*ಕೆಪಿಎಸ್ಸಿ ಹಗರಣ*: *1,500 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ*; *ಯಾರೆಲ್ಲ ಹೆಸರು ಉಲ್ಲೇಖ?*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮೊದಲ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ.
ಇ.ಡಿ ಅಧಿಕಾರಿಗಳು 1,500 ಪುಟಗಳ ಮೊದಲ ಆರೋಪ ಪಟ್ಟಿಯನ್ನ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಮೊದಲು ಬಂಧನವಾಗಿದ್ದ ಇಬ್ಬರು ಆರೋಪಿಗಳು, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಕಿಂಗ್ಪಿನ್ ಬಸವರಾಜ್ ಕನ್ನಾಳೆ ವಿರುದ್ಧ ಹಲವು ಆರೋಪಗಳನ್ನು ಉಲ್ಲೇಖಿಸಲಾಗಿದೆ.
ಪಿಎಂಎಲ್ಎ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣದಲ್ಲಿ ಅಮಾನತುಗೊಂಡ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ.ಗೀತಾ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ 50ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ನೇಮಕಾತಿ ಅಕ್ರಮದಲ್ಲಿ ಕೋಟಿಗಟ್ಟಲೆ ಲಂಚದ ಹಣ ವರ್ಗಾವಣೆಯಾಗಿರುವುದಕ್ಕೆ ದೊರೆತ ದಾಖಲೆಗಳನ್ನು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಇ.ಡಿ.ಮೂಲಗಳು ತಿಳಿಸಿವೆ.
ದೇವನಹಳ್ಳಿ ಬಳಿಯ ಖಾಸಗಿ ರೆಸಾರ್ಟ್ವೊಂದರಲ್ಲಿ ಪರೀಕ್ಷೆಗೆ ಒಂದು ದಿನ ಮೊದಲೇ ಅಭ್ಯರ್ಥಿಗಳಿಗೆ ಉತ್ತರಸಮೇತ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ಈ ಕುರಿತು ರೆಸಾರ್ಟ್ ಸಿಬ್ಬಂದಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಬೀದರ್ನ ಸಹಕಾರಿ ಬ್ಯಾಂಕ್ನಲ್ಲಿ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಲಂಚದ ಹಣ ವರ್ಗಾವಣೆಯಾಗಿದೆ. ಇದೇ ಹಣದಲ್ಲಿ ಅಂದಾಜು 52 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳನ್ನು ಐಎಎಸ್ ಅಧಿಕಾರಿ ಗಂಗ್ವಾರ್ ಅವರ ಸ್ನೇಹಿತೆಗೆ ಖರೀದಿಸಲಾಗಿತ್ತು.
ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ನಲ್ಲಿರುವ ಜ್ಯೂವೆಲರಿ ಶೋರೂಮ್ನ ಸಿಬ್ಬಂದಿ ನೀಡಿದ ಹೇಳಿಕೆಗಳು ಹಾಗೂ ಗಂಗ್ವಾರ್ ತಮ್ಮ ಮಹಿಳಾ ಸ್ನೇಹಿತೆಯೊಂದಿಗೆ ಆಭರಣ ಖರೀದಿಸುತ್ತಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದೆ. ಆರೋಪಿಗಳಿಗೆ ಸೇರಿದ ಪ್ರಮುಖ ಆಸ್ತಿಗಳ ಜಪ್ತಿ ವಿವರಗಳನ್ನು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಗಂಗ್ವಾರ್ಗೆ ಸೇರಿದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಜಮೀನು, ಬಿ.ವಿ.ಗೀತಾಗೆ ಸೇರಿದ ಜಮೀನು ಹಾಗೂ ಸಾಹುಕಾರ್ಗೆ ಸೇರಿದ ಜಮೀನು ಸೇರಿವೆ. ತನಿಖೆಯ ಆರಂಭಿಕ ಹಂತದಲ್ಲಿ ಇಡಿಯ ಹಿರಿಯ ಅಧಿಕಾರಿಯೊಬ್ಬರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಕೆಪಿಎಸ್ಸಿ ಪರೀಕ್ಷಾ ಅಕ್ರಮದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನೇರ ಪಾತ್ರವಿದ್ದು, ಅವರು ಅಭ್ಯರ್ಥಿಗಳಿಂದ ಸುಮಾರು 1 ಕೋಟಿ ರೂ. ಲಂಚ ಪಡೆದಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಪತ್ರವನ್ನೂ ಸಹ ಪ್ರಸ್ತುತ ದೋಷಾರೋಪ ಪಟ್ಟಿಗೆ ಲಗತ್ತಿಸಲಾಗಿದೆ.
ಕೆಪಿಎಸ್ಸಿ ನಡೆಸಿದ ಪಶುವೈದ್ಯಾಧಿಕಾರಿ ಪರೀಕ್ಷಾ ಅಕ್ರಮ ಸಂಬಂಧ ಕೋಟ್ಯಾಂತರ ರೂ. ಭ್ರಷ್ಟಾಚಾರ ನಡೆದಿದೆ ಎಂದು ಅಭ್ಯರ್ಥಿಯೊಬ್ಬರು ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಇದೇ ಆರೋಪ ಸಂಬಂಧ ಮತ್ತೆರಡು ಪ್ರಕರಣಗಳು ದಾಖಲಾಗಿತ್ತು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಸಿಐಡಿ ಅಧಿಕಾರಿಗಳು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಮಧ್ಯವರ್ತಿ ಬಸವರಾಜು ಕನ್ನಾಳೆಯನ್ನು ಬಂಧಿಸಿತ್ತು. ಬಳಿಕ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾರನ್ನು ವಿಚಾರಣೆ ನಡೆಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



