Kannada NewsKarnataka NewsLatest

ಎನ್‌ಆರ್‌ಸಿಯಿಂದ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಅನುಕೂಲ

ಪ್ರಗತಿವಾಹಿನಿ ಸುದ್ದಿ, ಗೋಕಾಕ :  ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ವಿಧೇಯಕವನ್ನು ಅರಿತು ಅದರ ನಿಜ ಸಂಗತಿಯನ್ನು ಪ್ರತಿ ಮನೆ-ಮನೆಗೆ ಹಾಗೂ ಪ್ರತಿ ಮನಕ್ಕೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಭಾನುವಾರ ಬಿಜೆಪಿ ಅರಭಾವಿ ಮಂಡಲ ಇಂದಿನಿಂದ ಹಮ್ಮಿಕೊಳ್ಳಲಾದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನೆರೆ ರಾಷ್ಟ್ರಗಳಲ್ಲಿ ಕಿರುಕುಳ ಅನುಭವಿಸಿ ನಿರಾಶ್ರಿತರಾಗಿ ಬಂದಿರುವ ಅಲ್ಪಸಂಖ್ಯಾತರ ಸಂಕಷ್ಟಗಳ ನಿವಾರಣೆಗೆ ಹಿಂದೆ ಆಳಿದ ಪಕ್ಷಗಳು ಆದ್ಯತೆ ನೀಡಲಿಲ್ಲ. ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ತನ್ನ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಮತಯಾಚಿಸಿದ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ ಶಾ ಅವರ ನೇತೃತ್ವದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನಜಾಗೃತಿ ಅಭಿಯಾನ ಕೈಗೊಂಡಿದ್ದು, ಇದನ್ನು ಯಶಸ್ವಿಗೊಳಿಸುವಂತೆ ಅವರು ಕೋರಿದರು.

ಮುಸ್ಲಿಂರಿಂದ ಪೌರತ್ವವನ್ನು ಕಿತ್ತುಕೊಳ್ಳಲಾಗುತ್ತದೆ. ಅವರನ್ನು ನುಸುಳುಕೋರರೆಂದು ತೀರ್ಮಾನಿಸಲಾಗುತ್ತದೆ. ಎನ್‌ಆರ್‌ಸಿ ಜಾರಿಗೆ ತಂದು ಭಾರತದಿಂದ ಮುಸ್ಲಿಂರನ್ನು ಹೊರಹಾಕಲಾಗುತ್ತದೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪ್ರಚೋದನೆ ನೀಡುತ್ತಿರುವ ವಿರೋಧ ಪಕ್ಷಗಳ ನಿಲುವನ್ನು ಇದೇ ಸಂದರ್ಭದಲ್ಲಿ ಖಂಡಿಸಿದರು.

ಮುಸ್ಲಿಂರ ಹಿತರಕ್ಷಣೆಗೆ ನಮ್ಮ ಸರ್ಕಾರ ಬದ್ಧವಿದೆ. ಎನ್‌ಆರ್‌ಸಿಯಿಂದ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಮಿಸ್ಡ್ ಕಾಲ್ ಮಾಡಿ :

ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಕ್ರೋಢಿಕರಿಸಲು ಬಿಜೆಪಿ ಟೋಲ್ ಫ್ರೀ ಸಂಖ್ಯೆ ಬಿಡುಗಡೆ ಮಾಡಿದ್ದು ಸಿಎಎ ಕಾಯ್ದೆಗೆ ಬೆಂಬಲ ಸೂಚಿಸಲು ಇಚ್ಛಿಸುವವರು ೮೮೬೬೨೮೮೬೬೨ ಗೆ ಕರೆ ಮಾಡಬೇಕು. ಇಂದಿನಿಂದ ಇದೇ ೧೦ನೇ ದಿನಾಂಕವರೆಗೆ ಈ ಅಭಿಯಾನ ನಡೆಯಲಿದೆ. ಪ್ರತಿ ಮನೆ-ಮನೆಗೆ ತೆರಳಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವಂತೆ  ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡರು.

ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಘಯೋಮನೀಬ ಮಹಾಮಂಡಳ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಮಾಜಿ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಬಸವಂತ ಕಮತಿ, ಹನಮಂತ ತೇರದಾಳ, ಸಂತೋಷ ಸೋನವಾಲ್ಕರ, ವೆಂಕನಗೌಡ ಪಾಟೀಲ, ಮುತ್ತೆಪ್ಪ ಕುಳ್ಳೂರ, ಪ್ರಭಾಶುಗರ ನಿರ್ದೇಶಕ ಮಾಳಪ್ಪ ಜಾಗನೂರ, ನ್ಯಾಯವಾದಿ ಲಕ್ಷ್ಮಣ ತಪಸಿ, ಪ್ರಕಾಶ ಮಾದರ, ಲಕ್ಕಪ್ಪ ತಹಶೀಲ್ದಾರ, ಭೀಮಶಿ ಮಗದುಮ್ಮ, ರವಿ ಪರುಶೆಟ್ಟಿ, ಪ್ರಮೋದ ಜೋಶಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button