
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೆಎಲ್‌ಇ ಸಂಸ್ಥೆಯಿಂದ ೨ ಕೋಟಿ, ಇತರ ಸಹಕಾರಿ ಬ್ಯಾಂಕ್ ಹಾಗೂ ಕಾರ್ಖಾನೆಗಳಿಂದ ೩೧ ಲಕ್ಷ ಸೇರಿ ಒಟ್ಟು ೨.೩೧ ಕೋಟಿ ರೂಪಾಯಿಗಳ ಡಿಡಿಯನ್ನು ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಸ್ತಾಂತರಿಸಿದರು.
ಶತಮಾನ ಪೂರೈಸಿರುವ ಪ್ರತಿಷ್ಠಿತ ಬೆಳಗಾವಿಯ ಕೆಎಲ್‌ಇ ಸಂಸ್ಥೆಯು ಸಿ.ಎಂ.ಪರಿಹಾರ ನಿಧಿಗೆ ೨ ಕೋಟಿಗಳ ಸಹಾಯ ನಿಧಿಯನ್ನು ಅರ್ಪಿಸುವ ಮೂಲಕ ಕೊರೋನಾ ವೈರಸ್ ಹೋರಾಟಕ್ಕೆ ಕೈಜೋಡಿಸಿದೆ.
ಹಾಗೆಯೇ, ಅಂಕಲಿಯ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದಿಂದ ೧೧ ಲಕ್ಷ ರೂಪಾಯಿ ; ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತದಿಂದ ೫ ಲಕ್ಷ ರೂಪಾಯಿ; ರಾಯಬಾಗದ ಸೌಂದತ್ತಿಯ ಮೆ|| ಶಿವಶಕ್ತಿ ಶುಗರ್ಸ ಲಿ. ದಿಂದ ೫ ಲಕ್ಷ ರೂಪಾಯಿ, ಬೆಳಗಾವಿಯ ರಾಣಿ ಚನ್ನಮ್ಮಾ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತದಿಂದ ೫ ಲಕ್ಷ ರೂಪಾಯಿ; ಶ್ರೀ ಕ್ಷೇತ್ರ ಯಡೂರನ ಶ್ರೀ ಕಾಡಸಿದ್ಧೇಶ್ವರ ಸಂಸ್ಥಾನಮಠದ ಶ್ರೀ ಶ್ರೀ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ|| ಚನ್ನರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ೫ ಲಕ್ಷ ರೂಪಾಯಿಗಳ ಡಿಡಿಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮಹಾಮಾರಿ ಕೊರೋನಾ ವೈರಸ್ ಹೋರಾಟದಲ್ಲಿ ಕೈಜೋಡಿಸಿದ ಕೆಎಲ್‌ಇ ಸಂಸ್ಥೆ ಇತರ ಸಹಕಾರಿ ಬ್ಯಾಂಕ್‌ಗಳು, ಕಾರಖಾನೆ, ಯಡೂರಿನ ಶ್ರೀಮಠವು ನೀಡಿರುವ ಸಹಾಯಹಸ್ತವನ್ನು ಮನಸಾರೆ ಪ್ರಶಂಸಿಸಿ, ಅಭಿನಂದಿಸಿದರು.
ತದನಂತರದಲ್ಲಿ ಮಾತನಾಡಿದ ಡಾ.ಪ್ರಭಾಕರ ಕೋರೆ, ಇಂದು ಇಡೀ ವಿಶ್ವ ಕೊರೊನಾ ವೈರಸ್ ಬಾಹುಬಂಧನದಲ್ಲಿ ಸಿಲುಕಿಕೊಂಡು ತತ್ತರಿಸುತ್ತಿರುವುದು ಖೇದಕರ ಸಂಗತಿ. ಅತ್ಯಂತ ವೇಗವಾಗಿ ವ್ಯಾಪಿಸುತ್ತಿರುವ ಈ ವೈರಸ್ ದಾಳಿಯಿಂದ ದೇಶ ಹಾಗೂ ರಾಜ್ಯ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂದು ರಾಜ್ಯ ಸರ್ಕಾರವು ಕೊರೊನಾ ವೈರಸ್ ವಿರುದ್ಧ ಹಗಲಿರುಳು ಹೋರಾಡುತ್ತಿದೆ. ನಿರಂತರವಾಗಿ ಜನಸಾಮಾನ್ಯರ, ರೈತರ, ಕೂಲಿ ಕಾರ್ಮಿಕರ, ದೀನದುರ್ಬಲರ ಸೇವೆಯನ್ನು ಮಾಡುವುದರ ಮೂಲಕ ಅವರ ಬದುಕಿಗೆ ಆಶ್ರಯವಾಗಿರುವುದು ಹೆಮ್ಮೆಯ ವಿಷಯ. ಬಿ.ಎಸ್.ಯಡಿಯೂರಪ್ಪನವರು ಸಕಾಲಕ್ಕೆ ಕೈಗೊಂಡ ದಿಟ್ಟ ಕ್ರಮಗಳಿಂದ ಇಂದು ರಾಜ್ಯದ ಜನತೆಯು ಸಂಕಷ್ಟದಿಂದ ಹೊರಬರುವಂತಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕರು ಹಾಗೂ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಸಚಿವರಾದ ರಮೇಶ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಿಎಂ ಕಾರ್ಯದರ್ಶಿ ಗಿರೀಶ್ ಹೊಸೂರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ