*ಕೃಷ್ಣ, ಕಾವೇರಿ, ಮಹದಾಯಿ ವಿಚಾರ; ಶೀಘ್ರದಲ್ಲಿಯೇ ಸರ್ವಪಕ್ಷ ನಿಯೋಗದಿಂದ ಪ್ರಧಾನಿ ಮೋದಿ ಭೇಟಿ; ಡಿಸಿಎಂ ಮಾಹಿತಿ*
ಪ್ರಗತಿವಾಹಿನಿ ಸುದ್ದಿ; ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಆದಷ್ಟು ಬೇಗ ಜಾರಿ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಅದಕ್ಕಾಗಿ ಈ ಭಾಗದ ಸಂಸದರು, ಮಂತ್ರಿಗಳು ಸೇರಿದಂತೆ ಎಲ್ಲರೂ ಇಂದು ಚರ್ಚೆ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಜಯಪುರದ ಆಲಮಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ಮುಖ್ಯಮಂತ್ರಿಗಳು ಆಲಮಟ್ಟಿಯಲ್ಲಿ ಗಂಗೆಪೂಜೆ ಮಾಡಿ ಈ ಭಾಗದ ಎರಡು ಜಿಲ್ಲೆಗಳ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಮಂತ್ರಿಗಳ ಸಭೆ ನಡೆಸಿದ್ದಾರೆ. ಎರಡೂವರೆ ಗಂಟೆಗಳ ಕಾಲ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಆದ್ಯತೆ ಮೇರೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಬೇಕು ಎಂದು ಚರ್ಚೆ ಮಾಡಲಾಗಿದೆ ಎಂದರು.
ನೋಟಿಫಿಕೇಶನ್, ರೈತರ ಪುನರ್ ವಸತಿ ಸಮಸ್ಯೆ, ರೈತರ ಜಮೀನಿಗೆ ನೀರು ಹೋಗಲು ಇರುವ ಸಮಸ್ಯೆ ಸೇರಿದಂತೆ ಎಲ್ಲಾ ತಾಂತ್ರಿಕ ವಿಚಾರಗಳ ಬಗ್ಗೆ ಮುಖ್ಯಮಂತ್ರಿಗಳು ಚರ್ಚೆ ಮಾಡಿದ್ದಾರೆ. ಎಲ್ಲಾ ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕೃಷ್ಣ ಮೇಲ್ದಂಡೆ, ಕಾವೇರಿ, ಮಹದಾಯಿ ವಿಚಾರವಾಗಿ ಸರ್ವಪಕ್ಷ ನಿಯೋಗ ಭೇಟಿಗೆ ಸಮಯ ಕೋರಿ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಭೇಟಿಯ ದಿನಾಂಕ ಕುರಿತು ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ದಿನಾಂಕ ನಿಗದಿ ಬಳಿಕ ಎಲ್ಲರೂ ಒಟ್ಟಾಗಿ ಹೋಗುತ್ತೇವೆ ಎಂದರು.
ಒಂದು ವಾರದಲ್ಲಿ ಆದ್ಯತೆ ಪಟ್ಟಿ ತಯಾರು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅನುದಾನ ಎಷ್ಟು ಬೇಕಾಗಲಿದೆ ಎಂದು ಅಧಿಕಾರಿಗಳು ತಿಳಿಸಲಿದ್ದಾರೆ. ನಂತರ ಹಣಕಾಸು ಇಲಾಖೆ, ಕಂದಾಯ ಇಲಾಖೆ ಜತೆಗೂಡಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ