ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ಧಾರವಾಡ – ಬದುಕು ಮೂರಾಬಟ್ಟೆಮಾಡಿ ಸಹಸ್ರಾರು ಕುಟುಂಬಗಳನ್ನು ಅತಂತ್ರಕ್ಕೆ ತಳ್ಳಿ ಮರೆಯಾದ ಮಹಾಮಳೆ ಮತ್ತು ಅದರಿಂದುಂಟಾದ ಭೀಕರ ಪ್ರವಾಹ ಇಂದಿಗೂ ಉತ್ತರ ಕರ್ನಾಟಕದ ಬಹು ಜನರನ್ನು ದುಃಸ್ವಪ್ನವಾಗಿ ಕಾಡುತ್ತಿದೆ.
ಮತ್ತೆ ಬದುಕು ಕಟ್ಟಿಕೊಳ್ಳಲು ಹೆಣಗುತ್ತಿರುವ ಸಂತ್ರಸ್ತರು ನೆರವಿನ ಯಾಚನೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕುಗಳ ಸಾಲಿನಲ್ಲಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಮಸ್ತ ಉದ್ಯೋಗಿ ವೃಂದ ನೆರೆ ಸಂತ್ರಸ್ಥರ ನೆರವಿಗೆ ಧಾವಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಗುರುವಾರ ಬೆಂಗಳೂರಿನಲ್ಲಿ ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ವಾಯ್ ನಾಗೇಶ್ವರ ರಾವ್ ಅವರೊಂದಿಗೆ ಭೇಟಿ ಮಾಡಿದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಪಿ ಗೋಪಿಕೃಷ್ಣ ತಮ್ಮ ಬ್ಯಾಂಕ್ ಸಿಬ್ಬಂದಿಯಿಂದ ಸಂಗ್ರಹಗೊಂಡ ೫೬ ಲಕ್ಷ ರೂಪಾಯಿಗಳಿಗೂ ಮಿಕ್ಕಿದ ಮೊತ್ತವನ್ನು ಪ್ರವಾಹ ದುರಂತ ಪರಿಹಾರಕ್ಕೆ ಸಂಬಂಧಿಸಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.
ಸಮಾಜಮುಖಿ ಕಾರ್ಯ ಶ್ಲಾಘನೆ
ಪರಿಹಾರ ಮೊತ್ತದ ಡಿಡಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಬ್ಯಾಂಕಿನ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು. ರಾಜ್ಯದಲ್ಲಿ ಘಟಿಸಿದ ಅನಿರೀಕ್ಷಿತ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಮಗ್ರ ರಾಜ್ಯ ಒಂದಾಗಿ ನಿಂತಿದ್ದು ತಮಗೆ ಸಂತಸ ನೀಡಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ಪಿ ಗೋಪಿಕೃಷ್ಣ ಮಾತನಾಡಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ತನ್ನನ್ನು ಬ್ಯಾಂಕಿನ ವ್ಯವಹಾರಕ್ಕಷ್ಟೇ ಸೀಮಿತಗೊಳಿಸಕೊಳ್ಳದೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ರಾಷ್ಟ್ರ ಹಾಗೂ ರಾಜ್ಯ ಎದುರಿಸಿದ ಸಂಕಟದ ಸಮಯದಲ್ಲಿ ಬ್ಯಾಂಕು ಮತ್ತು ಅದರ ಸಿಬ್ಬಂದಿ ಸದಾ ಸ್ಪಂದಿಸಿದ್ದಾರೆ ಎಂದು ಗೋಪಿ ಕೃಷ್ಣ ಹೇಳಿದರು.
ಸಮರ್ಪಣಾ ಮನೋಭಾವದ ೩೫೦೦ಕ್ಕೂ ಹೆಚ್ಚಿನ ಸಿಬ್ಬಂದಿ ಬ್ಯಾಂಕಿನ ಪ್ರಗತಿಯ ಹಿಂದಿದ್ದು ಬ್ಯಾಂಕು ಸದಾ ಜನತೆಯೊಂದಿಗೆ ಸಾಗಲಿದೆ ಎಂದ ಅವರು ಸಂತ್ರಸ್ಥರಿಗೆ ಹೊಸ ಬದುಕು ಹಾರೈಸಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಟಿ ಮಣಿವಣ್ಣನ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಶ್ರೀಕಾಂತ ಹೆಗಡೆ, ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ