ಅಮ್ಮಾ ನಾ ಹೋಗಲಾರೆ… ಕಾಡು, ಕತ್ತಲು… ಭಯವಮ್ಮಾ

 ಗೀತಾ ಹೆಗಡೆ
ಆಗೆಲ್ಲ ಶಾಲೆಗೆ ಎರಡು, ಮೂರು ಕಿ.ಮೀ.ಇದ್ದರೂ, ನಾವು ನಡೆದೇ ಹೋಗುವುದು.ಹಳ್ಳಿಯ ಶ್ರಮಜೀವಿಗಳಿಗೆ ಕತ್ತಲಾಗುತ್ತಿದ್ದ ಹಾಗೇ ವಿಶ್ರಾಂತಿಯ ಸಮಯ.
ರಾತ್ರಿ ಎಳೆಂಟು ಗಂಟೆ ಒಳಗಡೆ ಊಟ ಮುಗಿಸಿ , ಒಂಭತ್ತು ಗಂಟೆ ಅಂದ್ರೆ ಹಾಸಿಗೆಯಲ್ಲಿ  ಬಿದ್ದರೆ ಸಾಕು, ನಿದ್ದೆ.
ಹಾಗಿದ್ದರೂ..
ಅಜ್ಜಿಯೋ, ಅಮ್ಮ,ಅಪ್ಪನೋ ಯಾರಾದರೂ ಕಥೆ ಹೇಳಬೇಕು. “ಹ್ಮ..” ಅನ್ನುವುದು ನಿಲ್ಲಿಸಿದರೆ ಕತೆ ಹೇಳುವುದಿಲ್ಲ ಮತ್ತೆ  ..!
ಅಂತ ಬೆದರಿಕೆ ಬೇರೆ  ಹಾಕುತ್ತಿದ್ದರು.( ಹ್ಮ ಅನ್ನುವುದು ನಿಂತಾಗಲೆ ಅವರಿಗೆ ಪಕ್ಕಾ,ಕಥೆ ನಿಲ್ಲಿಸ ಬಹುದು ನಿದ್ದೆ ಬಂದಿದೆ ಅಂತ. )
ಅಪ್ಪ  ಆಗಾಗ ಕೃಷ್ಣನ ಕಥೆ ಶುರುಮಾಡುತ್ತಿದ್ದರು.  ಮಾವನ  ದಿಗ್ಭಂಧನದಲ್ಲಿ  ಮಥುರೆಯ  ಜೈಲಿನಲ್ಲಿ ಹುಟ್ಟಿದ ಶ್ರೀಕೃಷ್ಣ. ತುಂಬಿ ಹರಿವ ಯಮುನೆ ದಾರಿ ಮಾಡಿ ಕೊಟ್ಟ ನಂತರ ಸರ್ಪದ ಹೆಡೆಯ ನೆರಳಲ್ಲಿ ಸಾಗಿದ ಕೃಷ್ಣನನ್ನು  ಹೊತ್ತ ವಸುದೇವ ..
ರೋಮಾಂಚನಕ್ಕೆ ಎದ್ದು ಕೂತು ಕಥೆ ಕೇಳಲು ಶುರುವಿಟ್ಟು ಕೊಳ್ಳುತ್ತಾ ಇದ್ದೆ. ಅವತಾರ ಪುರುಷನ ಕಥೆಯ ಪ್ರತಿ ಸಾಲೂ ಕುತೂಹಲಕಾರಿ. ನಿದ್ದೆ ಓಡಿಹೊಗುತ್ತಿತ್ತು. ಮನಸ್ಸು ಕಾಣದ ಕೃಷ್ಣನನ್ನು ಕಲ್ಪಿಸಿ ಅದೆಲ್ಲೋ ತೇಲಾಡುವ ಹಾಗಾಗುತ್ತಿತ್ತು.
ನಂಬಿ ಬಿಟ್ಟಿದ್ದೆ ..
ಇಲ್ಲಿಯೇ ಎಲ್ಲೋ,
ನನ್ನ ಹಾಗೆ ಆಟ ಆಡಿಕೊಂಡು.. ಅಮ್ಮನ ಕಾಡಿಕೊಂಡು
ಕೃಷ್ಣ ಇದ್ದಾನೆ..!
ಅದೊಂದು ದಿನ ಅಮ್ಮನ ಜೊತೆ  ಸಿನಿಮಾಕ್ಕೆ ಹೋದ ನೆನಪು. ಬಾಕಿ ಯಾವದೂ ನೆನಪಿಲ್ಲ..
ಬಾಲ ನಟ ಪುನೀತ್ ರಾಜ್‍ಕುಮಾರನನ್ನು ಲೋಕೇಶ್ ತಲೆಯ ಮೇಲೆ ಹೊತ್ತುಕೊಂಡು
“ಭೂಮಿಗೆ ಬಂದಾ ದೇವಕಿ ಕಂದಾ..
ನಾ ಬೇಡಲು.. ನನ್ನಾ ಕಾಪಾಡಲೂ..”
ಆ ಹಾಡನ್ನ ಕಣ್ಣು ಮುಚ್ಚದೇ ನೋಡಿದ್ದೆ.
ಅದ್ಭುತವಾಗಿ  ಕಂಡ  ದೃಶ್ಯ!
 ಸಿನಿಮಾ ಮುಗಿದು ಅಮ್ಮ ಕೈ ಹಿಡಿದು ಎಳೆದುಕೊಂಡು ಬಂದರೂ…
ಕೃಷ್ಣ ಸಿನಿಮಾ ಥಿಯೇಟರ್ ಒಳಗೆ ಎಲ್ಲೋ  ಇರಬಹುದು.!
ಹೊರಗೆ ಬರ್ತಾನಾ ನೋಡಿಯೇ ಬರೋಣಾ ಅಂತ ಅಂದುಕೊಂಡಿದ್ದೆ..!
ಆಗಲೂ ಬಲವಾಗಿ ನಂಬಿದ್ದೆ, ಒಂದಲ್ಲಾ ಒಂದಿನ ಕೃಷ್ಣ ನನಗೂ ಸಿಗುತ್ತಾನೆ!
ಕಣ್ತುಂಬ ನೋಡಿದರಾಯ್ತು ಅಂತ.
ಬೆಳಿತಾ ಬೆಳಿತಾ..
ಬುದ್ಧಿ ಬಾಲ್ಯವನ್ನ ಕಳೆದು ದೇವರನ್ನು ಕಲ್ಲಿನಲ್ಲಿ, ಗುಡಿಯಲ್ಲಿ, ನೋಡುವಷ್ಟು ಗಟ್ಟಿ ಆಯ್ತು.
ಆಗಲೂ..
ಒಂದು ಪುಸ್ತಕದ ಕತೆ ನನ್ನನ್ನ ಅತಿಯಾಗಿ ಸೆಳೆದಿತ್ತು..!
ಕೇಳಿ…
ಒಂದೂರಲ್ಲಿ ಬಡ ವಿಧವೆ ಹಾಗೂ ಅವಳ
ಪುಟ್ಟ ಮಗ. ಜನರ  ತಿರಸ್ಕಾರಕ್ಕೆ  ಸೋತು ಊರ ಅಂಚಲ್ಲಿ ಇದ್ದ ಯಾರಿಗೂ ಬೇಡಾದ ಹೊಲವನ್ನ ಉತ್ತಿ ಬಿತ್ತಿ ಗಂಜಿಯನ್ನಾದರೂ ದುಡಿಯುವ ಛಲ ಅಮ್ಮನಿಗೆ . ಅಮ್ಮ ದುಡಿದು ತಂದರೆ ಮಾತ್ರ ಹೊಟ್ಟೆಗೆ ಅನ್ನ.
ಆ  ತಾಯಿಯ  ಕತ್ತಲ ಜೀವನಕ್ಕೆ  ಕನಸು, ಬೆಳಕು ಎರಡೂ ಆ ಪುಟ್ಟ ಮಗ.
ಹುಡುಗನಿಗೆ ವಿದ್ಯೆ ಕಲಿಸ ಬೇಕಾದ ವಯಸ್ಸು ಬಂತು
ತಾಯಿ ಊರಿನ ಎಲ್ಲ ವಿದ್ವಾಂಸರನ್ನೂ ಬೇಡುತ್ತಿದ್ದಳು.
“ನನ್ನ ಮಗನಿಗೆ ವಿದ್ಯೆ ಹೇಳಿಕೊಡಿ, ಅವನು ತುಂಬಾ ಜಾಣ.”
ಬಡತನಕ್ಕೆ ಅವಮಾನ, ಅನುಮಾನ,ಸಾಧಾರಣವಾಗಿ ಇದ್ದ ಕಾಲವದು.
ಆ ಊರಲ್ಲಿ ತಾಯಿಯ ಆಸೆ ಈಡೇರಲಿಲ್ಲ.
ಅನಿವಾರ್ಯತೆ..!
ಪಕ್ಕದ ಊರಿನಲ್ಲಿ ಧರ್ಮ ಶಾಲೆ ಇದೆಯಂತೆ, ಮಗನನ್ನು ಕಲಿಸಿದರಾಯ್ತು.
“ತಾಯಿ”
ಕಾಡು ಕತ್ತಲೆಯ ಹಾದಿಯಲ್ಲಿ ಕರೆದೊಯ್ದಳು ಮಗನನ್ನು,
ಪಕ್ಕದ ಊರಿಗೆ.
ಕಾಡಿ ಬೇಡಿ.. ಅಂತೂ  ಬಹುದೊಡ್ಡ ವಿದ್ವಾಂಸರೇ ಗುರುವಾಗಿ ಸಿಕ್ಕಿದರು.
ಸಮಸ್ಯೆ ಈಗ ಕಂದನದು..
“ಅಮ್ಮಾ..”
“ಈ ಕಾಡುದಾರಿ ಭಯವಮ್ಮಾ !”
“ನನ್ನನ್ನು ಕಾಡು ಪ್ರಾಣಿಗಳು ಬೆನ್ನಟ್ಟಿ ಬಂದರೆ.?!”
“ಬಾಯಾರಿಕೆ ಆದರೆ ನಾನೇನು ಮಾಡಲಮ್ಮಾ ..?”
“ಅಮ್ಮಾ..
ನೀನೂ ಬಾ..
ನನ್ನನ್ನು ಶಾಲೆಗೆ ಬಿಡು..”
ತಾಯಿ ಕರುಳು ಚುರ್ರೆಂದಿತು..
“ಮಗನೇ..
ನಾನೂ ಬಂದರೆ ನಮ್ಮ ಹೊಟ್ಟೆಯ
ಪಾಡೇನು ?
ನನಗೆಲ್ಲಿ ಶಕ್ತಿ ಇದೆ
ದುಡ್ಡಿದ್ದವರಂತೆ ನಿನ್ನನ್ನ ಬೆಳೆಸಲು..?
ನೀನು ದೊಡ್ಡವನಾಗ್ತಿಯಲ್ಲ,
ಆಗ ನನಗೆ ಶಕ್ತಿ ಬರುತ್ತದೆ.”
ಧೈರ್ಯ ತುಂಬ ಹೋದಳು ತಾಯಿ.
“ಇಲ್ಲ..
ಅಮ್ಮಾ ನಾ ಹೋಗಲಾರೆ.
ಕಾಡು, ಕತ್ತಲು..ಭಯವಮ್ಮಾ..”
ಮಗು ಅಳುತ್ತುತ್ತು..
“ನೋಡಿಲ್ಲಿ..
“ನೀನೆಲ್ಲಿ ಒಬ್ಬನೇ ಹೋಗುತ್ತಿರುವೆ..?!”
“ನಿನ್ನ ಅಣ್ಣ ಒಬ್ಬನಿದ್ದಾನೆ.
ನಿನಗೆ ಯಾವಾಗ ಭಯವಾಗುತ್ತದೆಯೋ
ಆಗ ಕರೆ ಅವನನ್ನು..”
ಯುಕ್ತಿ..
ಯೋಚಿಸುತ್ತಿದ್ದಳು  ಮಹಾತಾಯಿ..
ಮಗ ಸುಳ್ಳಲ್ಲದ, ನಿಜವನ್ನು,
ನಿಜವಲ್ಲದ ಸುಳ್ಳನ್ನು, ನಂಬಿದ್ದಾನೆ.
“ಹೌದೇನಮ್ಮ ..?!
ಏನು ಅವನ ಹೆಸರು..?
ನನಗೂ ಅಣ್ಣ ಇರುವನೇ ?!”
“ಹೌದು ಕಂದಾ..
ಅವನ ಹೆಸರು..
ಗೋವಿಂದ..
ಮುಕುಂದ..
ಏನಾದರೊಂದು ಕರೆ..”
“ಹೌದಾ ಅಮ್ಮ..?!
ಇಷ್ಟು ದಿನ ಹೇಳಲೇ ಇಲ್ಲ  ನೀನು..!
“ಅವನು ಹಾಗೆಲ್ಲ  ಬರುವುದಿಲ್ಲ ಮಗೂ..
ನಿನಗೆ ಭಯ ಆದರೆ ಮಾತ್ರ ಕರೆ.
ಹಾಗೇ ಕರೆಯುತ್ತಾ ಜೋರಾಗಿ ನಡೆ.
ಕಾಡು ಕಳೆದರೆ ಸಾಕು ಭಯವಾಗದು..
ಓದಿ ಜಾಣನಾಗು ಮಗೂ..”
ಅಮ್ಮ ಹಾರೈಸಿದ್ದಳು.
ಅಮ್ಮ ಮಗ ಇಬ್ಬರೂ ತಬ್ಬಿ ಮಲಗಿ
ಕಳೆವ ನೀರವ ಕತ್ತಲೆಗಳು, ಒಬ್ಬರನ್ನೊಬ್ಬರು ಸಂತೈಸುವಂತೆ ಇರುತ್ತಿತ್ತು..
ಅದು..ಮಗ ಶಾಲೆಗೆ ಹೊರಟ ದಿನ. ತಾಯ ಕಂಗಳು ಅಸಹಾಯಕ,ಸಾಂತ್ವನ, ಸಂತೋಷದಿಂದ  ತುಂಬಿದ ಕೊಳವಾಗಿತ್ತು. ಬೀಳ್ಕೊಟ್ಟಳು ಹಲವು ಹಂಬಲಗಳ ಜೊತೆಗೆ.
ಮುಗ್ಧ ಮಗು..
ಜಗದ ನೀರವತೆಯನ್ನು ಇನ್ನೂ ಕಂಡೇ ಇರದ ಬಾಲ್ಯ !
ಕಾನನದ ಭಯಾನಕ ಮೌನಕ್ಕೆ,
 ಗಾಳಿ ಬೀಸಿದಾಗ ಕಿವಿ ಸೀಳುವ ಸದ್ದಿಗೆ,
ದೂರದಲ್ಲಿ ಕಾಡು ಪ್ರಾಣಿಗಳ ಕೂಗಿಗೆ..
 ಭಯ ಬೀಳದೇ..?
“ಅಣ್ಣಾ… ಅಣ್ಣಾsss
ಬಾ ಅಣ್ಣಾ..sss”
ಅಣ್ಣ ಬರಲಿಲ್ಲ..
ಮಗು ನಿಂತು ಸುತ್ತಲೂ ದೃಷ್ಟಿ ಹಾಯಿಸಿತ್ತು..
ಮತ್ತೂ ಭಯವೇರಿತ್ತು.ಎದೆ ನಗಾರಿ ಆಗಿತ್ತು.
ಭಯ, ಅಳು ಎರಡೂ ಕರುಳಿಂದ ಕೂಗಾಗಿ ಹೊರಟಿತ್ತು…
“ಅಣ್ಣಾ.. ಬಾ ಅಣ್ಣಾ..ssss
ಎಲ್ಲಿದ್ದಿಯಣ್ಣ..
ನಂಗೆ ಭಯವಾಗಿದೆ..
ಬಾ ಅಣ್ಣಾ..sss”
ಕಾಡನ್ನೂ ಸೀಳಿ ..
ಹೊರಟಿತ್ತು..ಆರ್ತನಾದ..
ಮೊರೆ ಅಂದರೆ ಅವನಿಗೆ ಕೇಳದೇ..?!
ಬಂದಿಳಿದಿದ್ದ  ಅಣ್ಣ..!
ಗೋಪಾಲಕನಾಗಿ..!
“ತಮ್ಮಾ.”
“ಅದೇಕೆ..?!
ನಾನಿಲ್ಲೆ ಇರುವೆ ಮಗು..
ನಡೆ ಶಾಲೆಗೆ ಬಿಡುವೆ..”
ಹೀಗೆ ನಡೆದಿತ್ತು,
ಪ್ರತಿ ದಿನದ ಪಯಣ..
ಅಮ್ಮನಿಗೆ ಸಂಭ್ರಮದಿಂದ ಮಗು ಹೇಳಿದರೂ,
ಇವನೆಲ್ಲೊ ಭ್ರಮೆಗೆ ಬಿದ್ದಿದ್ದಾನೆ..! ಅಥವಾ ಯಾರೋ ಕಾಡಲ್ಲಿ ದನ ಕಾಯುವವ ಸಿಕ್ಕಿರುತ್ತಾನೆಂದು
ಸುಮ್ಮನಾದಳು.
ಒಂದು ದಿನ  ಗುರುಗಳ ಮನೆಯಲ್ಲಿ ಮಹಾ ಯಜ್ಞದ ತಯಾರಿ..
ಎಲ್ಲ ಶಿಶ್ಯರೂ..
ಧನ ಕನಕ ತಂದು ನೆರವಾದರು.
ಬಡ ಕಂದ,
“ಗುರುಗಳೇ..
ನಾನೇನು ತರಲಿ..?”
“ಜೋಳಿಗೆ ದಾಸಯ್ಯ,
ನೀನೆನು ತರಬಲ್ಲೆ..?!”
“ಇದು ಸಾಮಾನ್ಯವಾದ ಯಜ್ಞವಲ್ಲ, ಸ್ವತಃ ಭಗವಂತನ ಒಲುಮೆಗಾಗಿ
ಎಲ್ಲ ತಯಾರಿ.ಕಾಸು ಕೂಡಿಟ್ಟು ಮಾಡಿದ್ದೇನೆ..
ಉಣ್ಣಲು ಬಾ..
 ಹೊಟ್ಟೆಗಾದರೂ ಅಂದು ಸರಿಯಾಗಿ ತಿನ್ನು..”
ಆಸೆಗೆ ತಣ್ಣೀರು ಬಿದ್ದರೂ ಆಸೆ ಬೀಳಲಿಲ್ಲ.!
ಮಗು ಸಂಭ್ರಮದಿಂದ ಕಣ್ಣು ಬಿಟ್ಟು ತಯಾರಿಯನ್ನು ನೋಡುತ್ತ ನಿಂತಿತ್ತು
“ಗುರುಗಳೆ..
ನಾನೂ.. ಎನಾದರೂ ತರುತ್ತೇನೆ.
ಭಗವಂತನ ಆಶೀರ್ವಾದ ನನಗೂ ಬೇಕು ಗುರುಗಳೆ..
ಹೇಳಿ..
ನಾನೇನು ತರಲಿ..?”
ಮುಗ್ಧ ಮನದ ಕಾಟಕ್ಕೆ
ಗುರು ಸೋತು..
“ಒಂದು ಲೋಟ ಹಾಲು ತೆಗೆದುಕೊಂಡು ಬಾ..ಸಾಕು..ನಡೆ..”
ಯಜ್ಞದ ದಿನ ಬಂದಾಯ್ತು..
ಅಮ್ಮಾ ..ಇಂದು ಹಾಲು ಬೇಕು.
ಗುರುಗಳಿಗೆ ಹೇಳಿರುವೆ.
ನಮಗೂ  ಭಗವಂತ ಒಲಿಯಲಿ.
ಮಗನೇ ..
ನಮ್ಮ ಮನೆಯಲ್ಲಿ ಎಲ್ಲಿ ಯಜ್ಞಕ್ಕೆ ಬಳಸಲು ಹಾಲಿದೆ..?
ಇಲ್ಲ ಮಗೂ..
ನೀನು ಬರಿ ದುಃಖ ಮಾತ್ರ ಹೇಳುವೆ..
ನಾನು ಅಣ್ಣನನ್ನು ಕೇಳುತ್ತೇನೆ.
ತಾಯಿ ನಸುನಕ್ಕಳು.
ಕಳೆಯಿತು ತನ್ನ ಸಮಸ್ಯೆ ಎಂಬುದಾಗಿ…
ಮಗು ಅಣ್ಣನನ್ನು ಕೇಳಿ
ಒಂದು ಲೋಟದಷ್ಟು
ಹಾಲು ಪಡೆದು ಗುರುಗಳ ಬಳಿ ಹೋಗಿದ್ದಾನೆ‌.
“ಗುರುಗಳೇ..
ಎಲ್ಲಿ ಇಡಲಿ ಹಾಲನ್ನು ?”
ಸಂತೋಷ, ಸಂಭ್ರಮ..
ತಾನೂ ಭಾಗಿ ಆಗಿರುವುದಕ್ಕೆ.
“ಅಯ್ಯೊ ಇವನೊಂದು..
ಒಂದು ಲೋಟ ಹಾಲನ್ನ
ಹೊನ್ನು ಅನ್ನುವವನಂತೆ
ಕಾಡುತ್ತಾನೆ..”
“ಸುರಿಯಯ್ಯಾ..
ಅಲ್ಲಿದ್ದ  ತಂಬಿಗೆಯಲ್ಲಿ..”
ಹತ್ತು ಹಲವು ಬಾರಿ..
ಕೇಳಿದ ನಂತರ ಗುರುವಿನ ಶಿಷ್ಯಕೋಟಿಗಳಲ್ಲೊಬ್ಬ
ಹೇಳಿದ್ದ.
ಮಗು ಪರಾಕ್ರಮ ಸಾಧಿಸಿದ ತ್ರಿವಿಕ್ರಮನಂತೆ ಮನ ತುಂಬಿ ಹಾಲನ್ನ  ಸುರಿಯುತ್ತಲಿದ್ದ,
ಸುರಿಯುತ್ತಲೇ…ಇದ್ದ.
ತಂಬಿಗೆ ತುಂಬಿ ತುಳುಕಿತ್ತು..!
ಬಿಂದಿಗೆಯೂ ತುಂಬಿ ಆಯ್ತು..!!
ಕೊಪ್ಪರಿಗೆ ತರ ಹೋದರು..
ಜನ ಮೂಕ ವಿಸ್ಮಯದಿಂದ ಕಾಣುತ್ತಿದ್ದರು..
ಗುರುಗಳು ದೌಡಾಯಿಸಿ ಬಂದು,
“ಮಹಾನುಭಾವ.. ಯಾರು ನೀನು..?!
ನಿನಗ್ಯಾರು ಕೊಟ್ಟರು ಈ  ಕ್ಷೀರ ಸಾಗರವನ್ನ..!”
ಬಿಗಿದಪ್ಪಿದರು..ಮಗುವನ್ನ..
ಅಣ್ಣ ಗುರುಗಳೇ..ನನ್ನಣ್ಣ‌…
ಗೋವಿಂದಾ..!
“ಎಲ್ಲಿರುವನೋ..ಆತ..
ನಿನ್ನ ಅಣ್ಣ..
ಕರೆದು ತಾ ಮಗು..”
ಪುಟ್ಟ  ಕಂಗಳು ಕಾತರವಾಯ್ತು..
“ಇಲ್ಲಿಲ್ಲ ಗುರುಗಳೇ..
ಕಾಡನಲ್ಲಿ..
ದಿನವೂ ನನ್ನೊಡನೆ ಬರುವನು,
ನನಗೆ ಭಯವಾಗದಂತೆ.”
ನಡೆ ತೋರಿಸು ನಿನ್ನಣ್ಣನನ್ನು.
“ಅದೋ.. ಈ ಕಾನನದಲ್ಲಿ…”
“ಅಣ್ಣಾ..ಗುರುಗಳು ಬಂದಿದ್ದಾರೆ.
ಬಾ..ಅಣ್ಣ..
ನಿನ್ನನ್ನು ನೋಡ ಬೇಕಂತೆ
ಬಾ ಅಣ್ಣಾ..”
ತಮ್ಮನನ್ನು ಸುಳ್ಳುಗಾರನನ್ನಾಗಿ
ಮಾಡಲು ಮನಸ್ಸಿಲ್ಲದ
ಅಣ್ಣ ಬಂದ.
“ಇದೋ ನೋಡಿ ಗುರುಗಳೆ ಇವನೇ..
ನನ್ನ ಅಣ್ಣ.. ಗೋವಿಂದ..”
ಗುರುಗಳ ನೋಟಕ್ಕೆ ನಿಲುಕದ
ಅಣ್ಣ ಮಗುವನ್ನ ಕೈ ಹಿಡಿದು ನಿಂತಿದ್ದ.
ಎಲ್ಲಿಯೂ ಕಾಣದಾಗಿದ್ದಾನೆ ನಿನ್ನ ಅಣ್ಣ.
ನನಗೆಲ್ಲಿಯೂ ಕಾಣನು ಅವನು..
ಸುಳ್ಳಾಡಿದೆಯಾ ಮಗು..?!
“ಇಲ್ಲ ಗುರುವರ್ಯಾ..
ಇದೋ ಅಣ್ಣಾ..
ಮಾತಾಡು ಅಣ್ಣ
ನೀನು ಏಕೆ ಅವರಿಗೆ ಕಾಣಲಾರೆ..!”
ಗುರುಗಳ  ಒಳಗಣ್ಣು
ತೆರೆಸಿದ್ದ ಭಕ್ತ ಬಾಲಕ
ಕೈ ಮುಗಿದು..
ನೆಲಕ್ಕೊರಗಿ  ಶಿರ ಸಾಷ್ಟಾಂಗ ನಮಸ್ಕರಿಸಿ..
ದೀನನಾಗಿ ಬೇಡಿದ್ದ.
“ಪಾಪಿ ನಾನು ..
ನನ್ನದು ಮಾಯೆಯ ಜಗತ್ತು ಭಗವಂತಾ.. ದಯೆ ತೋರು..!
ಈ ವಿದ್ಯೆಯನ್ನು ಇನ್ನು ದಾನಕ್ಕಾಗೇ ಬಳಸುವೆ. ನಿನ್ನ ಚರಣದಾಶ್ರಯ ಬಯಸಿಯೇ ನಾನೀಕಾರ್ಯ ಮಾಡಿದ್ದು..
ಅನುಗ್ರಹಿಸು ತಂದೇ..!”
ಈ ಬಾರಿ.. ಭಗವಂತ ಧ್ವನಿಯಾಗಿದ್ದ.
“ವಿದ್ವಾಂಸರೇ..
ಲೋಕ ಕಲ್ಯಾಣ ನಿಮ್ಮ ಮನದ  ಆಸೆ, ಹಾಗೇ ಆಗಲಿ..
ನಾನು ಎಂಬ ನಿಮ್ಮ  ಭಾವ ಹರಿಯದ ಹೊರತು ನಿನ್ನ ಕಣ್ಣಗೆ ನಾ ಕಾಣಲಾರೆ..
ಹಾಗೆಂದು ನಿಮ್ಮ ಒಳಗಣ್ಣ ತೆರೆದು ನೋಡಿ..
ಎಲ್ಲೆಲ್ಲೂ ನಾನೇ ಇರುತ್ತೇನೆ..
ಹಸಿವಿನಲ್ಲಿ, ಸ್ನೇಹದಲ್ಲಿ , ನಿಷ್ಕಲ್ಮಶವಾದ ಪ್ರೀತಿಯಲ್ಲಿ,
ಅಣು, ಕಣ, ಸಕಲ ಜೀವಿಗಳಲ್ಲಿ..
ನನ್ನನ್ನು ನೀವು ಕಾಣಬಹುದು.
ಭಗವಂತನ ವಾಣಿ ಬಾಲಕನ ಜೀವನದಲ್ಲಿ ಬದಲಾವಣೆ ತಂದಿತ್ತು.
ಊರೇ ಕೊಂಡಾಡುವ ಕಂದ ಅವನಾಗಿದ್ದ
ತಾಯಿ, ಮಗನ ಕಷ್ಟ ಕಳೆದಿತ್ತು..
ಈ ಕತೆ  ಓದಿದಾಗಿಂದ  ಗುಡಿಯಲ್ಲಿ  ಮಾತ್ರ ದೇವರು ಕಾಣುವುದು ನಿಂತಿದೆ.
ಹಲವು ಬಾರಿ ಕೃಷ್ಣನ  ದರ್ಶನ  ಆಗಿದೆ ಅಂತ ನಂಬುತ್ತೇನೆ,
ತಿಳಿಯಾದ ಸ್ನೇಹದಲ್ಲಿ,
ಆಪದ್ಭಾಂದವರ ರೂಪದಲ್ಲಿ,
ಮನಸ್ಸಿಂದ ಬಂದ ಪ್ರೀತಿ ಮಾತುಗಳಲ್ಲಿ ! ಇಷ್ಟ, ಕಷ್ಟಗಳಿಗೆ ಕೃಷ್ಣಾ.. ನಿನ್ನನ್ನು  ನೆನೆಯುತ್ತೇನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button