ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಆರ್ಥಿಕ ರಂಗಕ್ಕೆ ಹೆಚ್ಚಿನ ಚೈತನ್ಯ ತುಂಬುವ ದೃಷ್ಟಿಯಿಂದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ ರಂಗ, ವ್ಯಾಪಾರ ವಹಿವಾಟು, ಗೃಹ ನಿರ್ಮಾಣ, ಕೃಷಿ ಅಭಿವೃದ್ಧಿ ಹೀಗೆ ಆದ್ಯತಾ ವಲಯಕ್ಕೆ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಪಿ ಗೋಪಿ ಕೃಷ್ಣ ತಿಳಿಸಿದರು.
ಅವರು ಬೆಳಗಾವಿಯ ಜವಹಲಾಲ್ ನೆಹರೂ ಮೆಡಿಕಲ್ ಕಾಲೇಜಿನ ಪ್ರಾಂಗಣದಲ್ಲಿ ಪ್ರಾರಂಭವಾದ ಎರಡು ದಿನಗಳ ಗ್ರಾಹಕ ಸಂಪರ್ಕ ಮೇಳದಲ್ಲಿನ ಸಮರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಸಾಲದ ನೆರವಿಲ್ಲದೆ ಆರ್ಥಿಕ ಪ್ರಗತಿ ಸಾಧ್ಯವಾಗದು ಎಂದ ಗೋಪಿ ಕೃಷ್ಣ ಬದಲಾದ ಕಾಲದಲ್ಲಿ ಸಾಲ ಕೇಳುವುದು ಅಭಿವೃದ್ಧಿಯ ಮನೋಭಾವನೆಯೆನಿಸಿಕೊಳ್ಳುತ್ತದೆಯೇ ಹೊರತು ಅಪರಾಧವಾಗುವುದಿಲ್ಲ ಎಂದೂ ಹೇಳಿದರು.
ವಿವಿಧ ಸಾಲ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಬ್ಯಾಂಕು ೯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅಭಿಯಾನವನ್ನು ಹಮ್ಮಿಕೊಂಡು ಕೃಷಿ, ಗೃಹಸಾಲ, ಶೈಕ್ಷಣಿಕ ಸಾಲ, ಸಾರಿಗೆ ವಾಹನ, ವೃತ್ತಿನಿರತರಿಗೆ, ವ್ಯಾಪಾರಿಗಳಿಗೆ ಹೀಗೆ ಅನೇಕ ರಂಗಗಳಿಗೆ ಪ್ರಾಧಾನ್ಯತೆ ನೀಡಲು ಯತ್ನಿಸಲಿದೆ ಎಂದರು.
ನಮ್ಮ ನಡೆ ಗ್ರಾಹಕರೆಡೆಗೆ ಎಂಬ ಶೀರ್ಷಿಕೆಯಲ್ಲಿ ಪ್ರಾರಂಭವಾಗಿರುವ ಮೇಳದಲ್ಲಿ ಬ್ಯಾಂಕು ಬೆಳಗಾವಿ ಜಿಲ್ಲೆಗೆ ಸಂಬಂಧಿಸಿ ಸುಮಾರು ೫೨೭ ಫಲಾನುಭವಿಗಳಿಗೆ ೧೪.೪೭ ಕೋಟಿ ರೂ. ಸಾಲ ಮಂಜೂರಾತಿ ನೀಡಿದೆ ಎಂದೂ ಅವರು ಹೇಳಿದರು.
ಬ್ಯಾಂಕಿನ ಮಳಿಗೆಗೆ ಸುಮಾರು ಐದು ಸಾವಿರಕ್ಕೂ ಮಿಕ್ಕಿದ ಜನ ಭೇಟಿ ನೀಡಿ ಸಾಲ ಯೋಜನೆಗಳ ಕುರಿತಾದ ಸಂಶಯಗಳನ್ನು ಪರಿಹರಿಸಿಕೊಂಡರಲ್ಲದೆ ಸಾಲ ಪಡೆಯುವ ಪ್ರಾತ್ಯಕ್ಷಿಕೆಯನ್ನೂ ಕುತೂಹಲದಿಂದ ವೀಕ್ಷಸಿದರು.
ಈ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕಿನ ಮಹಾ ಪ್ರಬಂಧಕ ಸತೀಶ್ ಕಾಮತ್, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಬೆಳಗಾವಿ ಪ್ರಾದೇಶಿಕ ವ್ಯವಸ್ಥಾಪಕ ಬಿ ಶೇಖರ ಶೆಟ್ಟಿ, ಬೆಳಗಾವಿ ಮುಖ್ಯ ಶಾಖಾ ವ್ಯವಸ್ಥಾಪಕ ಬಾಲಚಂದ್ರ ಶೆಟ್ಟಿ, ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ