*ಹಣದಾಸೆಗಾಗಿ ಏಳುದಿನದ ಮಗುವನ್ನು ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದ ದಂಪತಿ*

ಪ್ರಗತಿವಾಹಿನಿ ಸುದ್ದಿ: ಮಗು ಹುಟ್ಟಿದ ಒಂದೇ ವಾರದಲ್ಲಿ ನವಜಾತ ಶಿಶುವನ್ನು ಜೋಡಿ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಎರಡನೇ ಪತಿಯಿಂದ ಹುಟ್ಟಿದ ನವಜಾತ ಮಗುವನ್ನು ಮಹಿಳೆ ಹಾಗೂ ಆಕೆಯ ಪತಿ ಹಣದಾಸೆಗೆ ಮಾರಾಟಕ್ಕೆ ಯತ್ನಿಸಿದ್ದಾರೆ.
ನೀತಾ ಎಂಬ ಮಹಿಳೆಗೆ ಈಗಾಗಲೇ ಎರಡು ಮಕ್ಕಳಿದ್ದರು. ಮೊದಲ ಗಂಡನಿಗೆ ಒಂದು ಗಂಡು ಮಗುವಿತ್ತು. ಇನ್ನು ಎರಡನೇ ಗಂಡನಿಗೆ ಒಂದು ಮಗುವಿತ್ತು. ಈ ನಡುವೆ ಮೂರನೇ ಮಗುವನ್ನು ಹಣದ ಆಸೆಗಾಗಿ ಮಾರಾಟ ಮಾಡಲು ಯತ್ನಿಸಿದ ವೇಳೆ ಶ್ರೀನಿವಾಸಪುರ ಪಟ್ಟಣದಲ್ಲಿ ಪೊಲಿಸರ ಕೈಗೆ ಸಿಕ್ಕಬಿದ್ದಿದ್ದಾರೆ.
ಶ್ರೀನಿವಾಸಪುರ ಪಟ್ಟಣದ ನಿವಾಸಿ ನೀತಾ ಮೊದಲು ಸಂತೋಷ್ ಎಂಬುವವನ ಜೊತೆಗೆ ಮದುವೆಯಾಗಿದ್ದಳು. ಅವನಿಗೆ ಒಂದು ಗಂಡು ಮಗುವಾಗಿತ್ತು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆ ಸಂತೋಷ್ನನ್ನು ತೊರೆದಿದ್ದ ನೀತಾ, ರಾಘವೇಂದ್ರ ಜೊತೆಗೆ ಎರಡನೇ ಮದುವೆ ಆಗಿದ್ದಾಳೆ. ರಾಘವೇಂದ್ರನಿಗೆ ಈಗಾಗಲೇ ಒಂದು ಹೆಣ್ಣು ಮಗುವಿತ್ತು. ಈ ನಡುವೆ ನೀತಾ ಗರ್ಭಣಿಯಾಗಿದ್ದಳು. ಬಡತನ ಇದ್ದರೂ ಕೂಡ ಮತ್ತೊಮ್ಮೆ ಗರ್ಭಿಣಿಯಾಗಿದ್ದ ನೀತಾ ಮತ್ತು ರಾಘವೇಂದ್ರಗೆ ಈ ಮಗು ಬೇಡವಾಗಿತ್ತು.
ಈ ವೇಳೆ ನಾರಾಯಣಸ್ವಾಮಿ ಎಂಬಾತ ನನಗೆ ಪರಿಚಯಸ್ಥರೊಬ್ಬರಿಗೆ ಮಕ್ಕಳಿಲ್ಲ, ನಿಮ್ಮ ಮಗು ಕೊಟ್ಟರೆ ಐದು ಲಕ್ಷ ರೂ. ಕೊಡಿಸುವುದಾಗಿ ಹೇಳಿದ್ದ. ಅದಕ್ಕಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಾಲಕೃಷ್ಣ ಹಾಗೂ ಮಂಜುಳ ದಂಪತಿಗಳಿಗೆ ಮಗು ಕೊಡಿಸಲು ಮಧ್ಯಸ್ಥಿಕೆ ವಹಿಸಿಕೊಂಡಿದ್ದ. ಅದರಂತೆ ಕಳೆದ ಏಳು ದಿನದ ಹಿಂದೆ ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಯಲ್ಲಿ ಜನಿಸಿದ ಗಂಡು ಮಗುವನ್ನು ಒಪ್ಪಂದದಂತೆ ದಂಪತಿ ನೀಡಿದ್ದಾರೆ. ಈ ವೇಳೆ ಪೊಲೀಸರಿಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಐವರನ್ನು ಬಂಧಿಸಿದ್ದು, ಮಗುವನ್ನು ರಕ್ಷಿಸಿದ್ದಾರೆ.



