Karnataka NewsLatestPolitics

ಸ್ವಾಭಿಮಾನದ ಜೀವನಕ್ಕೆ ನಾಂದಿ ಹಾಡಿದ ಕೆಎಲ್ಇ ಸಂಸ್ಥೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಆಯ್ದುಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗೆ ಸನ್ನದ್ದುಗೊಳ್ಳುವಂತಾಗಬೇಕು. ಸಂಪತ್ಭರಿತ ಕರ್ನಾಟಕದಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಬೇರೆಯವರಿಗೆ ಲಾಭ ಮಾಡಿಕೊಡಲಾಗುತ್ತಿದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳು ಸರಕಾರದೊಂದಿಗೆ ಕೈಜೋಡಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಕಾರ‍್ಯವನ್ನು ಮಾಡಬೇಕೆಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರಿಂದಿಲ್ಲಿ ಸಲಹೆ ನೀಡಿದರು.

ಕೆಎಲ್‌ಇ ಸಂಸ್ಥೆಯ ೧೦೪ನೇ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಈ ಮೊದಲು ಸಿಇಟಿಗೆ ವಿರೋಧ ಮಾಡಲಾಗಿತ್ತು. ಆದರೆ ಈಗ ಕಾಲ ಮೀರಿ ಹೋಗಿದೆ. ಅದಕ್ಕೆ ಹೊಂದಿಕೊಳ್ಳುವಂತೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯನ್ನು ಧೈರ‍್ಯವಾಗಿ ಎದುರಿಸುವಂತೆ ಮಕ್ಕಳನ್ನು ಪ್ರೇರೇಪಿಸುವ ಕಾರ‍್ಯ ಮಾಡಬೇಕಾಗಿದೆ.

ರಾಜ್ಯವು ತಂತ್ರಜ್ಞಾನದಲ್ಲಿ ಮುಂದುವರೆದಿದ್ದು, ವಿಜ್ಞಾನದಲ್ಲಿ ಹಿಂದೆ ಬಿದ್ದಿದೆ. ಅದನ್ನು ಸರಿಪಡಿಸಿ ಕಾರ‍್ಯ ಮಾಡಬೇಕಾಗಿದೆ. ಮಿಲಿಟರಿ ಸೇರಿದಂತೆ ಅನೇಕ ಉನ್ನತ ಹುದ್ದೆಗಳಿಗೆ ನಮ್ಮ ರಾಜ್ಯದವರು ಕಡಿಮೆ. ಅದು ತಪ್ಪಬೇಕು. ವಿದ್ಯಾರ್ಥಿಗಳು ಮೊದಲು ಅರ್ಥೈಸಿಕೊಳ್ಳುವದನ್ನು ರೂಢಿಸಿಕೊಳ್ಳಬೇಕು. ಈಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ತೊಂದರೆ ಅನುಭವಿಸಬೇಕಾಗಬಹುದು ಎಂದು ಹೇಳಿದರು.

ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುನ್ನುಗ್ಗಬೇಕು ಎಂದ ಅವರು, ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕಿದ ಸಪ್ತರ್ಷಿಗಳ ಕಾರ‍್ಯ ಅತ್ಯಂತ ಮುಖ್ಯವಾದದ್ದು. ಈ ಭಾಗದಲ್ಲಿ ಶಿಕ್ಷಣವನ್ನು ಪ್ರಸಾರ ಮಾಡಿ ಸ್ವಾಭಿಮಾನದ ಜೀವನಕ್ಕೆ ನಾಂದಿ ಹಾಡಿದರು. ಶಿಕ್ಷಣದ ಮೂಲಕ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೆಎಲ್‌ಇ ಸಂಸ್ಥೆ ಅಪಾರ ಕೊಡುಗೆ ನೀಡಿದೆ.

ಸ್ವಾಭಿಮಾನದಿಂದ ಬಾಳಲಿಕ್ಕೆ ಶಕ್ತಿ ನೀಡಿದ ಸಪ್ತರ್ಷಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತ ಸಮಾಜದಲ್ಲಿ ಗುರುತಿಸಿಕೊಂಡು ಗೌರವಿಸಲ್ಪಡಬೇಕು. ಸಾಧನೆ ಮೂಲಕ ನಮ್ಮನ್ನು ನಾವು ಸಮಾಜಕ್ಕೆ ಅರ್ಪಿಸಿಕೊಳ್ಳಬೇಕು. ಅದೇ ಕಾರ‍್ಯವನ್ನು ಸಪ್ತರ್ಷಿಗಳು ಮಾಡಿದ್ದಾರೆ. ಅವರ ಸ್ಮರಣೆ ನಮಗೆ ಪ್ರೇರಣಾದಾಯಿಯಾಗಿದೆ. ಗುರಿ ಮುಂದಿಟ್ಟುಕೊಂಡು ಸಾಧನೆಗೈಯಬೇಕೆಂದು ಕರೆ ನೀಡಿದರು.

ಜಗತ್ತು ಇಂದು ಕೆಎಲ್‌ಇ ಸಂಸ್ಥೆಯೆಡೆಗೆ ಹೊರಳುತ್ತಿದೆ

ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕಿದ ಸಂಸ್ಥಾಪಕರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯಕರ್ತವ್ಯ. ಒಂದು ಸಂಸ್ಥೆಯು ಅಖಂಡವಾಗಿ ಮುನ್ನಡೆಯುವುದು ಕಷ್ಟ ಸಾಧ್ಯ. ಕೆಎಲ್‌ಇ ಸಂಸ್ಥೆಯು ಸಮಾಜಕ್ಕೆ ಕಲ್ಪವೃಕ್ಷವಾಗಿ ಬೆಳೆದುನಿಂತಿದೆ. ಇದಕ್ಕೆ ಕೆಎಲ್‌ಇಯನ್ನು ಕಟ್ಟಿದ ’ಋಷಿ ಸಮಾನವಾದ’ ಏಳು ಜನ ಶಿಕ್ಷಕರ, ಸಮಸ್ತ ಜನತೆಯ ಆಶೀರ್ವಾದ, ದಾನಿಗಳ-ಮಹಾದಾನಿಗಳ-ಶಿಕ್ಷಕರ-ಹಿರಿಯರ ಆಶೀರ್ವಾದವೆಂದು ನಾನು ನಂಬಿದ್ದೇನೆ ಎಂದು ಸ್ಮರಿಸಿದರು.

ಸತ್ಯ ಪ್ರೇಮ ಸೇವೆ ಸ್ವಾರ್ಥತ್ಯಾಗ ಇದು ಕೆಎಲ್‌ಇ ಸಂಸ್ಥೆಯ ಧ್ಯೇಯ. ಈ ತತ್ವಕ್ಕೆ ಬದ್ಧವಾಗಿ ಕೆಎಲ್‌ಇ ಸಂಸ್ಥೆ ದಾಪುಗಾಲು ಇಟ್ಟಿದೆ. ಮಹಾದಾನಿಗಳಿಂದ ಬೆಳೆದಿರುವ ಈ ಸಂಸ್ಥೆಗೆ ಎಲ್ಲ ಭಾಷಿಕರು, ಎಲ್ಲ ಜಾತಿಯವರು ದಾನವನ್ನು ನೀಡಿ ಸಂಸ್ಥೆಯ ಬೆಳವಣಿಗೆಗೆ ಕಾರಣಪುರುಷರಾಗಿದ್ದಾರೆ. ಕೆಎಲ್‌ಇ ಸಂಸ್ಥೆಗೆ ಅವರು ನೀಡಿದ ದಾನ ಅಮರವಾಗಿ ಉಳಿದಿದೆ. ಹಾಗಾಗಿ ಅವರೆಲ್ಲರಿಗೂ ಕೆಎಲ್‌ಇ ಸಂಸ್ಥೆ ಚಿರಋಣಿಯಾಗಿದೆ ಎಂದು ಕೋರೆ ಹೇಳಿದರು.

ಜಗತ್ತು ಇಂದು ಕೆಎಲ್‌ಇ ಸಂಸ್ಥೆಯೆಡೆಗೆ ಹೊರಳುತ್ತಿದೆ, ಶಿಕ್ಷಣ, ಆರೋಗ್ಯ, ಸಂಶೋಧನೆ ಮೂಲಕ ಅಪ್ರತಿಮವಾದುದನ್ನು ಸಾಧಿಸಿದೆ. ಇಂದು ೨೭೦ಕ್ಕೂ ಹೆಚ್ಚು ಅಂಗಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.
ಶೇ. ೫೦ ರಷ್ಟು ಅಂಗಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಜಿ ಇಂದ ಪಿಜಿ ವರೆಗೆ ರೈತ ಮಕ್ಕಳು, ಆರ್ಥಿಕವಾಗಿ ಹಿಂದುಳಿದವರು ಶಿಕ್ಷಣ ಪಡೆಯುತ್ತಿದ್ದಾರೆ. ೪೦೦೦ಕ್ಕೂ ಹೆಚ್ಚು ಹಾಸಿಗೆಗಳ ಆರೋಗ್ಯಸೇವೆ ಸಂಸ್ಥೆಯದು. ಅದರಲ್ಲಿ ೧೨೦೦ ಉಚಿತ ಹಾಸಿಗೆಗಳು ಉಚಿತ ಚಿಕಿತ್ಸೆಗಾಗಿ ಮೀಸಲಿವೆ. ಗ್ರಾಮೀಣ ಭಾಗದಲ್ಲಿ ಅತ್ಯಾಧುನಿಕ ಆಸ್ಪತ್ರೆ, ತಾಂತ್ರಿಕ ಮಹಾವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡದ ಕಾಮಗಾರಿಯು ಪ್ರಾರಂಭಗೊಂಡಿದೆ ಎಂದು ವಿವರಿಸಿದರು.

ಇತ್ತೀಚಿಗೆ ದುಬೈನ ಡಿಎಂ ಈಸ್ಟರ್ ಸಂಸ್ಥೆಯೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಬೆಂಗಳೂರಿನ ಯಶವಂತಪುರದಲ್ಲಿ ೬೦೦ ಹಾಸಿಗೆಗಳ, ಅದರಂತೆ ಪುಣೆಯಲ್ಲಿ ನೂತನ ಆಸ್ಪತ್ರೆ ಹಾಗೂ ಹುಬ್ಬಳ್ಳಿಯಲ್ಲಿಯೂ ವೈದ್ಯಕೀಯ ಆಸ್ಪತ್ರೆ ತಲೆಯೆತ್ತಲಿದೆ ಎಂದ ಅವರು, ಕೃಷಿವಿಜ್ಞಾನ ಕೇಂದ್ರವು ರೈತರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗುತ್ತಿದೆ. ಆಗಸ್ಟ್ ನಲ್ಲಿ ಬಂದ ಭಾರಿ ಮಳೆಗೆ ಮನೆಗಳನ್ನು ಕಳೆದುಕೊಂಡು ’ಕಾಳಜಿ ಕೇಂದ್ರಗಳಲ್ಲಿ’ ಇದ್ದ ಸಾವಿರಾರು ಜನರಿಗೆ ಕೆಎಲ್‌ಇ ಸಂಸ್ಥೆಯು ನೆರವಿನ ಹಸ್ತನೀಡಿದೆ ಎಂದು ತಿಳಿಸಿದರು.

ಅಧ್ಯಕ್ಷರಾದ ಶಿವಾನಂದ ಕೌಜಲಗಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾರ‍್ಯದರ್ಶಿಗಳಾದ ಡಾ.ಬಿ.ಜಿ.ದೇಸಾಯಿ, ಡಾ.ಸುಧಾ ರೆಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ, ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಸಚಿವ  ಮಾಧುಸ್ವಾಮಿಯವರು ಪದಕ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸತ್ಕರಿಸಿದರು.
ಸಮಾರಂಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಕೆಎಲ್‌ಇ ಅಂಗ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button