Belagavi NewsBelgaum NewsKarnataka NewsLatestPolitics

*ಕೆಕೆ ಕೊಪ್ಪದಲ್ಲಿ ₹30 ಲಕ್ಷ ವೆಚ್ಚದಲ್ಲಿ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನ ನಿರ್ಮಾಣ*

ಮೇಲ್ಛಾವಣಿ ಕಾಂಕ್ರೀಟ್ ಕಾಮಗಾರಿಗೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಪೂಜೆ, ಚಾಲನೆ

ಪ್ರಗತಿವಾಹಿನಿ ಸುದ್ದಿ: ಕೆಕೆ ಕೊಪ್ಪ: ಗ್ರಾಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸುಮಾರು ₹30 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ಕಟ್ಟಡದ ಮೇಲ್ಚಾವಣಿಯ ಕಾಂಕ್ರೀಟ್ ಕಾಮಗಾರಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ ಪೂಜೆ ನೆರವೇರಿಸಿ ಚಾಲನೆ ನೀಡಿದರು.


ಗ್ರಾಮದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ಪರಂಪರೆಯ ಪ್ರತೀಕವಾಗಿ ರೂಪುಗೊಳ್ಳುತ್ತಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದೆ. ದೇವಸ್ಥಾನದ ಮೇಲ್ಚಾವಣಿಯ ಕಾಂಕ್ರೀಟ್ ಕಾಮಗಾರಿಗೆ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಗ್ರಾಮಸ್ಥರು ಹಾಗೂ ದೇವಸ್ಥಾನ ಕಮಿಟಿಯ ಸಕ್ರಿಯ ಸಹಭಾಗಿತ್ವದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಗ್ರಾಮದ ಜನರ ಧಾರ್ಮಿಕ ಭಾವನೆ ಹಾಗೂ ಸಾಮೂಹಿಕ ಸಹಕಾರಕ್ಕೆ ಈ ಯೋಜನೆ ಸಾಕ್ಷಿಯಾಗಿದೆ. ದೇವಸ್ಥಾನವು ಪೂರ್ಣಗೊಂಡ ಬಳಿಕ ಗ್ರಾಮಸ್ಥರ ಪೂಜೆ, ಧಾರ್ಮಿಕ ಆಚರಣೆಗಳು, ಹಬ್ಬ-ಹರಿದಿನಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಮುಖ ಕೇಂದ್ರವಾಗಲಿದೆ.


ದೇವಸ್ಥಾನಗಳು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಜನರನ್ನು ಒಗ್ಗೂಡಿಸುವ, ಪರಂಪರೆ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಕೇಂದ್ರಗಳಾಗಿವೆ. ಈ ಹಿನ್ನೆಲೆಯಲ್ಲಿ ಕೆಕೆ ಕೊಪ್ಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನವು ಗ್ರಾಮದ ಧಾರ್ಮಿಕ ಹಾಗೂ ಸಾಮಾಜಿಕ ಜೀವನಕ್ಕೆ ಮಹತ್ವದ ಕೊಡುಗೆಯಾಗಲಿದೆ.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪಾವನಕ್ಷೇತ್ರ ಸೋಮೇಶ್ವರ ಮಂದಿರದ ಪರಮಪೂಜ್ಯ ಭೀಮ ಅಜ್ಜನವರು, ಮಹಾದೇವ್ ಸಂಬರಗಿ, ಗದಗಯ್ಯ ಹಿರೇಮಠ್, ಶಿವನಪ್ಪ ಗೋಡಲಕುಂದರಗಿ, ನಾಗರಾಜ ಗುಂಡುಗೋಳ, ನಾಗಪ್ಪ ಹುಲಿಕವಿ, ಸೋಮಪ್ಪ ದುರ್ಗಿ, ಸಂತೋಷ್ ಕಂಬಿ, ಸೋಮಜ್ಜ ಬಸನ್ನವರ್, ರಾಯಪ್ಪ ಕರೆಣ್ಣವರ್, ಚಂಬಯ್ಯ ಹಿರೇಮಠ್, ಬಸವರಾಜ ಡೊಂಗರಗಾಂವಿ, ಸುವರ್ಣ ಅಕ್ಕ ಪಾಟೀಲ, ಸುರೇಶ ಕುಡೇನಟ್ಟಿ ಸೇರಿದಂತೆ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button