ಕೆಪಿಎಸ್ಸಿ ಪರೀಕ್ಷೆ- ವಿಳಂಬಕ್ಕೆ ಕಾರಣ ಬಹಿರಂಗಪಡಿಸಿದ ಜಿಲ್ಲಾಧಿಕಾರಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ಲೋಕಸೇವಾ ಆಯೋಗದಿಂದ ಆಯೋಜಿಸಲಾಗಿದ್ದ ಗೆಜೆಟೆಡ್ ಪ್ರೊಬೋಷನರ್ ಗ್ರುಪ್ ಎ ಹಾಗೂ ಬಿ ಹುದ್ದೆಗಳ ಪೂರ್ವಭಾವಿ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆದಿದ್ದು, ಪ್ರಶ್ನೆಪತ್ರಿಕೆಯು ಸೋರಿಕೆಯಾಗಿಲ್ಲ; ಒಂದು ಕೇಂದ್ರದಲ್ಲಿ ಮಾತ್ರ ಸ್ವಲ್ಪಮಟ್ಟಿನ ವಿಳಂಬವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಬೆಳಗಾವಿ ನಗರದ ಅಂಜುಮನ್ ಪದವಿ ಮಹಾವಿದ್ಯಾಲಯದ ಪರೀಕ್ಷಾ ಉಪ ಕೇಂದ್ರ ಸಂಖ್ಯೆ-31 ರಲ್ಲಿ ಮಾತ್ರ ಪೂರ್ವಾಹ್ನ(ಪೇಪರ್-1) ಅಧಿವೇಶನದಲ್ಲಿ ಪ್ರಶ್ನೆಪತ್ರಿಕೆ ಟ್ರಂಕ್ ಕೀ ವ್ಯತ್ಯಾಸವಾದ ಕಾರಣಕ್ಕೆ ಸ್ವಲ್ಪಮಟ್ಟಿಗೆ ಪರೀಕ್ಷೆ ಆರಂಭಿಸುವುದು ವಿಳಂಬವಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ತಾವೇ ಸ್ವತಃ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಗೊಂದಲವನ್ನು ಬಗೆಹರಿಸಲಾಗಿರುತ್ತದೆ. ವಿಳಂಬಿತ ಅವಧಿಗೆ ಸಮನಾಗಿ ಹೆಚ್ಚಿನ ಕಾಲಾವಕಾಶ ನೀಡಲಾಗಿರುತ್ತದೆ. ಇನ್ನುಳಿದಂತೆ ಯಾವುದೇ ರೀತಿಯ ಸಮಸ್ಯೆಯಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ