ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು – ಕಿತ್ತೂರು ಉತ್ಸವದ ಎರಡನೇ ದಿನವಾದ ಗುರುವಾರ (ಅ.24) ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತದ ರಸದೌತಣ ಬಡಿಸಿದವು.
ಕಿತ್ತೂರು ಉತ್ಸವದಲ್ಲಿ ಭಜನಾ ಕಾರ್ಯಕ್ರಮಗಳು, ಕ್ರಾಂತಿ ಗೀತೆಗಳು, ಸುಗಮ ಸಂಗೀತ, ಕಥಾಕೀರ್ಥನ, ಗೀತರೂಪಕ, ಟರ್ಪೆಂಟ್ ವಾದನ, ನೃತ್ಯ ಪ್ರದರ್ಶನ, ಹಾಗೂ ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮಗಳು ಎಲ್ಲರ ಗಮನಸೆಳೆದವು.
ಹೊನಗಾದ ಪರಶುರಾಮ ವಾಜಂತ್ರಿ ಮತ್ತು ಸಂಗಡಿಗರು ನುಡಿಸಿದಂತ ಟರ್ಪೆಂಟ್ ವಾದನ; ಬೆಳಗಾವಿಯ ಗುರುನಾಥ ಶಾಸ್ತ್ರೀ ಮತ್ತು ಸಂಗಡಿಗರು ಕಥಾ ಕೀರ್ಥನದ ಮೂಲಕ ಚನ್ನಮ್ಮನ ಚರಿತ್ರೆಯನ್ನು ಹಾಗೂ ಸಂಗೊಳ್ಳಿ ರಾಯಣ್ಣ ಅವರ ವರ್ಣನೆ ಮಾಡುತ್ತಾ ಚನ್ನಮ್ಮನ ಅಭಿಮಾನಿಗಳ ಮನಗೆದ್ದರು.
ಧಾರವಾಡದ ವಿದುಷಿ ಸುಜಾತಾ ಗುರುವ ಅವರು “ಭಕ್ತಿ ಇಲ್ಲದ ಬಡವ ನಾನಯ್ಯ” ಎಂಬ ಸುಗಮ ಸಂಗೀತವನ್ನು ಹಾಡುವುದರ ಮೂಲಕ ಭಕ್ತಿಲೋಕವನ್ನು ಅನಾವರಣಗೊಳಿಸಿದರು.
ಬೆಳವಡಿ ಮಲ್ಲಮ್ಮ ಮಾಡಿದ ತ್ಯಾಗ ಹಾಗೂ ಬೆಳವಡಿ ರಾಣಿ ಮಲ್ಲಮ್ಮನ ಜೀವನ ಚರಿತ್ರೆಯನ್ನು
ಬೆಳವಡಿಯ ಕೆ.ಜಿ.ಎನ್ ತಂಡದ ಮಕ್ಕಳು ನೃತ್ಯದ ಮೂಲಕ ಪ್ರದರ್ಶಿಸಿದರು.
ಕೆ.ಜಿ.ಎನ್ ತಂಡದವರಿಗೆ ಕಿತ್ತೂರಿನ ಶಾಸಕರಾದ ಮಹಾಂತೇಶ ದೊಡ್ಡಗೌಡರು ಅವರು ಸ್ಮರಣಿಕೆಯನ್ನು ನೀಡಿದರು.
ಉಮೇಶ ಇಟಗಿ ಮತ್ತು ಅವರ ತಂಡದವರು ತಬಲಾ ಮತ್ತು ಹಾರ್ಮೋನಿಯಂದೊಂದಿಗೆ ಜನರಿಗೆ ಹಿಂದೂಸ್ತಾನಿ ಸಂಗೀತ ರಸದೌತಣ ಉಣಬಡಿಸಿದರು.
ಸಿ.ಕೆ.ಮೆಕ್ಕೆದ, ವಕ್ಕುಂದ ರಂಗಭೂಮಿ ಹಾಗೂ ಜಾನಪದ ಕಲಾವಿದರುಗಳಿಂದ ಜಾನಪದ ಹಾಡು, ಕುಂದಾಪುರದ ಕಲಾವಿದರಿಂದ ಸ್ಟೆಪ್ ಒನ್ ಸ್ಟೆಪ್ ಡಾನ್ಸ್ ಧಮಾಕಾ ಕಾರ್ಯಕ್ರಮ, ಬೆಂಗಳೂರಿನ ವಿದುಷಿಸ ಅಶ್ವಿನಿ ಸುರೇಶ ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ನಡೆದವು.
ಈ ಸಂದರ್ಭದಲ್ಲಿ ಕಿತ್ತೂರು ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರು, ಬೈಲಹೊಂಗಲ ಉಪವಿಭಾಗಾಧಿಕಾರಿ ಎಸ್. ವಾಯ್.ಭಜಂತ್ರಿ, ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ