Latest

ಮತ್ತೊಮ್ಮೆ ಡಿಕೆಶಿ-ಶ್ರೀರಾಮುಲು ಜಿದ್ದಾಜಿದ್ದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ಕಳೆದ ವರ್ಷ ನಡೆದ ಬಳ್ಳಾರಿ ಲೋಕಸಭಾ ಉಪಚುನಾವಣೆ ರೀತಿಯಲ್ಲೇ ಇದೀಗ ಕುಂದಗೋಳ ವಿಧಾನಸಭಾ ಉಪಚುನಾವಣೆ ಕಣ ಕೂಡ ರಂಗೇರುತ್ತಿದೆ. ಅಲ್ಲಯಂತೆ ಇಲ್ಲೂ ಮಾಜಿ ಸಚಿವ ಶ್ರೀರಾಮುಲು ಹಾಗೂ ಹಾಲಿ ಸಚಿವ ಡಿ.ಕೆ.ಶಿವಕುಮಾರ ಮಧ್ಯೆ ತೀವ್ರ ಮಾತಿನ ಸಮರ, ವಯಕ್ತಿಕ ಜಿದ್ದಾಜಿದ್ದಿ ಏರ್ಪಡುವ ಲಕ್ಷಣ ಗೋಚರಿಸುತ್ತಿದೆ.

ಶ್ರೀರಾಮುಲು ಮಾತಿನ ಭರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಸ್.ಶಿವಳ್ಳಿ ಕುರಿತು ಆಡಿದ ಮಾತುಗಳು ಕಾಂಗ್ರೆಸ್, ಅದರಲ್ಲೂ ಶಿವಕುಮಾರ ಅವರನ್ನು ಕೆರಳಿಸಿದೆ. 

ಪೌರಾಡಳಿತ ಸಚಿವರಾಗಿದ್ದ ಶಿವಳ್ಳಿ ಅವರ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ ಎಂದ ಶ್ರೀರಾಮುಲು ಅವರ ಹೇಳಿಕೆಯ ವಿರುದ್ಧ ಕುಂದಗೋಳ ಚುನಾವಣಾಧಿಕಾರಿಗೆ ದೂರು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. 

“ಸಿಎಸ್ ಶಿವಳ್ಳಿ ಒಬ್ಬ ಒಳ್ಳೆಯ ವ್ಯಕ್ತಿ. ಆದರೆ ಅವರ ಸಾವಿಗೆ ಈ ಕಾಂಗ್ರೆಸ್ ಮೈತ್ರಿ ಸರ್ಕಾರವೇ ಕಾರಣ. ಅವರಿಗೆ ಮೈತ್ರಿ ಸರಕಾರದಲ್ಲಿ ನೀಡಲಾದ ಕಿರುಕುಳ ಮತ್ತು ಹೇರಿದ ಒತ್ತಡದಿಂದಲೇ ಅವರು ಹೃದಯಾಘಾತದಿಂದ ಮೃತರಾದರು” ಎಂದು  ಶ್ರೀರಾಮುಲು ಹೇಳಿದ್ದರು.

ಶ್ರೀರಾಮುಲು ಅವರ ವಿರುದ್ಧ ಕ್ರಮ ಕೈಗೊಳ್ಳಲು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನಿರ್ಧರಿಸಿದ್ದು, ಕುಂದಗೋಳ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಸಂಸದ ಉಗ್ರಪ್ಪ ಅವರೊಂದಿಗೆ ಚರ್ಚೆ ನಡೆಸಿರುವ ಶಿವಕುಮಾರ, ಶ್ರೀರಾಮುಲು ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. 

ಸಿ ಎಸ್ ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದ್ದು, ಶಿವಳ್ಳಿ  ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರು ಕಾಂಗ್ರೆಸ್ ನಿಂದ,   ಎಸ್‌.ಐ.ಚಿಕ್ಕನಗೌಡ ಅವರು ಬಿಜೆಪಿಯಿಂದ ಕಣದಲ್ಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button