Kannada NewsKarnataka NewsLatest

*ವಿದ್ಯುತ್ ಅವಘಡ*: *20 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ*

ಪ್ರಗತಿವಾಹಿನಿ ಸುದ್ದಿ: ಜಿಲ್ಲೆಯಲ್ಲಿ ವಿದ್ಯುತ್ ತಂತಿಗಳ ಸ್ಪರ್ಶದಿಂದ ಕಬ್ಬಿನ ಬೆಳೆ ಸುಟ್ಟು ರೈತರು ಅಪಾರ ನಷ್ಟ ಅನುಭವಿಸುತ್ತಿದ್ದು, ತಕ್ಷಣವೇ ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ.


ಹಾವೇರಿ ತಾಲೂಕು ಸಂಗೂರ ಗ್ರಾಮದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 20 ಎಕರೆ ಕಬ್ಬಿನ ಬೆಳೆ ಸುಟ್ಟುಹೋಗಿದೆ. ಬಸವಪ್ಪಣ್ಣೆಪ್ಪ ದೇವಗೇರಿ, ಚಂದ್ರಪ್ಪ ದೇವಗೇರಿ, ಶಿವಪ್ಪ ದೇವಗೇರಿ, ಬಸವರಾಜಪ್ಪ ದೇವಗೇರಿ, ನಾಗೇಶಪ್ಪ ಘಂಟಿ, ಸಿದ್ದಪ್ಪನವರ, ರವಿ ಘಂಟಿ, ಶಿವಾನಂದಪ್ಪ ಘಂಟಿ ಹಾಗೂ ಹನುಮಂತಪ್ಪ ಘಂಟಿ ಸಿದ್ದಪ್ಪನವರ ಅವರಿಗೆ ಸೇರಿದ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ.


ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ ವಿದ್ಯುತ್ ಅವಘಡಗಳಿಂದ 80ಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ಹಾನಿಗೀಡಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ ಒಟ್ಟಾರೆ 200 ಎಕರೆಗೂ ಅಧಿಕ ಕಬ್ಬು ಸುಟ್ಟುಹೋಗಿದೆ ಎಂದು ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.


ಹಳೆಯ ವಿದ್ಯುತ್ ತಂತಿಗಳಿಂದ ಅನಾಹುತ: ರೈತರ ಬದುಕಿಗೆ ಬೆಂಕಿ
ಹೊಲಗಳಲ್ಲಿ 30ರಿಂದ 40 ವರ್ಷಗಳ ಹಿಂದೆ ಅಳವಡಿಸಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹಳೆಯದಾಗಿ, ಜೋತುಬಿದ್ದಿವೆ. ಗಾಳಿ ಬೀಸಿದಾಗ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಕಬ್ಬಿನ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರು ವರ್ಷಪೂರ್ತಿ ಬೆವರು ಸುರಿಸಿ ಬೆಳೆದ ಬೆಳೆ ಕಣ್ಣೆದುರೇ ಸುಟ್ಟುಹೋಗುತ್ತಿದ್ದು, ಅವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.


ಹೆಸ್ಕಾಂ ಅಧಿಕಾರಿಗಳು ತಕ್ಷಣವೇ ಜಿಲ್ಲೆಯಾದ್ಯಂತ ಹಳೆಯ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಪರಿಶೀಲಿಸಿ, ಜೋತುಬಿದ್ದಿರುವ ತಂತಿಗಳನ್ನು ಸರಿಪಡಿಸಬೇಕು. ಇಂತಹ ಅವಘಡಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈಗಾಗಲೇ ಬೆಳೆ ಕಳೆದುಕೊಂಡ ರೈತರಿಗೆ ವಿಳಂಬ ಮಾಡದೆ ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.


ಬರಗಾಲದ ನಡುವೆ ಕಬ್ಬು ಬೆಳೆಗಾರರಿಗೆ ಸಂಕಷ್ಟ
ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆರೆ-ಕಟ್ಟೆಗಳಲ್ಲಿ ನೀರಿಲ್ಲದೆ, ಕೊಳವೆಬಾವಿಗಳೂ ಬತ್ತುವ ಸ್ಥಿತಿಗೆ ತಲುಪಿವೆ. ಇಂತಹ ಸಂಕಷ್ಟದ ನಡುವೆ ರೈತರು ಕಷ್ಟಪಟ್ಟು ಬೆಳೆದ ಕಬ್ಬಿಗೆ ಬೆಂಕಿ ತಗುಲಿ ನಾಶವಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಶಿಡ್ಲಾಪುರ ಹೇಳಿದ್ದಾರೆ.


ಸಿಹಿ ನೀಡುವ ಕಬ್ಬು ಬೆಳೆಗಾರರ ಬದುಕಿಗೆ ಸರ್ಕಾರಗಳು ಕಹಿ ಅನುಭವ ನೀಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ರೈತರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ.


ಪ್ರತಿ ಎಕರೆಗೆ ₹30 ಸಾವಿರ ಬರ ಪರಿಹಾರಕ್ಕೆ ಆಗ್ರಹ
ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿಗೆ ಎಸ್‌ಎಪಿ ರೂಪದಲ್ಲಿ ಒಂದು ಸಾವಿರ ರೂ. ಹೆಚ್ಚುವರಿ ದರ ನೀಡಬೇಕು. ಬರದಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪ್ರತಿ ಎಕರೆಗೆ 30 ಸಾವಿರ ರೂ. ಬರ ಪರಿಹಾರ ಘೋಷಿಸಬೇಕು. ಬೆಳೆ ವಿಮೆ ಪಾವತಿಸಿರುವ ಅರ್ಹ ರೈತರಿಗೆ ವಿಮೆ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡದೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕಬ್ಬು ಬೆಳೆಗಾರರು ನ್ಯಾಯಯುತ ದರಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.


ಎಂಎಸ್‌ಪಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಮುಂದಾಗಲಿ
ಕೇಂದ್ರ ಸರ್ಕಾರ ಕಬ್ಬಿನ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಹೆಚ್ಚಿಸಬೇಕು. ಇದರಿಂದ ಕಬ್ಬು ಬೆಳೆಗಾರರಿಗೆ ದೊರೆಯುವ ನ್ಯಾಯಯುತ ದರ ಹೆಚ್ಚಳಕ್ಕೂ ನೆರವಾಗಲಿದೆ ಎಂದು ಶಿಡ್ಲಾಪುರ ಅಭಿಪ್ರಾಯಪಟ್ಟಿದ್ದಾರೆ.


ದೇಶದ ಆಹಾರ ಸಚಿವರಾದ ಪ್ರಹ್ಲಾದ ಜೋಶಿ ಅವರು ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿಯಾಗಿ, ಅವರ ಸಂಕಷ್ಟಗಳನ್ನು ಆಲಿಸಬೇಕು. ಎಂಎಸ್‌ಪಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.


ದೇಶಕ್ಕೆ ಅನ್ನ ನೀಡುವ ಅನ್ನದಾತರು ಬೀದಿಗೆ ಬೀಳುವ ಪರಿಸ್ಥಿತಿಯನ್ನು ಸರ್ಕಾರಗಳು ನಿರ್ಮಿಸಬಾರದು. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯುವಂತೆ ಕ್ರಮ ಕೈಗೊಳ್ಳುವುದರ ಜೊತೆಗೆ, ವಿದ್ಯುತ್ ಅವಘಡಗಳಿಂದ ಬೆಳೆ ಕಳೆದುಕೊಂಡ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button