ಕೆಎಲ್‌ಎಸ್ ಐಎಂಇಆರ್ ೨೯ನೆಯ ಸಂಸ್ಥಾಪನಾ ದಿನಾಚರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಹಕರು ಹಾಗೂ ಮಾರುಕಟ್ಟೆಯ ಬದಲಾಗುತ್ತಿರುವ ಅಗತ್ಯಗಳನ್ನು ಅವಕಾಶವೆಂದು ಪರಿಗಣಿಸಿ ಉದ್ಯಮಿಗಳು ಯಶಸ್ಸು ಕಾಣಬೇಕು ಎಂದು ಪುಣೆಯ ಅತ್ಯಾಸಾ ಕನ್ಸಲ್ಟಿಂಗ್ ಪ್ರೈ.ಲಿ., ಸಂಸ್ಥಾಪಕ ನಿರ್ದೇಶಕ ನಿಕೇತ ಕಾರಜಗಿ ನುಡಿದರು.
ನಗರದ ಕೆಎಲ್‌ಎಸ್ ಐಎಂಇಆರ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪ್ರತಿಷ್ಠಿತ ಗೋಗಟೆ ಉಪನ್ಯಾಸಮಾಲೆ ಭಾಷಣಕಾರರಾಗಿ ಚಿಕ್ಕ ಹಾಗೂ ಮಧ್ಯಮ ಗಾತ್ರದ ಉದ್ಯಮಗಳು ಎದುರಿಸುತ್ತಿರುವ ಆಡ್ಡಿ ಹಾಗೂ ಕುಸಿತವನ್ನು ಎದುರಿಸುವ ಬಗೆ ಕುರಿತು ಅವರು ಮಾತನಾಡಿದರು.
ನಿರಂತರವಾಗಿ ಬದಲಾಗುತ್ತಿರುವ ತಾಂತ್ರಿಕತೆಯಿಂದಾಗಿ ನಾವೆಲ್ಲ ಅಸ್ಥಿರ, ಸಂಕೀರ್ಣ, ಅನಿಶ್ಚಿತ ಹಾಗೂ ಅಸ್ಪಷ್ಟ ಔದ್ಯಮಿಕ ಜಗತ್ತನ್ನು ಎದುರಿಸಬೇಕಾಗಿದೆ. ಈ ಸಮಸ್ಯೆಗಳನ್ನು ಜ್ಞಾನ, ನಗದು, ಉದ್ಯಮದ ನೈಜತೆ, ತಾಂತ್ರಿಕತೆ ಮಟ್ಟ ಹಾಗೂ ನವ ಶಾಸ್ತ್ರೀಯ ಮಾದರಿಗಳ ಅನುಷ್ಠಾನದಿಂದ ಎದುರಿಸಬಹುದಾಗಿದೆ ಎಂದರು.
ಭಾಷಣದ ನಂತರ ಸಂವಾದ ಆಯೋಜಿಸಲಾಗಿತ್ತು. ಗೋಗಟೆ ಉಪನ್ಯಾಸಮಾಲೆಯನ್ನು ಉದ್ಯಮಿ, ಸಮಾಜಸೇವಕರಾದ ದಿ. ರಾವಸಾಹೇಬ್ ಗೋಗಟೆ ೧೯೭೭ರಲ್ಲಿ ತಮ್ಮ ೬೧ನೆ ಜನ್ಮದಿನ ಸಂದರ್ಭದಲ್ಲಿ ಸ್ಥಾಪಿಸಿದ್ದು, ಅಂದಿನಿಂದ ನಿರಂತರವಾಗಿ ಕರ್ನಾಟಕ ಕಾನೂನು ಸಂಸ್ಥೆಯಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.
ಇದೇ ಸಂದರ್ಭದಲ್ಲಿ ಓರಿಯಾನ್ ಹೈಡ್ರಾಲಿಕ್ಸ್ ಪ್ರೈ.ಲಿ., ಜಂಟಿ ನಿರ್ದೇಶಕರಾದ ಶ್ರೀ ಕೀಥ್ ಮಚಾಡೋ ಅವರಿಗೆ ೨೦೧೯ನೇ ಸಾಲಿನ ವರ್ಷದ ಉದ್ಯಮಿ ಪ್ರಶಸ್ತಿ ನೀಡಿ ಶ್ರೀ ನಿಕೇತ ಕಾರಜಗಿ ಹಾಗೂ ಕಾಲೇಜು ಅಡಳಿತ ಮಂಡಳಿ ಚೇರಮನ್‌ರಾದ ಶ್ರೀ ರಾಜೇಂದ್ರ ಬೆಳಗಾವಕರ ಸನ್ಮಾನಿಸಿದರು. ಓರಿಯಾನ್ ಹೈಡ್ರಾಲಿಕ್ಸ್ ಬೆಳವಣಿಗೆ ಕುರಿತು ಚಿಕ್ಕ ವಿಡಿಯೋ ಪ್ರದರ್ಶಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಕೀಥ್ ಮಚಾಡೋ ಕೃತಜ್ಞತಾ ನುಡಿಗಳನ್ನಾಡಿದರು.
ರಾಜೇಂದ್ರ ಬೆಳಗಾವಕರ ಆಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಧಕ ಉದ್ಯಮಿಗಳ ಜೀವನದಿಂದ ಪಾಠ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜು ನಿರ್ದೇಶಕರಾದ ಡಾ. ಆತುಲ್ ದೇಶಪಾಂಡೆ ಸ್ವಾಗತಿಸಿದರು. ಡಾ. ಎಸ್.ಜಿ. ಚಿನಿವಾರ್ ವಂದಿಸಿದರು. ಉದ್ಯಮಿಗಳು, ಶಿಕ್ಷಣ ತಜ್ಞರು, ಟೈ ಹುಬ್ಬಳ್ಳಿ ಸದಸ್ಯರು, ರೋಟರಿ ಕ್ಲಬ್ ಸದಸ್ಯರು, ಮ್ಯಾನೇಜಮೆಂಟ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ