*ಬಿಜೆಪಿ ನಾಯಕರ ಜತೆ ಕುಮಾರಸ್ವಾಮಿ ಸಮಾಲೋಚನೆ : ಯುಡಿಯೂರಪ್ಪ, ವಿಜಯೇಂದ್ರ, ಆಶೋಕ್, ಬೊಮ್ಮಾಯಿ ಭಾಗಿ*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಎರಡೂ ಪಕ್ಷಗಳ ಮೈತ್ರಿ, ವಿಧಾನ ಪರಿಷತ್ʼನ 6 ಸ್ಥಾನಗಳ ಚುನಾವಣೆ, ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸೇರಿ ಹಲವಾರು ವಿಷಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್ ನಾಯಕರ ತಂಡವು ರಾಜ್ಯ ಬಿಜೆಪಿ ನಾಯಕರ ಜತೆ ಮಹತ್ವದ ಚರ್ಚೆ ನಡೆಸಿತು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಜಾತ್ಯತೀತ ಜನತಾದಳದ ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ಭೋಜೆಗೌಡರು, ಕೆ.ಎ.ತಿಪ್ಪೇಸ್ವಾಮಿ ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಭಾಗಿಯಾಗಿದ್ದರು.
ಹಾಗೆಯೇ ಬಿಜೆಪಿ ವತಿಯಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು, ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರುಗಳು ಭಾಗವಹಿಸಿದ್ದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು; ಯಡಿಯೂರಪ್ಪ ಅವರ ಮನೆಯಲ್ಲಿ ಎರಡೂ ಪಕ್ಷಗಳ ಪ್ರಮುಖ ನಾಯಕರು ಮಾತನಾಡಿದ್ದೇವೆ. ಪ್ರಥಮ ಹಂತದಲ್ಲಿ ಮೊದಲ ಸಭೆ ಮಾಡಿದ್ದೇವೆ. ಮುಂದೆ ವಿಧಾನ ಪರಿಷತ್ ಉಪ ಚುನಾವಣೆ ಇದೆ. ಅಭ್ಯರ್ಥಿ ಆಯ್ಕೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ʼಗೆ ಮಾಹಿತಿ ನೀಡುತ್ತೇವೆ. ಮುಂದಿನ ಲೋಕಸಭೆ ಚುನಾವಣೆಗೆ ಇಲ್ಲಿಂದಲೇ ಸಂದೇಶ ಕೊಡಲಿದ್ದೇವೆ. ಮೋದಿ ಅವರ ಕೈ ಬಲಪಡಿಸಲು ಒಟ್ಟಾಗಿ ಹೋಗುತ್ತೇವೆ. ರಾಜ್ಯದಲ್ಲಿ ಕೆಟ್ಟ ಸರ್ಕಾರ ಇದೆ, ಅದು ತೊಲಗಬೇಕು ಎಂದರು.
ರಜೆ ಘೋಷಣೆಗೆ ಆಗ್ರಹ:
ನಾವು ಕೂಡ ಅಯೋಧ್ಯೆಗೆ ಹೋಗುತ್ತೇವೆ. ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮಾಡುವ ದಿನ, ಅಂದರೆ ಸೋಮವಾರ ರಾಜ್ಯ ಸರಕಾರ ರಜೆ ಘೋಷಣೆ ಮಾಡಬೇಕು ಎನ್ನುವುದು ಜನರ ಭಾವನೆ. ಆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆ ಮಾಡಬೇಕು ಎನ್ನುವುದು ಎಲ್ಲರ ಆಕಾಂಕ್ಷೆ. ಇದು ನಾಡಿನ ಕಾರ್ಯಕ್ರಮ, ದೇಶದ ಕಾರ್ಯಕ್ರಮ. ಹೀಗಾಗಿ ರಜೆ ಘೋಷಣೆ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಈಗಾಗಲೇ ಅನೇಕ ರಾಜ್ಯಗಳು ರಜಾ ಘೋಷಣೆ ಮಾಡಿವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಮಾಧ್ಯಮಗಳ ಜತೆ ಮಾತನಾಡುವ ಸಮಯದಲ್ಲಿಯೂ ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಅಶೋಕ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಎಲ್ಲಾ ನಾಯಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ