*ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಸಂಶೋಧನೆ ಕೈಗೊಳ್ಳಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ*
ಕೃಷಿಮೇಳ- 2023
ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕೃಷಿ ವಿವಿಗಳು ಒಣಭೂಮಿಯಲ್ಲಿ ಕೃಷಿ ಅಭಿವೃದ್ಧಿ ಪಡಿಸುವ ಕುರಿತು ಹೆಚ್ಚು ಸಂಶೋಧನೆ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮಧ್ಯಾಹ್ನ ಧಾರವಾಡ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳ- 2023 ಉದ್ಘಾಟಿಸಿ, ಮಾತನಾಡಿದರು.
ಇಂದು ಶೇ.60 ರಷ್ಟು ಜನ ಕೃಷಿ ಮಾಡುತ್ತಿದ್ದು, ಭಾರತವು ಕೃಷಿ ಪ್ರಧಾನ ದೇಶವಾಗಿದ್ದರೂ ಸಾಕಷ್ಟು ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಮಳೆ ಆಧಾರಿತ ಕೃಷಿ ಭೂಮಿ ಇರುವದರಿಂದ ಮಳೆ ಕೊರತೆಯಾಗಿ ಸಮಸ್ಯೆ ಆಗುತ್ತಿದೆ ಎಂದರು
ಯುವಕರು, ಹೆಚ್ಚುಜನ ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಕೃಷಿ ವಿವಿಗಳು ಕಾರ್ಯ ಮಾಡಬೇಕು. ವಿಶ್ವವಿದ್ಯಾಲಯದ ಸಂಶೋಧನೆ, ತಾಂತ್ರಿಕತೆಗಳು ರೈತರ ಜಮೀನುಗಳಿಗೆ ತಲುಪಿದರೆ ಮಾತ್ರ ಸಾರ್ಥಕವಾಗುತ್ತದೆ. ಕೃಷಿ ಮೇಳಗಳು ಜಾತ್ರೆಗಳಾಗದೇ ಕೃಷಿ ಕ್ಷೇತ್ರಕ್ಕೆ ಯುವಕರನ್ನು, ಹೊಸಬರನ್ನು ಸೆಳೆಯುವಂತೆ ಆಕರ್ಷಕವಾಗಿ ಸಂಘಟಿಸಬೇಕು ಎಂದರು.
ಒಣ ಬೇಸಾಯ ಮಾಡುವ ರೈತರ ಬಗ್ಗೆ ವಿಶೇಷ ಕಾಳಜಿ ಇದೆ. ಒಣಬೇಸಾಯ ಮಾಡಲು ಅಗತ್ಯ ಸುಧಾರಿತ ಹೊಸ ತಳಿಗಳ ಸಂಶೋಧನೆ ಮಾಡಬೇಕು. ಬಿತ್ತಿದ ಯಾವುದೇ ಮುಖ್ಯ ಬೆಳೆ ಹಾಳಾದರೆ, ಅದಕ್ಕೆ ಪರ್ಯಾಯವಾದ ತಕ್ಷಣದ ಬೆಳೆಗಳನ್ನು ಮಾಡಬೇಕು ಎಂಬುದರ ಬಗ್ಗೆ ವಿಜ್ಞಾನಿಗಳು ಆಸಕ್ತಿ ವಹಿಸಿ, ಸಂಶೋಧನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು
ಲ್ಯಾಬ್ ಟು ಲ್ಯಾಂಡ್ ಅಂದರೆ ಪ್ರಯೋಗಾಲಯದ ಸಂಶೋಧನೆಗಳು ರೈತರ ಭೂಮಿಗೆ ತಲುಪಬೇಕು. ಅಂದಾಗ ಮಾತ್ರ ವಿಜ್ಞಾನಿಗಳ ಸಂಶೋಧನೆಗಳು ಫಲಪ್ರದವಾಗುತ್ತದೆ ಎಂದು ಅವರು ಹೇಳಿದರು.
ರೈತರಿಗೆ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರ
ಕೃಷಿ ಭಾಗ್ಯ, ಕೃಷಿ ಯಂತ್ರಧಾರೆ ಯೊಜನೆಗಳ ಮರುಜಾರಿ ಘೋಷಿಸಲಾಗಿದೆ. ರಾಜ್ಯದಲ್ಲಿ ಸಣ್ಣ ರೈತರು ಹೆಚ್ಚಿಗೆ ಇರುವದರಿಂದ ಉನ್ನತ ತಾಂತ್ರಿಕತೆ ಇರುವ ಕಟಾವು ಯಂತ್ರಗಳನ್ನು ರೈತರಿಗೆ ನೀಡಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ
ಕೋರಮಂಗಲ ಚಲ್ಲಘಟ್ಟ(ಕೆಸಿ) ವ್ಯಾಲಿ ಮೂಲಕ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಳಕ್ಕೆ, ನೀರಾವರಿಗೆ ಅನಕೂಲ ಮಾಡಲಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ
ರಾಜ್ಯ ಸರಕಾರ ಈ ವರ್ಷದಿಂದ ರೈತರಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿ ಸಾಲ ಮತ್ತು ರೂ.15 ಲಕ್ಷದವರೆಗೆ ಕೇವಲ ಶೇ. 3 ರಷ್ಟು ಬಡ್ಡಿ ನಿಗದಿಗೊಳಿಸಿ, ಕ್ರಮಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಮಹದಾಯಿ ಯೋಜನೆಗೆ ಬದ್ಧ
ಮಹಾದಾಯಿ ಯೋಜನೆ ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಕೇಂದ್ರ ಸರಕಾರ ಶೀಘ್ರವಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಿದರೆ ಯೋಜನೆ ಅನುಷ್ಠಾನ ಸುಲಭ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೇಂದ್ರ ಸರಕಾರ ಗೋವಾ ಸರಕಾರದೊಂದಿಗೆ ಸಮಾಲೋಚಿಸಿ, ಪರಿಸರ ಮತ್ತು ಅರಣ್ಯ ಸಂಬಂಧಿಸಿದ ತಕರಾರು ಪರಿಹರಿಸಿದರೆ ರಾಜ್ಯ ಸರಕಾರ ತಕ್ಷಣ ಕ್ರಮ ವಹಿಸಲಿದೆ. ರಾಜ್ಯ ಸರಕಾರಕ್ಕೆ ಹಣಕಾಸಿನ ಕೊರತೆ ಇಲ್ಲ ಎಂದು ಅವರು ಹೇಳಿದರು.
ಬೆಣ್ಣಿಹಳ್ಳ ಯೋಜನೆ: ಶೀಘ್ರ ಜಾರಿ
ಬೆಣ್ಣಿಹಳ್ಳ ಯೋಜನೆಯನ್ನು ಡಿಪಿಆರ್ ಮಾಡಿಸಿ, ಶೀಘ್ರವಾಗಿ ಜಾರಿಗೊಳಿಸಲಾಗುವುದು. ಧಾರವಾಡ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ರೈತರ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿ, ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು .
ಪಂಚ ಗ್ಯಾರಂಟಿಗಳೊಂದಿಗೆ ಎಲ್ಲ ಅಭಿವೃದ್ಧಿ ಕಾರ್ಯಗಳ ಮುಂದುವರಿಕೆ; ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದೆ
ಬಡವರ ವಿರೋಧಿಗಳು ಪಂಚ ಗ್ಯಾರಂಟಿ ಅನುಷ್ಠಾನ ವಿಷಯದಲ್ಲಿ ಸರಕಾರದ ವಿರುದ್ಧ ಸುಳ್ಳ ಆರೋಪ ಮಾಡುತ್ತಿದ್ದಾರೆ, ಆದರೆ ಸರಕಾರ ಆರ್ಥಿಕವಾಗಿ ಸುಸ್ಥಿರವಾಗಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಲಾಗಿದೆ. ಪಂಚಗ್ಯಾರಂಟಿಗಳು ಸೇರಿ ರಾಜ್ಯದ ಅಭಿವೃದ್ಧಿಗಾಗಿ ಮುಂದಿನ ವರ್ಷ ಸುಮಾರು 3 ಲಕ್ಷ 80 ಸಾವಿರ ಕೋಟಿ ರೂ. ಗಳ ಬಜೆಟ್ ಮಂಡಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಯಾರಿಗೂ ಭಯಬೇಡ
ಪಂಚಗ್ಯಾರಂಟಿ ಯೋಜನೆಗಳ ಜಾರಿಯಿಂದ ಅಭಿವೃದ್ಧಿಗೆ ಹಣದ ಕೊರತೆ ಆಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸರಕಾರಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲ. ಸರಕಾರದ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳು ಮುಂದುವರೆಯಲಿವೆ. ಪ್ರಸಕ್ತ ವರ್ಷ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ಸುಮಾರು 32 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಮುಂದಿನ ವರ್ಷದಿಂದ ಪ್ರತಿವರ್ಷ ಪಂಚ ಗ್ಯಾರಂಟಿಗಳ ಜಾರಿಗೆ ಸುಮಾರು 56 ಸಾವಿರ ಕೋಟಿ ರೂ.ಗಳು ಬೇಕಾಗುತ್ತದೆ. ಈ ಎಲ್ಲ ಅಗತ್ಯ ಹಣ ಹೊಂದಿಸಲು ಸರಕಾರ ಸಶಕ್ತವಾಗಿದೆ. ಯಾರಿಗೂ ಭಯಬೇಡ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪಂಚ ಗ್ಯಾರಂಟಿಗಳ ವೆಚ್ಚ ಸೇರಿ ಮುಂದಿನ ವರ್ಷದ ಬಜೆಟ್ ಸುಮಾರು 380 ಲಕ್ಷ ಕೋಟಿಗಳಾಗುವ ಅಂದಾಜಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಸಚಿವ ಹಾಗೂ ಕೃಷಿವಿವಿ ಸಮ ಕುಲಾಧಿಪತಿ ಎನ್. ಚಲುವರಾಯಸ್ವಾಮಿ ಅವರು ಕೃಷಿ ವಿವಿಯ ವಿಶೇಷ ಪ್ರಕಟಣೆಗಳನ್ನು ವೇದಿಕೆಯಲ್ಲಿ ಬಿಡುಗಡೆ ಮಾಡಿದರು.
ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ರೈತ ಮಹಿಳೆಯರಿಗೆ, ಪ್ರಗತಿಪರ ರೈತರಿಗೆ ಮುಖ್ಯಮಂತ್ರಿಗಳು ಪ್ರಶಸ್ತಿ ವಿತರಿಸಿ, ಗೌರವಿಸಿದರು.
ಕೃಷಿ ಸಚಿವ ಎನ್. ಚಲುರಾಯಸ್ವಾಮಿ , ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಬಸವರಾಜ ಶಿವಣ್ಣನವರ, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ, ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್.ಪಾಟೀಲ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ, ಜಿ.ಪಂ. ಸಿಇಒ ಸ್ವರೂಪ. ಟಿ.ಕೆ., ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ವೇದಿಕೆಯಲ್ಲಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ