗುತ್ತಿದೆ. ಚಿಕ್ಕ ರಂದ್ರ ಮೂಲಕ ಕಿಡ್ನಿ ಕಸಿ ಮಾಡುವ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲು ಸದಾ ಒಂದು ಹೆಜ್ಜೆ ಮುಂದಿದೆ. ಕಿಡ್ನಿ ಕಸಿ ಮಾಡಿಸಿಕೊಂಡ ರೋಗಿಗಳಲ್ಲಿ ಹೆಚ್ಚಾಗಿ ಜಾಗೃತಿ ಮೂಡಿಸಿ. ಎಂದ ಅವರು, ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲು ಅತ್ಯಾಧುನಿಕ ಸೌಲಭ್ಯಗಳನ್ನುಳ್ಳ ಡಾಯಾಲಿಸಿಸ ಯಂತ್ರ ಹಾಗೂ ಕಿಡ್ನಿ ಸಂಬಂಧಿತ ಸಕಲ ಚಿಕಿತ್ಸಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಿರಿಯ ನೆಪ್ರಲಾಜಿಸ್ಟ ಡಾ. ಮಲ್ಲಿಕಾರ್ಜುನ ಕರಿಶೆಟ್ಟಿ(ಖಾನಪೇಟ) ಅವರು ಮಾತನಾಡಿ, ನಾಲಿಗೆ ರುಚಿ ನೋಡಿದರೆ ಕಿಡ್ನಿ ಹಾಳಾಗುವ ಸಮಯ ಅಧಿಕ. ಬಿಪಿ, ಕೊಲೆಸ್ಟರಾಲ್, ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡಿ, ವೈದ್ಯರ ಸಲಹೆ ಇಲ್ಲದೆ ಅನಾವಶ್ಯಕ ಔಷಧಿ ಸೇವನೆ ಬೇಡ, ಇದರಿಂದ ಕಿಡ್ನಿ ಹಾಳಾಗುವದನ್ನು ತಡೆಯಬಹುದು ಅಥವಾ ಮುಂದೂಡಬಹುದು. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಬೇಕು. ಸುಮಾರು 30 ವರ್ಷಗಳ ಕಾಲ ಡಯಾಲಿಸಿಸ್ ಮೇಲೆ ಇದ್ದು ಸಹಜವಾದ ಜೀವನ ನಡೆಸುತ್ತಿದ್ದಾರೆ ಎಂದರು. ತನ್ನ ಗಂಡನಿಗೆ ಕಿಡ್ನಿ ದಾನ ಮಾಡಿದ ಶ್ರೀಮತಿ ನೀಲಮ ಅಡಕೆ ತಮ್ಮ ಅನಿಸಿಕೆ ಹಂಚಿಕೊಂಡರು.
ಇದಕ್ಕೂ ಮೊದಲು ನಗರದ ಚೆನ್ನಮ್ಮ ವೃತ್ತದಿಂದ ಆಸ್ಪತ್ರೆಯವರೆಗೆ ಕಿಡ್ನಿ ಆರೋಗ್ಯದ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾನೆ ಅವರು ಜಾಥಾಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಇನಚಾರ್ಜ ಪ್ರಾಚರ‍್ಯರಾದ ಡಾ. ರಾಜೇಶ ಪವಾರ, ಉಪಪ್ರಾಚರ‍್ಯರಾದ ಡಾ. ವಿ ಎಂ ಪಟ್ಟಣಶೆಟ್ಟಿ, ಡಾ. ರಿತೇಶ ವೆರ್ಣೆಕರ, ಡಾ. ರವಿ ಸರ‍್ವಿ, ಡಾ. ಎಸ್ ಐ ನೀಲಿ, ಡಾ. ಎಸ್ ಸಿ ಮೆಟಗುಡ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪ್ರಮೋದ ಸೂಳಿಕೇರಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ