Kannada NewsKarnataka News

ರಮೇಶ ಕತ್ತಿ ಕಾಂಗ್ರೆಸ್ ಸೇರ್ತಾರಾ? ಸತೀಶ್‌ ಜಾರಕಿಹೊಳಿ ಏನಂದ್ರು?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರಕ್ಕೆ ಮಾ. 20ರಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ನಗರದ ಸಿಪಿಎಡ್‌ ಮೈದಾನಕ್ಕೆ ಭೇಟಿ ನೀಡಿ ಸಮಾವೇಶ ನಡೆಯುವ ಸ್ಥಳ ಹಾಗೂ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ರೈತ ಸಮಾವೇಶ, ಮಹಿಳಾ ಸಮಾವೇಶ ಮಾಡಲಾಗಿದ್ದು, ಈಗ ಬೆಳಗಾವಿಯಲ್ಲಿ ಯುವ ಸಮಾವೇಶ ಮಾಡಲಾಗುತ್ತಿದೆ. ಸಮಾವೇಶಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಗಮಿಸುತ್ತಿದ್ದು, ಯುವಕರಿಗೆ ಹೊಸ ಸಂದೇಶ ನೀಡಲಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನ ಸೇರುವ ನಿರೀಕ್ಷೆ  ಇದೆ. ರೋಡ್‌ ಶೋ ಮಾಡುವ ಬಗ್ಗೆ ಇನ್ನು ಖಚಿತವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದೇವೆ, ಜಿಲ್ಲೆಯಲ್ಲಿಯೂ 10ರಿಂದ 12 ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ತಿಳಿಸಿದರು.

ಯುವಕರನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್‌ ಪಕ್ಷ ಸದಾ ಬದ್ಧವಿದೆ. ಸಮಾವೇಶದಲ್ಲಿ ರಾಹುಲ್‌ ಗಾಂಧಿಯವರು ಯುವಕರಿಗಾಗಿ ಎರಡು ಘೋಷಣೆಗಳನ್ನು ಘೋಷಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು,  ಪ್ರಧಾನಿ ಮೋದಿಯವರು ವರ್ಷಕ್ಕೆ 2 ಕೋಟಿ ಜನ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಅವರ ಘೋಷಣೆ ಘೋಷಣೆಯಾಗಿಯೇ ಉಳಿದಿದೆ. ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳನ್ನು ಈಡೇರಿಸಿದೆ. ಅದಕ್ಕಾಗಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕೆಂದು ತಿಳಿಸಿದರು.

Home add -Advt

ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಪರ್ಧೆ ಬಗ್ಗೆ ಹೈಕಮಾಂಡ್‌ ಗೆ ಬಿಟ್ಟ ವಿಚಾರ. ನಾವು ಸವದತ್ತಿಯಲ್ಲಿ ಸ್ಪರ್ಧೆ ಮಾಡುತ್ತೀರಾ.? ಎಂದು ಕೇಳಿದ್ದೀವಿ. ಆದರೆ ಅವರು ಸವದತ್ತಿಯಲ್ಲಿ ಸ್ಪರ್ಧಿಸಲ್ಲ ಎಂದಿದ್ದಾರೆ. ಹೀಗಾಗಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು ಎಂದರು.

ಸದ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಮಾಡಿಲ್ಲ. ಮೊದಲ ಪಟ್ಟಿ ಮಾರ್ಚ್ 22 ರಂದು ಬಿಡುಗಡೆಯಾಗಲಿದೆ. ಮಾಜಿ ಸಂಸದ ರಮೇಶ ಕತ್ತಿ ಕಾಂಗ್ರೆಸ್‌ ಸೇರ್ಪಡೆಯಾಗುವ ಬಗ್ಗೆ ನನ್ನ ಜತೆ ಚರ್ಚೆಯಾಗಿಲ್ಲ. ಸಾಕಷ್ಟು ಜನ ಬೇರೆ ಪಕ್ಷದವರು ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಐಸಿಸಿ ವೀಕ್ಷಕ ವಿಶ್ವನಾನಂದ, ಯುತ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ನಲಪಾಡ, ಮಾಜಿ ಶಾಸಕ ಸುಭಾಷ್ ಜೋಶಿ, ಕಾಂಗ್ರೆಸ್‌ ಮುಖಂಡರಾದ ಕಿರಣ ಸಾಧುನವರ್‌,  ಬಸವರಾಜ ಶಿಗ್ಗಾವಿ, ವಿವೇಕ ಜತ್ತಿ, ಮಹೇಶ ಕಡಪಟ್ಟಿ, ಆನಂದ ಗಡದೇವರಮಠ, ಮನಸೂರ ಖಾನ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.

Related Articles

Back to top button