*ಕ್ಷತ್ರಿಯರಿಗೆ ಕತ್ತಿ ಹಿಡಿದೂ ಗೊತ್ತಿದೆ, ಜ್ಞಾನದ ಕತ್ತಿ ಹಿಡಿದೂ ಗೊತ್ತಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕ್ಷತ್ರಿಯರಿಗೆ ಯುದ್ಧಕ್ಕಾಗಿ ಕತ್ತಿ ಹಿಡಿದೂ ಗೊತ್ತಿದೆ, ಜ್ಞಾನದ ಕತ್ತಿ ಹಿಡಿದೂ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಕರ್ನಾಟಕ ಕ್ಷತ್ರಿಯ ಒಕ್ಕೂಟದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಕ್ಷತ್ರಿಯ ಸಮಾಜದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಕ್ಷತ್ರಿಯ ಸಮಾಜ ಇಲ್ಲದಿದ್ದರೆ ಭಾರತೀಯರು ಒಗ್ಗಟ್ಟಿನಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ಹಿಂದೂ ಸಮಾಜ ಸುರಕ್ಷಿತವಾಗಿರಲು ಕ್ಷತ್ರಿಯ ಸಮಾಜ ಕಾರಣ ಎಂದು ಮುಖ್ಯಮಂತ್ರಿಗಳು ನುಡಿದರು. ಶ್ರೀರಾಮ, ಕೃಷ್ಣ, ಸಾಮ್ರಾಟ್ ಅಶೋಕ, ರಾಣಾ ಪ್ರತಾಪ್ ಸಿಂಗ್ , ಶಿವಾಜಿ ಮಹಾರಾಜ್ ಮೊದಲಾದ ನೂರಾರು ಧೀರರು ಶೂರರು ಆಳಿದ್ದಾರೆ. ಅಂತೆಯೇ ಸ್ವಾಮಿ ವಿವೇಕಾನಂದರೂ ಕ್ಷತ್ರಿಯರು. ಕ್ಷತ್ರಿಯರಿಗೆ ಜ್ಞಾನದ ಕತ್ತಿಯನ್ನೂ ಹಿಡಿಯಲು ಗೊತ್ತಿದೆ ಎಂದು ಜಗತ್ತಿಗೇ ತೋರಿಸಿಕೊಟ್ಟರು ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದಿನ ಸಮಾವೇಶವು ಕ್ಷತ್ರಿಯ ಸಮಾಜದ 38 ಪಂಗಡಗಳನ್ನು ಒಗ್ಗೂಡಿಸಿರುವುದು ಸ್ವಾಗತಾರ್ಹ. ಕ್ಷತ್ರಿಯ ಸಮಾಜದವರು ವಿವಿಧ ಕುಲಕಸುಬುಗಳಲ್ಲಿ ತೊಡಗಿಕೊಂಡಿದ್ದು, ತಮ್ಮ ಕಸುಬನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಮುಂದಿನ ಜನಾಂಗಕ್ಕೆ ಉತ್ತಮ ಭವಿಷ್ಯ ರೂಪಿಸುವ ಕಾಳಜಿ ಹೊಂದಿದ್ದಾರೆ. 21ನೇ ಶತಮಾನದಲ್ಲಿ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಮುಂದುವರೆಯಬೇಕು ಎಂದು ತಿಳಿಸಿದರು.
ಕ್ಷತ್ರಿಯ ಸಮಾಜಗಳ ಒಕ್ಕೂಟವು ಸಣ್ಣ ಪುಟ್ಟ ಪಂಗಡಗಳ ಅಭ್ಯುದಯ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಕಾನೂನು ರೀತ್ಯ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕ್ಷತ್ರಿಯರ ನಿಗಮ ಸ್ಥಾಪಿಸುವ ಕುರಿತಂತೆ ಪರಿಶೀಲಿಸಲಾಗುವುದು. ಕ್ಷತ್ರಿಯ ಸಮಾಜದ ಸಮುದಾಯ ಭವನಕ್ಕೆ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕ್ಷತ್ರಿಯರು ಸದಾ ದೇಶಪ್ರೇಮಿಗಳಾಗಿದ್ದರು. ಭಾರತದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯ ಸಂದರ್ಭದಲ್ಲಿ ಕ್ಷತ್ರಿಯ ವಂಶಗಳ ನೂರಾರು ರಾಜರು ತಮ್ಮ ರಾಜತ್ವವನ್ನು ತೊರೆದು ಭಾರತ ಒಕ್ಕೂಟದ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳ್ಳುವ ಬಹುದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು.
ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ಸಂಸದ ಪಿ.ಸಿ. ಮೋಹನ್ ಹಾಗೂ ಕ್ಷತ್ರಿಯ ಸಮುದಾಯದ ಮುಖಂಡರು ಭಾಗವಹಿಸಿದ್ದರು.
*ಈ ವಿಚಾರದಲ್ಲಿ ಕಾಂಪ್ರಮೈಸ್ ಆಗಲ್ಲ ಎಂದ ಮಾಜಿ ಸಿಎಂ ಯಡಿಯೂರಪ್ಪ*
https://pragati.taskdun.com/b-s-yedyurappabelagavividhanasabha-election/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ