
ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಮಲಗಿದ್ದ ಹೆತ್ತ ತಂದೆ-ತಾಯಿಯನ್ನೇ ಮಗನೊಬ್ಬ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಡೆದಿದೆ.
ಗಿರಿಯಪ್ಪ (65) ಮತ್ತು ಅಕ್ಕಮ್ಮ (60) ಮೃತ ಪೋಷಕರು. ರಮೇಶ್ ಅಪ್ಪ-ಅಮ್ಮನನ್ನೇ ಕೊಲೆ ಮಾಡಿದ ಆರೋಪಿ ಮಗ.
ಆರೋಪಿ ರಮೇಶ್ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದ. ಇದರಿಂದ ಬೇಸತ್ತ ಪತ್ನಿ ತವರು ಮನೆಗೆ ಹೋಗಿದ್ದಳು. ಈ ವೇಳೆ ಪೋಷಕರಿಗೆ ಆರೋಪಿ ರಮೇಶ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಒತ್ತಡ ಹಾಕುತ್ತಿದ್ದ. ಆಗ ತಂದೆ ಗಿರಿಯಪ್ಪ ನೀನು ಮೊದಲು ಕೆಲಸ ಮಾಡು ನಂತರ ಕರೆದುಕೊಂಡು ಬರುತ್ತೀವಿ ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಆರೋಪಿ ರಮೇಶ್, ಅಪ್ಪ ಅಮ್ಮ ಮಲಗಿದ್ದ ಸಮಯದಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ.
ಪರಿಣಾಮ ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ಗಿರಿಯಪ್ಪನನ್ನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಕನಕಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.