*ಸಾವಿನಲ್ಲೂ ಸಾರ್ಥಕತೆ ಮೆರೆದ ಇಬ್ಬರು: 7 ಜನರಿಗೆ ಜೀವದಾನ ಮಾಡಿ, ಇಬ್ಬರು ಅಂಧರ ಬಾಳಿಕೆ ಬೆಳಕಾದ ವ್ಯಕ್ತಿಗಳು*
ಎಂ.ಕೆ.ಹೆಗಡೆ; ಬೆಳಗಾವಿ: ಬೆಳಗಾವಿ ಸಮೀಪದ ಮಾಸ್ತಮರಡಿ ಗ್ರಾಮದ ಹತ್ತಿರ ರಸ್ತೆ ಅಪಘಾತದಲ್ಲಿ ಗಾಯಗೊಂಡು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 43 ವರ್ಷದ ವ್ಯಕ್ತಿ ಹಾಗೂ ಎಸ್ ಡಿಎಂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ಮಹಿಳೆ ಇಬ್ಬರು 7 ಜನರ ಜೀವ ಉಳಿಸಿ, ಇಬ್ಬರು ಅಂಧರ ಬಾಳಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕೆ ಎಲ್ ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ. ಯುವಕನ ಅಂಗಾಂಗ ದಾನ ಮಾಡಿ ಮೂವರಿಗೆ ಜೀವದಾನ ಮಾಡಲಾಗಿದೆ. ಇದೇ ವೇಳೆ ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 40 ವರ್ಷದ ಮಹಿಳೆಯೋರ್ವಳು ತಮ್ಮ ಅಂಗಾಂಗಳನ್ನು ಇತ್ತೀಚೆಗೆ ದಾನ ಮಾಡಿ ನಾಲ್ವರ ಜೀವ ಉಳಿಸಿ ಇಬ್ಬರು ಅಂಧರಿಗೆ ಬೆಳಕಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಯುಕನ ಹೃದಯ ಹಾಗೂ ಕಿಡ್ನಿಯನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಅಣಿಯಾದರೆ ಒಂದು ಕಿಡ್ನಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ರೋಗಿಗೆ ಕಸಿ ಮಾಡಲು ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್) ಮೂಲಕ ಕಳುಹಿಸಿಕೊಡಲಾಯಿತು.
ಇನ್ನೊಂದೆಡೆ ಎಸ್ ಡಿಎಂ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಯ ಹೃದಯ ಹಾಗೂ ಲೀವರ್ ಅನ್ನು ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಅಥವಾ ಗ್ರೀನ್ ಕಾರಿಡಾರ್ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಿ ಕಸಿ ಮಾಡಲಾಯಿತು.
ಬೆಳಗಾವಿ ತಾಲೂಕಿನ ಮಾಸ್ತಮರಡಿ ಗ್ರಾಮದ ನಿವಾಸಿ ಕಟ್ಟಡ ಕಾರ್ಮಿಕ ರಾಜು ಮಲ್ಲಪ್ಪ ಪರಂಡೆ (43) ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳು ನಿಷ್ಕ್ರಿಯಗೊಂಡಿತ್ತು. ವ್ಯಕ್ತಿಯ ಪತ್ನಿ, ತಾಯಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನೀವು ನೀಡುವ ಅಂಗಾಂಗಗಳಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದಾಗ, ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.
ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತೀವ್ರ ಗಾಯಗೊಂಡಿದ್ದ ಧಾರವಾಡದ ಎಸಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಬಸವ್ವ ಕರಿಕಟ್ಟಿ (40) ಎಂಬ ಮಹಿಳೆಯೂ ಕೂಡ ಚಿಕಿತ್ಸೆಗೆ ಸ್ಪಂದಿಸದೇ ಮೆದುಳು ನಿಷ್ಕ್ರೀಯಗೊಂಡು ತನ್ನ ಕಾರ್ಯವನ್ನು ನಿಲ್ಲಿಸಿದ್ದರು. ಆದರೆ ಉಳಿದ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿದ್ದವು.
ಮಹಿಳೆಯ ಹೃದಯ ಮತ್ತು ಲೀವರ ಅನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಹಸಿರು ಪಥದ ಮೂಲಕ ತೆಗೆದುಕೊಂಡು ಬಂದು ಕಸಿ ಮಾಡಲಾಗಿದ್ದು, ಒಂದು ಕಿಡ್ನಿಯನ್ನು ಎಸ್ ಡಿಎಂ ಆಸ್ಪತ್ರೆ ಹಾಗೂ ಸುಚಿರಾಯು ಆಸ್ಪತ್ರೆಯಲ್ಲಿದ್ದ ರೋಗಿಗೆ ಕಸಿ ಮಾಡಲಾಯಿತು. ಇಬ್ಬರೂ ಮೃತಪಟ್ಟರೂ ಇನ್ನೊಬ್ಬರ ಜೀವ ಉಳಿಸಿ ಸಾರ್ಥಕತೆ ಮೆರೆದರು.
ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯವಾದ್ದು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ ಅಂಗಾಂಗಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಅಂಗಾಂಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರ ಕಾರ್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ