ಪ್ರಗತಿವಾಹಿನಿ ಸುದ್ದಿ; ಕೊಡಗು: ಕೇರಳದಲ್ಲಿ ಕಿಡಿಗೇಡಿಗಳು ಅನಾನಸ್ ನಲ್ಲಿ ಪಟಾಕಿಯಿಟ್ಟು ಆನೆಗೆ ತಿನ್ನಿಸಿ ಗರ್ಭಿಣಿ ಆನೆ ಸಾವಿಗೆ ಕಾರಣರಾದ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಕೂಡ ಇಂಥದ್ದೇ ಘೋರ ಘಟನೆ ಬೆಳಕಿಗೆ ಬಂದಿದೆ. ಕಾಫಿ ತೋಟಕ್ಕೆ ದನಗಳು ನುಗ್ಗುತ್ತಿವೆ ಎಂದು ಬಾಳೆಹಣ್ಣಿನಲ್ಲಿ ವಿಷವಿಟ್ಟು ಹಸುಗಳು ಸೇರಿದಂತೆ 20 ದನ ಕರುಗಳನ್ನು ಸಾಯಿಸಿರುವ ಅಮಾನವೀಯ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಸೋಮವಾರಪೇಟೆ ತಾಲೂಕಿನ ಐಗೂರಿನ ಡಿಬಿಡಿ ಟಾಟಾ ಎಸ್ಟೇಟ್‍ನಲ್ಲಿ ಈ ಘಟನೆ ನಡೆದಿದ್ದು, ಐಗೂರಿನಲ್ಲಿರುವ ಟಾಟಾ ಎಸ್ಟೇಟ್‍ಗೆ ಗ್ರಾಮಸ್ಥರ ದನಗಳು ನುಗ್ಗುತ್ತಿದ್ದವು. ಇದರಿಂದ ಎಸ್ಟೇಟ್‍ನ ಮ್ಯಾನೇಜರ್ ಮತ್ತು ಸಿಬ್ಬಂದಿ ಸೇರಿ ಬಾಳೆಹಣ್ಣಿಗೆ ವಿಷ ಹಾಕಿ ಇಟ್ಟಿದ್ದಾರೆ. ಇದನ್ನು ತಿಂದ ಹಸುಗಳು ದಾರುಣವಾಗಿ ಸಾವನ್ನಪ್ಪಿವೆ.
ಸತ್ತ ದನಗಳನ್ನು ಯಾರಿಗೂ ಅನುಮಾನ ಬಾರದಂತೆ ಎಸ್ಟೇಟ್ ಒಳಗಿನ ದೊಡ್ಡ ಕಂದಕಕ್ಕೆ ಹಾಕಿ ಮರಗಳನ್ನು ಕಡಿದು ಹಾಕಿದ್ದಾರೆ. ದನ ಕರುಗಳು ಕಾಣೆಯಾಗಿದ್ದರಿಂದ ಅನುಮಾನಗೊಂಡ ಗ್ರಾಮಸ್ಥರು ಹುಡುಕಾಡಲು ಪ್ರಾರಂಭಿಸಿದ್ದಾರೆ. ಆಗ ಘಟನೆ ಬೆಳಕಿಗೆ ಬಂದಿದೆ.
ಆದರೆ ಎಸ್ಟೇಟ್ ಮ್ಯಾನೇಜರ್ ದನಗಳು ಎಸ್ಟೇಟ್ ನಲ್ಲಿ ಸಾವನ್ನಪ್ಪಿದ್ದವು. ಹಾಗಾಗಿ ಗುಂಡಿಗೆ ಹಾಕಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ