ಕೆಎಲ್ಇ ಆಸ್ಪತ್ರೆಯ ಮಾದರಿ ಸೇವೆ; ಮೆದುಳು ನಿಷ್ಕ್ರೀಯವಾದ ವ್ಯಕ್ತಿಯ ಅಂಗಾಗ 4 ಜನರಿಗೆ ದಾನ; ಜೀರೋ ಟ್ರಾಫಿಕ್ ನಲ್ಲಿ ಅಂಗಾಂಗ ಸಾಗಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮನೆಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ೫೧ ವರ್ಷದ ವ್ಯಕ್ತಿಯು ತನ್ನ ಅಂಗಾಂಗಳನ್ನು ದಾನ ಮಾಡಿ ೪ ಜನರ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಅಣಿಯಾದರೆ, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹೊಂದಿಕೊಳ್ಳದೇ ಇದ್ದಾಗ ಲೀವರ್ (ಜಠರ) ಅನ್ನು ಬೆಂಗಳೂರು, ಒಂದು ಕಿಡ್ನಿ ಹುಬ್ಬಳ್ಳಿ ಹಾಗೂ ಇನ್ನೊಂದು ಕಿಡ್ನಿಯನ್ನು ಧಾರವಾಡಕ್ಕೆ ಕಳುಹಿಸಿಕೊಡಲಾಯಿತು.
ಪೊಲೀಸರು ಸಂಪೂರ್ಣವಾಗಿ ಜೀರೋ ಟ್ರಾಫಿಕ್ ಅಥವಾ ಗ್ರೀನ್ ಕಾರಿಡಾರ್ (ಹಸಿರು ಪಥ) ಮೂಲಕ ಅಂಗಾಂಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಬೆಳಗಾವಿಯ ಮಹಾಬಳೇಶ್ವರ (ಹನುಮಾನ) ನಗರದಲ್ಲಿ ವಾಸಿಸುವ ಉಮೇಶ ಬಸವಣಿ ದಂಡಗಿ (೫೧) ಅವರು ಮನೆಯಲ್ಲಿ ಮಟ್ಟಿಲು ಹತ್ತುವಾಗ ಕಾಲು ಜಾರಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಮೆದುಳಿಗೆ ತೀವ್ರತರವಾದ ಗಾಯವಾಗಿದ್ದರಿಂದ ಚಿಕಿತ್ಸೆಗೆ ಸ್ಪಂಧಿಸದೇ ನಿಷ್ಕ್ರೀಯಗೊಂಡು ತನ್ನ ಕಾರ‍್ಯವನ್ನು ನಿಲ್ಲಿಸಿದ್ದರು.
ಆದರೆ ಅಂಗಾಂಗಳು ಕಾರ‍್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಸಹೋದರರು, ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನಿಮ್ಮ ವ್ಯಕ್ತಿ ನೀಡುವ ಅಂಗಾಂಗಳಿಂದ ಇನ್ನೊಬ್ಬರ ಜೀವ ಉಳಿಯುತ್ತದೆ ಎಂದು ಹೇಳಿದಾಗ, ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.
ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಕಸಿ ಮಾಡುವಲ್ಲಿ ಇಲ್ಲಿನ ವೈದ್ಯರು ನಿರತರಾದರೆ, ಲೀವರ್ ಅನ್ನು ಸಾಂಬ್ರಾ ವಿಮಾನ ನಿಲ್ದಾಣದವರಗೆ ರಸ್ತೆ ಮೂಲಕ ತೆರಳಿ ಅಲ್ಲಿಂದ, ವಿಮಾನದಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಯಿತು.
ಕಿಡ್ನಿಗಳನ್ನು ಹುಬ್ಬಳ್ಳಿಯ ತತ್ವಾದರ್ಶ ಹಾಗೂ ಎಸ್ ಡಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚರ್ಮ ಹಾಗೂ ಕಣ್ಣುಗಳನ್ನು ದಾನ ಮಾಡಿದರು. ಕಣ್ಣುಗಳನ್ನು ಇಬ್ಬರು ಅಂಧರಿಗೆ ಕಸಿ ಮಾಡಲಾಗುತ್ತದೆ. ಇಬ್ಬರು ಅಂಧರ ಬಾಳಿಗೆ ಬೆಳಕಾಗಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಕುಟುಂಬವು ಸದಾ ಜನರ ಕಷ್ಟಕ್ಕೆ ಸ್ಪಂಧಿಸುವಲ್ಲಿ ಒಂದಡಿ ಮುಂದೆ ಇರುತ್ತಿತ್ತು. ಮೃತಪಟ್ಟರೂ ಕೂಡ ೪ ಜನರ ಜೀವ ಉಳಿಸಿದ ಸಾರ್ಥಕತೆ ಮೆರೆದರು. ಬೆಳಗಾವಿ ಹಾಗೂ ಹುಬ್ಬಳ್ಳಿ ಪೊಲೀಸ್ ಇಲಾಖೆಯ ಕಾರ‍್ಯ ಅತ್ಯಂತ ಶ್ಲಾಘನೀಯವಾದ್ದು. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಸ್ತೆಯಲ್ಲಿ ಗ್ರೀನ್ ಕಾರಿಡಾರ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು. ಮೃತರು ತಾಯಿ, ಪತ್ನಿ, ಮಗಳು, ಸಹೋದರರು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಂಗಾಂಗಳನ್ನು ದಾನ ಮಾಡಿದ ವ್ಯಕ್ತಿ ಹಾಗೂ ಆತನ ಕುಟುಂಬ ಸದಸ್ಯರ ಕಾರ‍್ಯವನ್ನು ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ