*ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ಸರಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಭೇಟಿ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕ್ಯಾನ್ಸರ್ ಆಸ್ಪತ್ರೆಗೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಭೇಟಿ ನೀಡಿದರು. ಡಾ. ಶಾಲಿನಿ ಅವರನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಕ್ಯಾನ್ಸರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಎಂ ವಿ ಜಾಲಿ ಅವರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರಭಾಕರ ಕೋರೆ ಅವರು, ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ ರೋಗಿಗಳ ಚಿಕಿತ್ಸೆ ಹಾಗೂ ಆರೈಕೆಗೆ ಅತ್ಯಾಧುನಿಕ ಸೌಲಭ್ಯಗಳ ಅಗತ್ಯತೆ ಬಹಳವಿತ್ತು. ಅನೇಕರು ಚಿಕಿತ್ಸೆಯಿಂದ ವಂಚಿತರಾಗುತ್ತಿರುವದನ್ನು ಕಂಡು ಆಸ್ಪತ್ರೆ ನಿರ್ಮಾಣಕ್ಕೆ ಒತ್ತು ನೀಡಲಾಯಿತು. ಕೈಗೆಟಕುವ ದರದಲ್ಲಿ ಕ್ಯಾನ್ಸರ ಚಿಕಿತ್ಸೆ ನೀಡಿ ಸಮಾಜದ ಆರೋಗ್ಯ ರಕ್ಷಣೆಗೆ ಸದಾ ಬದ್ಧವಾಗಿದ್ದೇವೆ. ಆಸ್ಪತ್ರೆಯಲ್ಲಿ ಅತ್ಯಾಧುನಿಕ ರೇಡಿಯೊ ಆಂಕೊಲಾಜಿ ಚಿಕಿತ್ಸಾ ಕೇಂದ್ರ ಮತ್ತು ಅಸ್ಥಿಮಜ್ಜೆ (ಬೋನ್ ಮ್ಯಾರೋ)ಯ ಕಸಿ, ನಿಖರವಾದ ಮತ್ತು ಜೀನೋಮಿಕ್ ಔಷಧ ಆಧಾರಿತ ಕ್ಯಾನ್ಸರ್ ಆರೈಕೆ ಸೇರಿದಂತೆ ವಿವಿಧ ವಿಭಾಗಗಳನ್ನು ತೋರಿಸಿದರು. ಅಲ್ಲದೇ ಇದೇ ಡಿ. 30ರಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಜನಸೇವೆಗೆ ಅರ್ಪಿಸಲಿದ್ದಾರೆ ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಸರಕಾರದ ಸಹಯೋಗದೊಂದಿಗೆ ಕ್ಯಾನ್ಸರ ಚಿಕಿತ್ಸೆ ಹಾಗೂ ಆರೈಕೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ. ಅಲ್ಲದೇ ರಾಜ್ಯಾದ್ಯಂತ ಕ್ಯಾನ್ಸರ ಚಿಕಿತ್ಸಾ ವ್ಯವಸ್ಥೆಯನ್ನು ಬಲಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಕ್ಯಾನ್ಸರ ಆಸ್ಪತ್ರೆಯನ್ನು ವೀಕ್ಷಿಸಿ ನಂತರ ಮಾತನಾಡಿದ ಡಾ. ಶಾಲಿನಿ ರಜನೀಶ್ ಅವರು ಕರ್ನಾಟಕದಾದ್ಯಂತ ಕ್ಯಾನ್ಸರ್ ಆರೈಕೆ ಸೌಲಭ್ಯಗಳನ್ನು ಮೇಲ್ದರ್ಜೆಗೇರಿ, ವಿಶ್ವ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಲಾಗುವದು ಎಂದ ಅವರು, ಡಾ. ಪ್ರಭಾಕರ ಕೋರೆ ಅವರು ಬೆಳಗಾವಿಯನ್ನು ಹೆಲ್ತ್ ಕೇರ್ ಹಬ್ ಆಗಿ ಪರಿವರ್ತಿಸುವ ಅವರ ಕಾರ್ಯವನ್ನು ಶ್ಲಾಘಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ