Latest

ಕೊಡಚಾದ್ರಿ ಬೆಟ್ಟಕ್ಕೆ ಸಿಮೆಂಟ್ ರಸ್ತೆ ಪ್ರಸ್ತಾವನೆ ತಿರಸ್ಕಾರ: ಮಣ್ಣಿನ ರಸ್ತೆಯನ್ನೇ ಮುಂದುವರೆಸಲು ನಿರ್ಧಾರ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಪ್ರವಾಸಿಗರು ಹಾಗೂ ಚಾರಣಿಗರ ಅನುಕೂಲಕ್ಕಾಗಿ ಕೊಡಚಾದ್ರಿ ಬೆಟ್ಟದ ಮೇಲಿನ ವೀಕ್ಷಣಾಸ್ಥಳಕ್ಕೆ ತಲುಪಲು ಕಟ್ಟಿನಹೊಳೆಯಿಂದ ಕೊಡಚಾದ್ರಿ ಬೆಟ್ಟಕ್ಕೆ ಹೋಗಲು ಈಗಿರುವ ಮಣ್ಣಿನರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆ ಯನ್ನಾಗಿ ಉನ್ನತೀಕರಿಸಲು ರಾಜ್ಯ ವನ್ಯಜೀವಿ ಮಂಡಳಿಯು ಶಿಫಾರಸ್ಸು ಮಾಡಿ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಗೆ ಕಳುಹಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀಸಮಿತಿ ನಿರಾಕರಿಸಿದೆ.

ಬದಲಿಗೆ ಈಗಿರುವ ಮಣ್ಣಿನ ರಸ್ತೆಯನ್ನೇ ನಿರ್ವಹಣೆ ಮಾಡಲು ನಿರ್ಧರಿಸಿದೆ ಹಾಗೂ ರೋಪ್ವೇ ನಿರ್ಮಾಣದ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಲು ಸ್ಥಾಯೀ ಸಮಿತಿ ನಿರ್ಧರಿಸಿದೆ.

ಮಾರ್ಚ್ 25ರಂದು ಜರುಗಿದ ಸ್ಥಾಯೀ ಸಮಿತಿಯ 67ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೊಳಪಡುವ ಮೂಕಾಂಬಿಕಾ ಅಭಯಾರಣ್ಯದಲ್ಲಿ ಅಂದಾಜು 4.5 ಹೆಕ್ಟೇ ರ್ ರ ಹಾಗೂ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಾಗರ ಪ್ರಾದೇಶಿಕ ಅರಣ್ಯ ವಿಭಾಗದ ವ್ಯಾಪ್ತಿಗೊಳಪಡುವ ಮೂಕಾಂಬಿಕಾ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯದಲ್ಲಿ ಅಂದಾಜು 0.99 ಹೆಕ್ಟೇರ್ ಸೇರಿದಂತೆ ಒಟ್ಟು ಅಂದಾಜು 5.5ಹೆಕ್ಟೇ ರ್ ಅರಣ್ಯ ಪ್ರದೇಶದ ಪರಿವರ್ತನೆಗೆ ಅರ್ಜಿಸಲ್ಲಿಸಿದ್ದರು. ಈ ರಸ್ತೆಯ ಮೂಲಕ ಕೊಡಚಾದ್ರಿಯಲ್ಲಿ ಈಗಾಗಲೇ ಇರುವ ರಾಜ್ಯ ಹೆದ್ದಾರಿ, ರೆಸ್ಟೋರೆಂಟ್ ಗಳು, ವಸತಿ ಗ್ರಹಗಳಿಗೆ ಸಂಪರ್ಕ ಒದಗಿಸಿದ್ದೇ ಆದಲ್ಲಿ ಪ್ರವಾಸಿಗರು, ಚಾರಣಿಗರು ಹಾಗೂ ಭಕ್ತಾದಿಗಳಿಗೆ ಕೊಡಚಾದ್ರಿಯು ಒಂದು ಉತ್ತಮ ಪ್ರವಾಸೋದ್ಯಮ ಸ್ಥಳವಾಗಿ ರೂಪುಗೊಳ್ಳಲು ಈಯೋಜನೆ ಸಹಕಾರಿಯಾಗಲಿದೆ.

ಅಲ್ಲದೆ ನಗರವಾಸಿಗಳಿಗೆ ಒಂದು ಪ್ರಶಾಂತಸ್ಥಳವಾಗಿ ಕೊಡಚಾದ್ರಿಯು ರೂಪುಗೊಳ್ಳಲಿದೆ ಎಂದು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮನಿಯಮಿತರವರು ಸದರಿಯೋಜನೆಯನ್ನು ಅರಣ್ಯಪ್ರದೇಶದಲ್ಲಿ ಉದ್ದೇಶಿಸಿರುವುದನ್ನು ಸಮರ್ಥಿಸಿಕೊಂಡಿದ್ದರು.
ದೇಶದೆಲ್ಲೆಡೆ ಅಭಯಾರಣ್ಯಗಳು, ರಾಷ್ಟ್ರೀಯ ಉದನಗಳು, ಹುಲಿಸಂರಕ್ಷಿತ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಶಿಫಾರಸ್ಸು ಮಾಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀ ಸಮಿತಿಯು 2013ರಲ್ಲಿ ತಜ್ಞರ ಉಪಸಮಿತಿಯೊಂದನ್ನು ರಚಿಸಿತ್ತು. ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಈಗಿರುವ ರಸ್ತೆಗಳನ್ನು ಉನ್ನತೀಕರಿಸಬಾರದೆಂದು ಉಪಸಮಿತಿಯ ಶಿಫಾರಸ್ಸುಮಾಡಿತ್ತು. ಹಾಗೂ ಈ ಶಿಫಾರಸ್ಸುಗಳನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯೀಸಮಿತಿಯು 2014ರಲ್ಲಿ ಒಪ್ಪಿಕೊಂಡಿತ್ತು. ಹೀಗಿರುವಾಗ ಕೊಡಚಾದ್ರಿಯ ಮಣ್ಣಿನ ರಸ್ತೆಯನ್ನು ಸಿಮೆಂಟ್ ಕಾಂಕ್ರೀಟ್ ರಸ್ತೆ ಯನ್ನಾಗಿ ಪರಿವರ್ತಿಸಲು ಶಿಫಾರಸ್ಸು ಮಾಡಲು ಹೇಗೆ ಸಾಧ್ಯ?

ಇದೇತರಹ ಮಾಡುತ್ತ ಹೋದರೆ ದೇಶದ ಇತರೆ ಸಂರಕ್ಷಿತ ಪದೇಶಗಳಲ್ಲೂ ಸಹ ಪ್ರವಾಸಿಗರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ ಪ್ರಸ್ತಾವನೆಗಳಿಗೆ ಒಪ್ಪಿಗೆ ಸೂಚಿಸಬೇಕಾಗುತ್ತದೆ. ತನ್ಮೂಲಕ ನೈಸರ್ಗಿಕ ಆವಾಸ ಸ್ಥಾನಗಳನ್ನು ನಾವಾಗಿಯೇ ಹಾಳು ಮಾಡಿದಂತಾಗುತ್ತದೆಯೆಂದು ವನ್ಯಜೀವಿ ಕಾರ್ಯಕರ್ತರು ಎಚ್ಚರಿಸಿದ್ದರು. ರಾಷ್ಟೀಯ ವನ್ಯಜೀವಿ ಮಂಡಳಿಯ ಸ್ಥಾಯೀಸಮಿತಿ ಈ ಪ್ರಸ್ತಾವನೆಗೆ ಯಾವುದೇ ಕಾರಣಕ್ಕೂ ಒಪ್ಪಿಗೆ ಸೂಚಿಸಬಾರದೆಂದು ಕಾರ್ಯಕರ್ತರು ಆಗ್ರಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button