*ಕಿತ್ತೂರು ಉತ್ಸವದಲ್ಲಿ ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಂದ ಸಮರ್ಪಣೆ*
ಪ್ರಗತಿವಾಹಿನಿ ಸುದ್ದಿ: ಬ್ರಿಟಿಷರ ವಿರುದ್ಧ ಸಮರ ಸಾರಿ ಮೊದಲ ವಿಜಯ ಪತಾಕೆ ಹಾರಿಸಿದ ವೀರ ವನಿತೆ ರಾಣಿ ಚೆನ್ನಮ್ಮ ಜ್ಞಾಪಕಾರ್ಥ ಕೇಂದ್ರ ಸರ್ಕಾರ ಹೊರ ತಂದಿರುವ ಅಂಚೆ ಚೀಟಿಯನ್ನು ಕಿತ್ತೂರು ಉತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು.
ಕಿತ್ತೂರಿನಲ್ಲಿ ಇಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಅಂಚೆ ಚೀಟಿ ಬಿಡುಗಡೆ ಮಾಡಿ ವೀರ ವನಿತೆಯನ್ನು ಸ್ಮರಿಸಿದರು.
ನಮ್ಮ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಅಂಗವಾಗಿ ಪ್ರತಿ ವರ್ಷ ನಡೆಸುತ್ತಿರುವ ಕಿತ್ತೂರು ಉತ್ಸವ ನಿಜಕ್ಕೂ ಐತಿಹಾಸಿಕ ಮತ್ತು ವಿರೋಚಿತವಾಗಿರುತ್ತದೆ ಎಂದು ಬಣ್ಣಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಸಮರ ಸಾರಿ ಜಯಿಸಿದ ಈ ದಿನಕ್ಕೆ 200 ವರ್ಷದ ಸಂಭ್ರಮ. ಈ ಸಂಭ್ರಮಾಚರಣೆ ಮತ್ತು ಜ್ಞಾಪಕಾರ್ಥವಾಗಿ ಕನ್ನಡಿಗರ ಆಶಯದಂತೆ ಕೇಂದ್ರ ಸರ್ಕಾರ, ಕಿತ್ತೂರು ರಾಣಿ ಚೆನ್ನಮ್ಮ ಅಂಚೆ ಚೀಟಿ ಬಿಡುಗಡೆಗೊಳಿಸಿ ಗೌವರ ಸಮರ್ಪಿಸಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ, ರಾಷ್ಟ್ರಕ್ಕಾಗಿ ಹೋರಾಡಿದ, ಬಲಿದಾನಗೈದ ಸ್ವಾತಂತ್ರ್ಯ ಹೋರಾಟಗಾರರನ್ನು ಯಾವತ್ತೂ ಸ್ಮರಿಸಿ, ಗೌರವಿಸುತ್ತಾ ಬಂದಿದೆ ಎಂದು ಹೇಳಿದರು.
ಕರುನಾಡಿಗೆ ಮೋದಿ ಗೌರವ ನಾಡು ನುಡಿಯ ರಕ್ಷಣೆಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಹೋರಾಡಿದ ನಮ್ಮ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ನಡೆಸಿದ 1824ರ ಸ್ವಾತಂತ್ರ್ಯ ಸಂಗ್ರಾಮದ ವಿಜಯಕ್ಕೆ ಈಗ 200ನೇ ವರ್ಷದ ಸಂಭ್ರಮ. ಇದರ ಸವಿನೆನಪಿಗಾಗಿ ಕೇಂದ್ರ ಸರ್ಕಾರ ರಾಣಿ ಚೆನ್ನಮ್ಮನ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಕನ್ನಡ ನಾಡಿಗೇ ಗೌರವ ಸಲ್ಲಿಸಿದೆ ಎಂದು ಜೋಶಿ ಹೇಳಿದರು.
ನಾಡಿಗಾಗಿ ಸಮರ್ಪಿಸಿಕೊಂಡ ವೀರರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸದಾ ಗೌರವಿಸುತ್ತಾರೆ. ಸ್ವಾತಂತ್ರ್ಯ ಯೋಧರ ವೀರಗಾಥೆಗಳನ್ನು ಮುಂದಿನ ಪೀಳಿಗೆಗೆ ಜೀವಂತವಾಗಿರಿಸಲು ಶ್ರಮಿಸುತ್ತಾರೆ ಎಂಬುದಕ್ಕೆ ಇಂದಿನ ಅಂಚೆಚೀಟಿ ಬಿಡುಗಡೆ ಒಂದು ಸಣ್ಣ ನಿದರ್ಶನ ಎಂದು ಜೋಶಿ ಪ್ರತಿಪಾದಿಸಿದರು.
ಕಿತ್ತೂರು ಉತ್ಸವದಲ್ಲಿ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಬಾಬಾಸಾಹೇಬ ಪಾಟೀಲ, ಸಚಿವ ಸಂತೋಷ ಲಾಡ್, ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಮ. ಪಟ್ಟಣ, ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ, ಸ್ಟಾರ್ ಏರ್ ಲೈನ್ಸ್ ಸಂಸ್ಥಾಪಕ ಸಂಜಯ ಘೋಡಾವತ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ