*12 ದಿನಗಳಲ್ಲಿ 3 ಲೀವರ್ ಕಸಿ ಯಶಸ್ವಿ; ಮೂವರ ಬಾಳಿಗೆ ಬೆಳಕಾದ KLE ವೈದ್ಯರು*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರ ತಂಡ ಕೇವಲ 12 ದಿನಗಳಲ್ಲಿ ಮೂರು ಲೀವರ್ ಕಸಿ ಮಾಡಿ ಸಾವಿನಂಚಿನಲ್ಲಿದ್ದ ಮೂವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 25 ವರ್ಷದ ಯುವಕ ದುರ್ಗೇಶ ಉಪ್ಪಾರ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾರಾಷ್ಟ್ರ ಜೈಸಿಂಗಪೂರ ಸಾಕ್ಷಿ ಬಂಡಿವಡ್ಡರ (42), 25 ವರ್ಷದ ಯುಕನೋರ್ವ ಮೆದುಳು ನಿಷ್ಕ್ರಿಯಗೊಂಡ ನಂತರ ತಮ್ಮ ಅಂಗಾಂಗಗಳನ್ನು ದಾನ ಮಾಡಿದ್ದರು.
ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಬೆಲ್ಲದ ಬಾಗೇವಾಡಿ, ಚಿಕ್ಕಮಗಳೂರು ಹಾಗೂ ಕರೋಶಿಯ ರೋಗಿಗಳಿಗೆ ಲೀವರ ಕಸಿ ಮಾಡಲಾಗಿದೆ. ಮೂವರು ಗುಣಮುಖರಾಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ಗ್ಯಾಸ್ಟ್ರೋಎಂಟ್ರಾಲಾಜಿ ಮುಖ್ಯಸ್ಥರಾದ ಡಾ. ಸಂತೋಷ ಹಜಾರೆ ಅವರು ಹೇಳಿದ್ದಾರೆ.
ಅಂಗಾಂಗ ದಾನ ಮಾಡಿದ ಕುಟುಂಬ ಸದಸ್ಯರ ಕಾರ್ಯವನ್ನು ಶ್ಲಾಘಿಸಿದ ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಓರ್ವ ವ್ಯಕ್ತಿಯು ನೀಡುವ ಅಂಗಾಂಗದಿಂದ ಇನ್ನೊಬ್ಬರಿಗೆ ಪ್ರೇರೆಪಿಸುತ್ತದೆ. ಅಲ್ಲದೇ ಇನ್ನೊಬ್ಬರ ಜೀವ ಉಳಿಸುತ್ತದೆ. ಈ ಭಾಗದ ಯಾವುದೇ ರೋಗಿಯು ಒಳ್ಳೆಯ ಗುಣಮಟ್ಟದ, ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯಿಂದ ವಂಚಿತರಾಗಬಾರದು ಹಾಗೂ ವೈದ್ಯಕೀಯ ಸೇವೆಗಳೆಲ್ಲವನ್ನೂ ಕೈಗೆಟುಕುವ ದರದಲ್ಲಿ ಲಭಿಸುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲೀವರ ಸೇರಿದಂತೆ ಅಂಗಾಂಗಗಳ ಕಸಿ ಮಾಡಲು ಅತ್ಯಾಧುನಿಕ ಬೃಹತ್ ವೈದ್ಯಕೀಯ ಮೂಲಸೌಕರ್ಯ, ತರಬೇತಿ ಪಡೆದ ವೃತ್ತಿನಿರತ ಕಾರ್ಯಪಡೆ, ನಿಖರವಾದ ಯೋಜನೆ, ಕಸಿ ನಂತರದ ತೀವ್ರ ನಿಗಾ ವಹಿಸಬೇಕಾಗಿರುತ್ತದೆ. ವೃತ್ತಿನಿರತ ತಂಡದ ಕರ‍್ಯಕ್ಕೆ ಆಡಳಿತಾತ್ಮಕ ಸಹಕಾರದ ಅಗತ್ಯವೂ ಅಷ್ಟೇ ಮುಖ್ಯವಾಗಿರುತ್ತದೆ. ಅದೆಲ್ಲ ಇಲ್ಲಿ ಸಮ್ಮಿಳಿತಗೊಂಡಿದೆ. ಆದ್ದರಿಂದಲೇ ಕೇವಲ 12 ದಿನಗಳಲ್ಲಿ 3 ಲೀವರ್ ಕಸಿ ಮಾಡಲು ಸಾಧ್ಯವಾಗಿದೆ. ಅದರಂತೆ ಕೇವಲ 10 ತಿಂಗಳಲ್ಲಿ 9 ಯಶಸ್ವಿ ಲೀವರ್ ಕಸಿ ಮಾಡಲಾಗಿದ್ದು, ಉತ್ತರ ಕರ್ನಾಟಕ ಮತ್ತು ಗೋವಾ ರಾಜ್ಯವನ್ನೊಳಗೊಂಡಂತೆ ಏಕೈಕ ಕೇಂದ್ರ. ಬೆಳಗಾವಿ- ಹುಬ್ಬಳ್ಳಿ ದಾರವಾಡ ಪೋಲೀಸರ ಸಹಕಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಸಿರು ಪಥದಲ್ಲಿ ಕೇವಲ 58 ನಿಮಿಷಗಳಲ್ಲಿ ಬೆಳಗಾವಿಗೆ ಅಂಗಾಂಗಗಳನ್ನು ತರಲು ಸಾಧ್ಯವಾಗುತ್ತಿದೆ. ಪೊಲೀಸರ ಕಾರ್ಯಕ್ಕೆ ನಮ್ಮದೊಂದು ಸಲಾಮ ಹಾಗೂ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಅಸ್ಟರ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರಾಲಾಜಿ ಮತ್ತು ಉದರ ರೋಗ ವಿಭಾಗದ ಡಾ. ಸೋನಲ್ ಅಸ್ಥಾನಾ ಮತ್ತು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಡಾ. ಸಂತೋಷ ಹಜಾರೆ, ಲೀವರ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಸುದರ್ಶನ ಚೌಗಲೆ ಅವರು ಯಶಸ್ವಿ ಶಸ್ತçಚಿಕಿತ್ಸೆ ನೆರವೇರಿಸಿದ್ದು, ಅರವಳಿಕೆ ತಜ್ಞವೈದ್ಯರಾದ ಡಾ ರಾಜೇಶ ಮಾನೆ ಮತ್ತು ಡಾ. ಮಂಜುನಾಥ ಪಾಟೀಲ ಅವರು ಸಹಕಾರ ನೀಡಿದರು. ಆಡಳಿತಾಧಿಕಾರಿ ಡಾ. ಬಸವರಾಜ ಬಿಜ್ಜರಗಿ, ಗೀತಾ ದೇಸಾಯಿ ಬಸವರಾಜ ಮಜತಿ ಅವರು ಸಹಕಾರ ನೀಡಿದರು.
ಯಶಸ್ವಿ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ